Advertisement

ಆಹಾರದಲ್ಲಿ ರಾಸಾಯನಿಕಗಳ ಬಳಕೆಯಿಂದ ಅನಾರೋಗ್ಯ: ಶೋಭಾ ಕರಂದ್ಲಾಜೆ

12:16 PM Apr 24, 2022 | Team Udayavani |

ಉಡುಪಿ: ಪ್ರತಿನಿತ್ಯ ಉಪಯೋಗಿಸುವ ಆಹಾರದಲ್ಲಿ ರಾಸಾಯನಿಕ ವಸ್ತುಗಳ ಹೆಚ್ಚಿನ ಬಳಕೆಯಿಂದ ಕ್ಯಾನ್ಸರ್‌, ಕಿಡ್ನಿರೋಗದಂತಹ ಮಾರಕ ಕಾಯಿಲೆಗಳು ಕಂಡುಬರುತ್ತಿದ್ದು, ಸಾರ್ವಜನಿಕರು ತಮ್ಮ ಅರೋಗ್ಯದ ಕುರಿತಂತೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆಯುಷ್‌ ವಿಭಾಗ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ರೋಟರಿ ಮಿಡ್‌ಟೌನ್‌, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ, 75 ವರ್ಷದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಶನಿವಾರ ನಡೆದ ಉಡುಪಿ ತಾಲೂಕು ಮಟ್ಟದ ಬೃಹತ್‌ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ದೈನಂದಿನ ಬದುಕಿನ ಒತ್ತಡಗಳು ಹಾಗೂ ಬದಲಾದ ಜೀವನಶೈಲಿಯಿಂದ ಅನೇಕ ರೋಗಗಳು ಕಾಡುತ್ತಿದ್ದು, ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆಯಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ನಡೆಯುವ ಆರೋಗ್ಯ ಸಪ್ತಾಹದ ಮೂಲಕ ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ವೈದ್ಯಕೀಯ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲ ಇಲಾಖೆಗಳು ಮತ್ತು ಅವುಗಳ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಬೇಕು ಎನ್ನುವುದು ಮಾನ್ಯ ಪ್ರಧಾನಿಗಳ ಆಶಯವಾಗಿದೆ ಎಂದರು.

ಶಾಸಕ ಕೆ.ರಘುಪತಿ ಭಟ್‌ ಅಧ್ಯಕ್ಷತೆ ವಹಿಸಿ, ಉಡುಪಿಯಲ್ಲಿ 150 ಕೋ.ರೂ. ವೆಚ್ಚದಲ್ಲಿ 250 ಹಾಸಿಗೆಗಳ ಸುಸಜ್ಜಿತ ಹೈಟೆಕ್‌ ಆಸ್ಪತ್ರೆ ನಿರ್ಮಾಣ ವಾಗುತ್ತಿದ್ದು, 200 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನೂ ಸಹ ಸರಕಾರದ ಸುಪರ್ದಿಗೆ ಪಡೆಯಲಾಗುತ್ತಿದೆ. ಪಿಪಿಪಿ ಮಾದರಿಯಲ್ಲಿ ಮೆಡಿಕಲ್‌ ಕಾಲೇಜು ನಿರ್ಮಾಣದ ಬಗ್ಗೆ ಡಿಪಿಆರ್‌ ತಯಾರಿ ನಡೆಯುತ್ತಿದೆ. ಡಿಪಿಆರ್‌ ಪೂರ್ಣಗೊಂಡ ಅನಂತರ ಜಿಲ್ಲೆಯ ಸಾರ್ವ ಜನಿಕರು, ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿ ಗ್ಲೋಬಲ್‌ ಟೆಂಡರ್‌ ಮೂಲಕ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಮೆಡಿಕಲ್‌ ಕಾಲೇಜು, ಜಿಲ್ಲಾಸ್ಪತ್ರೆಯ ಮೂಲಕ ಜಿಲ್ಲೆಯ ಜನತೆಗೆ ಎಲ್ಲ ರೀತಿಯ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಸದಸ್ಯೆ ಲಕ್ಷ್ಮೀ ಭಟ್‌, ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌, ಜಿಲ್ಲಾ ಆಯುಷ್‌ ವೈದ್ಯಾಧಿಕಾರಿ ಡಾ| ಸತೀಶ್‌, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್‌ ಉಪಸ್ಥಿತರಿದ್ದರು. ವಿವಿಧ ಫ‌ಲಾನುಭವಿಗಳಿಗೆ ಆಯುಷ್ಮಾನ್‌ ಕಾರ್ಡ್‌ ಹಾಗೂ ಯು.ಡಿ.ಐ.ಡಿ.ಗಳನ್ನು ವಿತರಿಸಲಾಯಿತು.

Advertisement

ಆರೋಗ್ಯ ಮೇಳದಲ್ಲಿ 20ಕ್ಕೂ ಅಧಿಕ ಉಚಿತ ವೈದ್ಯಕೀಯ ಸೇವೆಗಳು ಮತ್ತು ಯೋಜನೆಗಳ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡಲಾಯಿತು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ನಾಗಭೂಷಣ್‌ ಉಡುಪ ಸ್ವಾಗತಿಸಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ| ವಾಸುದೇವ ಉಪಾಧ್ಯಾಯ ವಂದಿಸಿದರು.

ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಯೋಜನೆಯ ಮೂಲಕ ನಿಗದಿತ ಆಸ್ಪತ್ರೆಗಳಲ್ಲಿ 5 ಲ.ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ಕೇಂದ್ರ ಸರಕಾರವು ಆಯುಷ್‌ ಚಿಕಿತ್ಸೆಯ ಬಗ್ಗೆ ಸಹ ಒತ್ತು ನೀಡಿದೆ. ಜಿಲ್ಲೆಯಲ್ಲಿನ ಅಂಗವಿಕಲರಿಗೆ ಕೇಂದ್ರ ಸರಕಾರದ ಎಲಿಮ್ಕೋ ವತಿಯಿಂದ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next