ವಿಧಾನ ಪರಿಷತ್: ನಿಯಮಬಾಹಿರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟ ಪ್ರಕರಣಕ್ಕೆ ಮರುಜೀವ ಬಂದಿದ್ದು, ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ.
ಮೇಲ್ಮನೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ರಘುನಾಥರಾವ್ ಮಲ್ಕಾಪುರೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯ ಹಾಗೂ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮ (ಎನ್‌ಆರ್‌ಡಿಡಬ್ಲೂಪಿ)ಅಡಿ ಬಳಕೆಯಾಗದೆ ಉಳಿದಿದ್ದ ಅನುದಾನವನ್ನು ಅನಧಿಕೃತ ಖಾತೆಗಳಲ್ಲಿ ಇರಿಸಿದ್ದ ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸಲಾಗುವುದು ಎಂದು ಹೇಳಿದರು.
ಎನ್‌ಆರ್‌ಡಿಡಬ್ಲೂಪಿ ಯೋಜನೆಯಡಿ ಬಳಕೆಯಾಗದೆ ಉಳಿದಿದ್ದ ಅನುದಾನದ ಬಗ್ಗೆ ವರದಿ ಮಾಡಲು 2015ರಲ್ಲಿ ನೇಮಿಸಲಾಗಿದ್ದ ಎಎಫ್ಎಸ್ ಅಧಿಕಾರಿ ಪುನಾಟಿ ಶ್ರೀಧರ್ ನೇತೃತ್ವದ ಸಮಿತಿ, ಇಲಾಖೆಯ ಯಾವುದೇ ಅಧಿಕಾರಿಗಳ ಅನುಮತಿ ಪಡೆಯದೆ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಅನಧಿಕೃತವಾಗಿ 98 ಖಾತೆ ತೆರೆದು 685 ಕೋಟಿ ರೂ.ಇರಿಸುವ ಬಗ್ಗೆ ವರದಿ ನೀಡಿತ್ತು.
ಈ ವರದಿ ಆಧರಿಸಿ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆ ಅಪರ ನಿರ್ದೇಶಕ ಎನ್.ಬಿ. ಶಿವರುದ್ರಪ್ಪ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ಸಮಿತಿಯ ವರದಿ ಮೇರೆಗೆ ಕೆಲ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಯಾರನ್ನೂ ಬಚಾವ್ ಮಾಡುವುದಿಲ್ಲ. ಅಗತ್ಯವಿದ್ದರೆ ಮತ್ತೂಂದು ತನಿಖೆ ನಡೆಸುವುದಾಗಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಲ್ಕಾಪುರೆ, ಈ ಪ್ರಕರಣದಲ್ಲಿ ನೂರಾರು ಕೋಟಿ ರೂ.ಅವ್ಯವಹಾರ ನಡೆದಿದೆ. ರಾಜ್ಯ ಸರ್ಕಾರಕ್ಕೆ ಬಡ್ಡಿಯ ರೂಪದಲ್ಲಿ ಬರಬೇಕಿದ್ದ 284 ಕೋಟಿ ನಷ್ಟವಾಗಿದೆ. ಇಲಾಖೆಯ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ವ್ಯವಸ್ಥಿತವಾಗಿ ಬಡ್ಡಿ ಹಣವನ್ನು ಹಂಚಿಕೊಂಡಿದ್ದಾರೆ. ಆದರೆ, ಕೇವಲ ಇಬ್ಬರು ಅಧಿಕಾರಿಗಳನ್ನು ಹೊಣೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗಿದೆ. ಹೀಗಾಗಿ, ಈ ಪ್ರಕರಣದ ಬಗ್ಗೆ ಕೂಲಂಕುಷ ಚರ್ಚೆ ಆಗಬೇಕು. ಈ ಪ್ರಕರಣದ ತನಿಖೆಗೆ ಸದನ ಸಮಿತಿ ರಚನೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಬಿಜೆಪಿ ಎನ್.ರವಿಕುಮಾರ್ ಸೇರಿದಂತೆ ಇತರ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. ಆಗ ಸಚಿವರು, “ಯಾರನ್ನೂ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಕೋಟ್ಯಂತರ ರೂ.ಲೂಟಿ ಆಗಿದೆ. ಸರ್ಕಾರದ ಅನುಮತಿ ಇಲ್ಲದೆ ಖಾತೆ ತೆರೆದಿರುವ ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸಲಾಗುವುದು’ ಎಂದು ಘೋಷಿಸಿದರು.