Advertisement

ಭೀಮಾ ತೀರದಲ್ಲಿ ಪುಂಡಪೋಕರಿಗಳ ಕಾಟ

05:07 PM May 05, 2020 | Suhan S |

ಜೇವರ್ಗಿ: ತಾಲೂಕಿನ ಕೋನಾಹಿಪ್ಪರಗಿ ಗ್ರಾಮದ ಬಳಿಯ ಭೀಮಾನದಿ ತೀರ ಪುಂಡಪೋಕರಿಗಳ ಗುಂಡು ಪಾರ್ಟಿ, ಪ್ರಣಯ ಪಕ್ಷಿಗಳ ಮೋಜು ಮಸ್ತಿ ಅಡ್ಡೆಯಾಗಿದೆ.

Advertisement

ತಾಲೂಕಿನ ಕೋನಾಹಿಪ್ಪರಗಿ-ಸರಡಗಿ ನಡುವೆ ಭೀಮಾ ನದಿಗೆ ಇತ್ತೀಚೆಗೆ 54 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಕೇಳಗೆ ಕಣ್ಣಾಡಿಸದರೆ ಸಾಕು ಮದ್ಯದ ಖಾಲಿ ಬಾಟಲಿ, ನೀರಿನ ಬಾಟಲ್‌, ಸಿಗರೇಟ್‌ ಪ್ಯಾಕ್‌, ಪ್ಲಾಸ್ಟಿಕ್‌ ಗ್ಲಾಸ್‌, ಲೋಟ, ಇಸ್ಪಿಟ್‌ ಎಲೆಮ ಮಾಂಸದ ತುಂಡುಗಳು ಕಣ್ಣಿಗೆ ಬೀಳುತ್ತವೆ. ಭೀಮಾ ನದಿ ತೀರದಲ್ಲಿ ಕೆಲ ಪುಂಡರು ಮಧ್ಯಪಾನ, ಮಾಂಸ ಸುಟ್ಟು ತಿನ್ನುವುದನ್ನು ಮಾಡುತ್ತಿದ್ದಾರೆ. ಕೆಲವರು ನದಿಯಲ್ಲಿ ಸ್ನಾನ ಮಾಡಿದ ಮೇಲೆ ಬಟ್ಟೆಗಳನ್ನು ಅಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಇದರಿಂದ ಭೀಮಾ ನದಿ ಕಲುಷಿತವಾಗುತ್ತಿದೆ. ಅಲ್ಲದೇ ನದಿ ಪಾತ್ರದಲ್ಲಿಯೇ ಅಡುಗೆ ಮಾಡಿ, ಅಲ್ಲಿಯೇ ಊಟ ಮಾಡಿ ಉಳಿದ ಪದಾರ್ಥವನ್ನು ಬಿಸಾಡಿ ಹೋಗುತ್ತಿದ್ದಾರೆ. ಕೆಲವರಂತೂ ನಿಸರ್ಗ ಕ್ರಿಯೆ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡಲು ಆಹ್ವಾನ ಕೊಟ್ಟಂತಾಗಿದೆ.

ಕಲಬುರಗಿ ನಗರ ಸೇರಿದಂತೆ ವಿವಿಧ ಕಡೆಗಳಿಂದ ಈ ಸೇತುವೆ ಕೆಳಗೆ ಬೇಸಿಗೆ ಕಾಲದಲ್ಲಿ ತಂಪು ವಾತಾವರಣ ಇರುತ್ತದೆ ಎನ್ನುವ ಕಾರಣಕ್ಕೆ ನಿತ್ಯ ಹಲವಾರು ಜನ ಬರುತ್ತಿದ್ದು, ಬಂದವರ ಪೈಕಿ ಕೆಲವರು ಈಜಾಡಿ ವಿಶ್ರಾಂತಿ ಪಡೆದರೇ, ಕೆಲವರು ಮದ್ಯ ಸೇವನೆ ಮಾಡಿ, ಮಾಂಸದ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಮೊದಲೇ ಅಲ್ಪಸ್ವಲ್ಪ ನೀರನ್ನು ಒಡಲಿನಲ್ಲಿ ಇರಿಸಿಕೊಂಡಿರುವ ಭೀಮೆಯಲ್ಲಿ ಈ ರೀತಿಯ ಹೊಲಸು ಮಾಡುವುದರಿಂದ ಜಲಚರಗಳಿಗೆ ಕುತ್ತು ಬಂದೊದಗಿದೆ. ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಜೇವರ್ಗಿ ಹಾಗೂ ಫರತಾಬಾದ ಪೊಲೀಸ್‌ ಠಾಣೆಯಿಂದ ತಲಾ ಒಬ್ಬ ಪೊಲೀಸ್‌ ಪೇದೆಯನ್ನು ನಿಯೋಜಿಸಿ ಭೀಮಾ ನದಿ ದಂಡೆ ಮೇಲೆ ಮೋಜು ಮಸ್ತಿ ನಡೆಸುವ ಪುಂಡಪೋಕರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯಾ ಠಾಣೆಯ ಸಬ್‌ ಇನ್ಸ್ ಪೆಕ್ಟರ್‌ಗಳಿಗೆ ಸೂಚಿಸಲಾಗುವುದು.– ಸಿದರಾಯ ಭೋಸಗಿ, ತಹಶೀಲ್ದಾರ್‌

 

Advertisement

-ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next