Advertisement

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

12:59 AM May 06, 2024 | Team Udayavani |

ಸುರತ್ಕಲ್‌: ಒಂದೆಡೆ ತೀವ್ರವಾದ ಜಲಕ್ಷಾಮವನ್ನು ಎದುರಿಸುತ್ತಿರುವ ರೈತರು ಇದೀಗ ಕೃಷಿಗೆ ಆಸರೆಯಾಗಿದ್ದ ಸೂರಿಂಜೆ ಮೂಡಬೆಟ್ಟು ಬಳಿಯ ಕಿಂಡಿ ಅಣೆಕಟ್ಟು ಕುಸಿತವಾಗಿ ರುವುದರಿಂದ ಮುಂದಿನ ಬಾರಿ ಮಳೆ ನೀರನ್ನು ಹಿಡಿದಿಡುವ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

Advertisement

ಈ ನಡುವೆ ಅಕ್ರಮ ಮರಳುಗಾರಿಕೆಯಿಂದಾಗಿ ಸೂರಿಂಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪುಚ್ಚಾಡಿ ಹಾಗೂ ಶಿಬರೂರು ಕಿಂಡಿ ಅಣೆಕಟ್ಟಿಗೂ ಕಂಟಕ ಎದುರಾಗಬಹುದೇ ಎಂಬ ಆತಂಕ ತಲೆದೋರಿದೆ. ರಾತ್ರಿಯಾಗುತ್ತಿದ್ದಂತೆ ಸಿಕ್ಕ ಸಿಕ್ಕಲ್ಲಿ ಜೆಸಿಬಿ, ಡ್ರೆಜ್ಜಿಂಗ್‌ ಯಂತ್ರ, ದೋಣಿ ಬಳಸಿ ಮರಳು ತೆಗೆದು ಸಾಗಿಸುವ ಕಾರ್ಯ ನಡೆ ಯುತ್ತಿದ್ದು, ಇದರಿಂದ ಕಿಂಡಿಅಣೆಕಟ್ಟುಗಳ ಮೇಲೆ ಬೀಳುವ ದುಷ್ಪರಿಣಾಮವನ್ನು ರೈತರು ಎದುರಿಸುವಂತಾಗಿದೆ.

ನಂದಿನಿ ನದಿಗೆ ಒಟ್ಟು 17 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇದನ್ನು ಕಾಲಕಾಲಕ್ಕೆ ಪರಿಶೀಲಿಸಿ ಸೋರಿಕೆ, ಬಿರುಕು ಮತ್ತಿತರ ಅಪಾಯದ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಗ್ರಾಮ ಪಂಚಾಯತ್‌ ಸಹಯೋಗದಲ್ಲಿ ಮಾಹಿತಿ ಕಲೆ ಹಾಕಿ ನೀಡಬೇಕಿದೆ. ಮಾಹಿತಿ ನೀಡುವ ಕೆಲಸ ಆಗಿದ್ದರೂ ಸೂಕ್ತ ಸಂದರ್ಭದಲ್ಲಿ ಕ್ರಮ ಕೈಗೊಳ್ಳದಿರುವುದು ದುರಂತಕ್ಕೆ ಕಾರಣವಾಗಿದೆ. ಅಣೆಕಟ್ಟಿನ 500 ಮೀಟರ್‌ ಸುತ್ತಮುತ್ತ ಮರಳು ತೆಗೆಯಲು ನಿರ್ಬಂಧವಿದೆ. ಆದರೆ ಮರಳು ಹೆಚ್ಚಾಗಿ ಶೇಖರಣೆಯಾಗುವುದೇ ಇಂತಹ ಅಣೆಕಟ್ಟುಗಳ ಬಳಿ ಎಂಬುದು ಸಾಮಾನ್ಯ ವಿಚಾರ.

ಅಧಿಕಾರಿಗಳ ತಂಡ ಭೇಟಿ
ಅಣೆಕಟ್ಟು ಕುಸಿದ ಸ್ಥಳಕ್ಕೆ ಸಹಾಯಕ ಕಮಿಷನರ್‌ ಹರ್ಷವರ್ಧನ್‌, ತಹಶೀಲ್ದಾರ್‌ ಪ್ರಶಾಂತ್‌ ಪಾಟೀಲ್‌, ನೀರಾವರಿ ಇಲಾಖೆ ಅಧಿಕಾರಿಗಳು, ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ, ಕುಸಿತದ ಕುರಿತಂತೆ ಮಾಹಿತಿ ಕಲೆ ಹಾಕಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲು ನಿರ್ಧರಿಸಲಾಗಿದೆ.

ಅಸ್ಪಷ್ಟ ನೀತಿಯೇ ಅಕ್ರಮಕ್ಕೆ ಕಾರಣ
ಮರಳುಗಾರಿಕೆ ಕುರಿತಂತೆ ಸ್ಪಷ್ಟ ನೀತಿಯಿರದ ಕಾರಣ ಇಂತಹ ಸಮಸ್ಯೆ ಎದುರಾಗುತ್ತಿದೆ. ಮರಳಿನ ಅವಶ್ಯಕತೆಯನ್ನು ನೀಗಿಸುವ ಸಲುವಾಗಿ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆ ನಡೆಯುತ್ತದೆ. ಶಿಬರೂರು, ಪುಚ್ಚಾಡಿ, ದೇಲಂತಬೆಟ್ಟು, ಮಿತ್ತಬೈಲು, ಕೂಳೂರು ಮತ್ತಿತರೆಡೆ ಮರಳುಗಾರಿಕೆ ನಡೆಯುತ್ತಿದೆ ಎಂಬುದು ನಾಗರಿಕರ ಆರೋಪ.

Advertisement

ಮಳೆ ಇಲ್ಲದಿದ್ದರೂ ಕಿಂಡಿ ಅಣೆಕಟ್ಟು ಕುಸಿದಿದೆ. ಅಕ್ರಮ ಮರಳುಗಾರಿಕೆಯಿಂದ ಮಾತ್ರ ಇಂತಹ ಅನಾಹುತ ಸಾಧ್ಯ. ಕ್ರಮ ಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷéವನ್ನು ಅವಗಣಿಸಲಾಗದು. ಕಿಂಡಿ ಅಣೆಕಟ್ಟು ನಿರ್ಮಾಣ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರ ಹಿತಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು. ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿತುಕೊಂಡಿದ್ದೇನೆ.
– ಉಮಾನಾಥ ಕೋಟ್ಯಾನ್‌, ಶಾಸಕರು, ಮೂಲ್ಕಿ-ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next