ಮಂಗಳೂರು: ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಕಂಡುಬಂದಲ್ಲಿ ತಡ ಮಾಡದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸೂಚಿಸಿದರು.
ಮಂಗಳವಾರ ನಡೆದ “ಜಿಲ್ಲಾ ಮರಳು ಸಮಿತಿ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮುದ್ರ ಮತ್ತು ನದಿ ತೀರದಲ್ಲಿ ಸಿಆರ್‌ಝಡ್ ಮರಳುಗಾರಿಕೆ ನಿಷೇಧ ಇರುವುದರಿಂದ ಅಕ್ರಮ ಮರಳು ಗಾರಿಕೆ ಆಗದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಎಚ್ಚರ ವಹಿಸಬೇಕು. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಗಳು ಅಕ್ರಮವಾಗಿ ಮರಳುಗಾರಿಕೆ ಆಗುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
ಅಕ್ರಮ ಮರಳುಗಾರಿಕೆ ಕಂಡು ಬಂದ ತತ್‌ಕ್ಷಣ ಸಂಬಂಧಿಸಿದ ವಾಹನ ಸಂಖ್ಯೆಯ ಆಧಾರದ ಮೇಲೆ ಪೋಲಿಸ್ ಇಲಾಖೆಯಲ್ಲಿ ದೂರು ದಾಖಲಿಸಬೇಕು. ಪ್ರಕರಣಗಳನ್ನು ನಿರ್ಲಕ್ಷಿಸದೆ ತಳಮಟ್ಟಕ್ಕೆ ಹೋಗಿ ಮಾಹಿತಿ ಕಲೆ ಹಾಕಬೇಕು ಎಂದರು.
ಕಂಟ್ರೋಲ್ ರೂಂ ಮೂಲಕ ನಿಗಾ
ತಾಲೂಕು ಮಟ್ಟದಲ್ಲಿ ಇರುವ ಕಂಟ್ರೋಲ್ ರೂಂ ಮೂಲಕ ಮತ್ತು ಸಿಸಿ ಕೆಮರಾ ಮೂಲಕ ಈ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಎಲ್ಲ ತಹಶೀಲ್ದಾರ್‌ಗಳಿಗೆ ಸೂಚಿಸಿದರು.
ಎಸ್‌ಪಿ ಸಿ.ಬಿ. ರಿಷ್ಯಂತ್ ಮಾತನಾಡಿ, ಮರಳು ಕಳ್ಳತನ ಮಾಡುವ ವಾಹನ ಅಥವಾ ದೋಣಿಯನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಬೇಕು. ನಾನ್ ಸಿಆರ್‌ಝಡ್ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದರು.
ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯೆಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ, ಭೂವಿಜ್ಞಾನಿ ಗಿರೀಶ್ ಮೊದಲಾದವರಿದ್ದರು.