Advertisement

ತುಂಗಭದ್ರೆ ಒಡಲಲ್ಲಿ ಅಕ್ರಮ ಮರಳು ಗಣಿಗಾರಿಕೆ

04:35 PM Jun 29, 2018 | Team Udayavani |

ಕಂಪ್ಲಿ: ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ತುಂಗಭದ್ರೆಯ ಒಡಲಿಗೆ ಕನ್ನ ಹಾಕುವ ಮೂಲಕ ಹಗಲಿರುಳೆನ್ನದೆ ಅಕ್ರಮವಾಗಿ ಮರಳು ಸಾಗಿಸುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ.

Advertisement

ಒಂದೆಡೆ ಮರಳು ಸಾಗಾಣಿಕೆದಾರರು ನದಿಯ ಒಡಲು ಬಗೆದಿರುವ ಕಾರಣ ನದಿಯು ತನ್ನ ಸಹಜ ಸೌಂದರ್ಯ ಕಳೆದುಕೊಂಡಿದೆ. ಮತ್ತೂಂದೆಡೆ ಅಂತರ್ಜಲ ಮಟ್ಟ ಕುಸಿಯುವ ಭೀತಿ ಮತ್ತು ನದಿಯಲ್ಲಿನ ಬೃಹತ್‌ ಹೊಂಡಗಳು, ಗುಂಡಿಗಳು ಭವಿಷ್ಯದಲ್ಲಿ ನದಿ ಪಾತ್ರದ ಜನಜಾನುವಾರುಗಳಿಗೆ ಈ ಕಂದಕಗಳು ಕಂಟಕವಾಗಲಿವೆ ಎನ್ನುವ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಒಂದು ವೇಳೆ ಮಳೆ ಬಂದಲ್ಲಿ, ಇಲ್ಲವೇ ನದಿಗೆ ನೀರು ಬಿಡುಗಡೆ ಮಾಡಿದರೆ, ಮರಳಿಗಾಗಿ ಅಗೆದಿರುವ ದೊಡ್ಡ ದೊಡ್ಡ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಈಜಲು ಹೋಗುವವರು, ಮೀನುಗಾರರು, ನೀರು ಕುಡಿಯಲು ಹೋಗುವ ಜಾನುವಾರುಗಳ ಪ್ರಾಣಕ್ಕೆ ಕುತ್ತು ಉಂಟಾಗಲಿದೆ. ಅಲ್ಲದೇ ನದಿ ಪಾತ್ರದಲ್ಲಿ ಉತ್ತರಾದಿ ಕ್ರಿಯೆಗಳನ್ನು ನಡೆಸುವ ವೇಳೆ ಅವಘಡಗಳು ಸಂಭವಿಸುವ ಆತಂಕವೂ ಸಾರ್ವಜನಿಕರನ್ನು ಕಾಡುತ್ತಿದೆ.

ಸಮೀಪದ ಅರಳಿಹಳ್ಳಿ ತಾಂಡಾದ ಹತ್ತಿರ ಈಗಾಗಲೇ ಮರಳಿನ ಸಂಗ್ರಹ ಕೇಂದ್ರ ಆರಂಭಿಸಿದ್ದರೂ ನದಿ ಮೇಲ್ಭಾಗದಲ್ಲಿ ಈ ರೀತಿ ಅಕ್ರಮ ಮರಳು ಗಣಿಗಾರಿಕೆ ಮುಂದುವರಿದಿದೆ. ಈ ಕುರಿತು ಕ್ರಮ ತೆಗೆದುಕೊಳ್ಳಬೇಕಾದ ಜಿಲ್ಲಾಡಳಿತ ಮೌನಕ್ಕೆ ಶರಣಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನದಿಯಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಾಣಿಕೆದಾರರು ಗುಂಡಿಗಳನ್ನು ಸೃಷ್ಟಿಸಿರುವುದು ಒಂದೆಡೆಯಾದರೆ, ನದಿಯಲ್ಲಿರುವ ಅಲ್ಪ ಸ್ವಲ್ಪ ನೀರಿನಲ್ಲಿ ಕೆಲಸಕ್ಕೆ ಬಾರದ ಗಿಡಗಂಟೆಗಳು ಬೆಳೆದಿದ್ದು ಅವುಗಳಿಂದ ನದಿಯಲ್ಲಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗಲಿದ್ದು, ಜಿಲ್ಲಾಡಳಿತ ನದಿಯಲ್ಲಿನ ಗಿಡಗಂಟೆ ತೆರವು, ಈಗಾಗಲೇ ನಿರ್ಮಿಸಿರುವ ಮನುಷ್ಯ ನಿರ್ಮಿತ ಗುಂಡಿಗಳನ್ನು ಸಮತಟ್ಟು ಮಾಡಲು ಹಾಗೂ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಬೇಕೆಂದು ಕೋಟೆಯ ಪ್ರಗತಿಪರ ರೈತ ಕಟ್ಟೆ ಅಯ್ಯಪ್ಪ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next