ಮಂಡ್ಯ: ಜಿಲ್ಲೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸೇರಿದಂತೆ ದಾಖಲೆ ಇಲ್ಲದ ಅಕ್ಕಿ ದಂಧೆ ನಿರಂತರವಾಗಿ ನಡೆಯುತ್ತಿದ್ದು, ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆದರೆ, ಇದುವರೆಗೂ ಜಿಲ್ಲಾಡಳಿತವಾಗಲೀ ಅಥವಾ ಆಹಾರ ಇಲಾಖೆಯವರಾಗಲೀ ಕಠಿಣ ಕ್ರಮ ಕೈಗೊಳ್ಳದ ಹಿನ್ನೆಲೆ ಆಗಾಗ್ಗೆ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ.
ದಾಖಲೆ ಇಲ್ಲದ ಅಕ್ಕಿ ವಶ: ಇಲ್ಲಿನ ವಿವಿ ನಗರದ ಜೈಶಂಕರ್ ರೈಸ್‌ಮಿಲ್‌ನಲ್ಲಿ ದಾಖಲೆಯಿಲ್ಲದೇ ಸಂಗ್ರಹಿಸಿಟ್ಟಿದ್ದ ಸುಮಾರು 60 ಟನ್ ತೂಕವಿರುವ 120 ಚೀಲ ಅಕ್ಕಿ ಮೂಟೆಗಳನ್ನು ಗುರುವಾರ ಸಂಜೆ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಅ ಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ನೋಟಿಸ್ ಜಾರಿ:ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮಾಲೀಕರು ಕೆಲವೊಂದು ಬಿಲ್ ಹಾಜರು ಪಡಿಸಿ ದ್ದರು. ಆದರೆ, ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ನಕಲಿ ಬಿಲ್ ಎಂಬ ಸಂಶಯ ಬಂದಿದೆ. ಈ ಹಿನ್ನೆಲೆ ಅಕ್ಕಿ ಮೂಟೆಯನ್ನು ವಶಕ್ಕೆ ಪಡೆದಿದ್ದಾರೆ. ಮೂರು ದಿನದೊಳಗೆ ಅಸಲಿ ಬಿಲ್ ಸಲ್ಲಿಸುವಂತೆ ಕಾಲಾವಕಾಶ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ.
ಬಿಲ್ ಬಗ್ಗೆ ಸಂಶಯ: ಇಲಾಖೆ ಉಪನಿರ್ದೇಶಕ ಎಂ.ಪಿ.ಕೃಷ್ಣಕುಮಾರ್ ಮಾತನಾಡಿ, ಮರೀಗೌಡ ಬಡಾವಣೆಯಲ್ಲಿರುವ ರೈಸ್‌ಮಿಲ್‌ನಿಂದ ಅಕ್ಕಿ ತರಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ತಮಿಳುನಾಡಿನಿಂದಲೂ ಅಕ್ಕಿ ಬಂದಿರುವ ಬಗ್ಗೆ ಮಾಲಿಕರು ತಿಳಿಸಿದ್ದಾರೆ. ಅವರು ಅಕ್ಕಿಯನ್ನು ಖರೀದಿಸಿ ತಂದಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಕೈಬರಹದ ಬಿಲ್ ಹಾಜರುಪಡಿಸಿರುವುದರಿಂದ ನಮಗೆ ಅದರ ಬಗ್ಗೆ ಸಂಶಯ ವ್ಯಕ್ತವಾಗಿದೆ. ಆನ್‌ಲೈನ್ ಬಿಲ್ ಅನ್ನು ಅವರು ನೀಡಿಲ್ಲ. ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಬಿಲ್ ಕಳುಹಿಸಿ ಜಿಎಸ್‌ಟಿ ಪಾವತಿಸಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಕ್ಕಿ ದಂಧೆ ಹೆಚ್ಚಳ: ಜಿಲ್ಲೆಯಲ್ಲಿ ಅನ್ನಭಾಗ್ಯ ಸೇರಿದಂತೆ ಅಕ್ಕಿದಂಧೆ ಪ್ರಕರಣ ನಡೆಯುತ್ತಲೇ ಇವೆ. ಇದುವರೆಗೂ ರೈಸ್‌ಮಿಲ್ ಮಾಲಿಕರು ಹಾಗೂ ಸಿಬ್ಬಂದಿ ವಿರುದ್ಧ ಠಾಣೆಗಳಲ್ಲಿ ದೂರು ಹಾಗೂ ಎಫ್‌ಐಆರ್ ದಾಖಲಾಯಿತೇ ಹೊರತು, ಕ್ರಮ ಆಗಿಲ್ಲ ಎಂದು ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದೇಶ-ವಿದೇಶಗಳಿಗೂ ಸರಬರಾಜು: ಜಿಲ್ಲೆಯ ವಿವಿಧ ರೈಸ್‌ಮಿಲ್‌ಗಳಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಸಂಪೂರ್ಣವಾಗಿ ಪಾಲಿಶ್ ಮಾಡಿ ವಿವಿಧ ನಕಲಿ ಬ್ರಾಂಡ್‌ಗಳ ಹೆಸರಿನಲ್ಲಿ ಹೊರ ರಾಜ್ಯ, ಜಿಲ್ಲೆ, ಹೊರ ದೇಶಗಳಿಗೂ ಸರಬರಾಜು ಮಾಡುತ್ತಿರುವ ಬಗ್ಗೆ ದೊಡ್ಡಮಟ್ಟದ ಸುದ್ದಿಯಾಗಿತ್ತು. ಆದರೆ, ಆ ದಂಧೆಗಳು ಇನ್ನೂ ಮುಂದುವರಿದಿದ್ದರೂ ಅಧಿಕಾರಿಗಳು ಮಾತ್ರ ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಂಡಿಲ್ಲ.
4-5 ಪ್ರಕರಣ ದಾಖಲು: ಕಳೆದ ಹಾಗೂ ಇದೇ ವರ್ಷ 3-4 ಪ್ರಕರಣ ಬೆಳಕಿಗೆ ಬಂದಿದ್ದವು. ತಹಶೀಲ್ದಾರ್ ನೇತೃತ್ವದಲ್ಲಿ ರೈಸ್‌ಮಿಲ್‌ಗಳ ಮೇಲೆ ದಾಳಿ ನಡೆಸಿ ಟನ್‌ಗಟ್ಟಲೇ ಅಕ್ಕಿ ವಶಕ್ಕೆ ಪಡೆಯಲಾಗಿತ್ತು. ಇದುವರೆಗೂ ಸರಿಯಾದ ಕ್ರಮ ಆಗಿಲ್ಲ. ಈಗಲೂ ವಿವಿಧ ರೈಸ್‌ಮಿಲ್‌ಗಳಲ್ಲಿ ದಂಧೆ ನಡೆಯುತ್ತಿರುವ ಮಾಹಿತಿ ಇದ್ದರೂ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಪ್ರಯೋಗಾಲಯಕ್ಕೆ ಅಕ್ಕಿ ಸ್ಯಾಂಪಲ್: 120 ಚೀಲಗಳಲ್ಲಿ ತುಂಬಿರುವ ಪಡಿತರ ಅಕ್ಕಿ ಯನ್ನು ವಶಕ್ಕೆ ಪಡೆಯಲಾಗಿದೆ. ಯಾವುದೇ ಕಾರ ಣಕ್ಕೂ ಇದನ್ನು ಬಿಡುವ ಪ್ರಶ್ನೆಯೇ ಇಲ್ಲ. ನಿಯ ಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಅಕ್ಕಿಯ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ಪಡಿತರ ಅಕ್ಕಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಇಲಾಖೆ ಉಪ ನಿರ್ದೇಶಕ ಎಂ.ಪಿ.ಕೃಷ್ಣಕುಮಾರ್ ತಿಳಿಸಿದರು.