Advertisement

ಮರಳು ಸಾಗಾಟಕ್ಕೆ ಅಕ್ರಮ ಲೈಸೆನ್ಸ್‌

06:00 AM Mar 01, 2018 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಳಸಬೇಕಿದ್ದ ಮರಳು ಪರವಾನಗಿಯನ್ನು ಕರಾವಳಿ ಜಿಲ್ಲೆಗಳಲ್ಲಿ ಬಳಕೆಗೆ ಮಾರಾಟ ಮಾಡಿ ಕೋಟ್ಯಂತರ ರೂ. ಅವ್ಯವಹಾರವೆಸಗಿದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ, ಸಹಾಯಕ ಕಾರ್ಯ ಪಾಲಕ ಅಭಿಯಂತರ ಸೇರಿ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ, ಸುಮಾರು ನಾಲ್ಕು ಸಾವಿರ ಮಿನರಲ್‌ ಡಿಸ್‌ಪ್ಯಾಚ್‌ ಪರ್ಮಿಟ್‌ (ಎಂಡಿಪಿ)ಗಳನ್ನು ದುರುಪಯೋಗ ಮಾಡಿ ಮರಳು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಉಡುಪಿಯ ಕಾಪು, ಬೈಂದೂರು ಹಾಗೂ ದ.ಕನ್ನಡದ ಬೆಳ್ತಂಗಡಿ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದರು.

ಸರ್ಕಾರ ನಿಗದಿಪಡಿಸಿರುವ ದರದಂತೆ ಪ್ರತಿ ಪರ್ಮಿಟ್‌ ಮರಳಿಗೆ 10 ಸಾವಿರ ರೂ. ಆಗುತ್ತದೆ. ಅದನ್ನೇ ಬ್ಲಾಕ್‌ನಲ್ಲಿ ಮಾರಾಟ ಮಾಡಿದರೆ 30-35 ಸಾವಿರ ರೂ. ಆಗುತ್ತದೆ. ಈ ಲೆಕ್ಕಾಚಾರದಲ್ಲಿ ನಾಲ್ಕು ಸಾವಿರ ಎಂಡಿಪಿಗಳಿಂದ 12 ರಿಂದ 15 ಕೋಟಿ ರೂ. ವಂಚನೆಯಾದಂತಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಲೋಕೋಪ ಯೋಗಿ ಇಲಾಖೆಯಲ್ಲಿ ಶೋಧ ನಡೆಸಿದಾಗ ಸುಮಾರು 4000 ಎಂಡಿಪಿಗಳು ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ ಎಂದರು.

ಅಕ್ರಮ ಪರ್ಮಿಟ್‌: ಸರ್ಕಾರವು ಇಡೀ ರಾಜ್ಯಕ್ಕೆ ಅಗತ್ಯವಾದ ಪರ್ಮಿಟ್‌ಗಳನ್ನು ಒಂದೆಡೆ ಮುದ್ರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡುತ್ತದೆ.

ಅಲ್ಲಿಂದ ಇಲಾಖೆಗೆ ಆ ಪರ್ಮಿಟ್‌ಗಳನ್ನು ಹಸ್ತಾಂತರ ಮಾಡಲಾಗುತ್ತದೆ. ನಂತರದಲ್ಲಿ ಅದನ್ನು ಮರಳು ಸಾಗಾಟ ಮಾಡಲು ಹಂಚಿಕೆ ಮಾಡಲಾಗುತ್ತದೆ. ಇಲಾಖೆಯ ಸ್ಟೋರ್‌ರೂಂನಲ್ಲಿ ಇಟ್ಟಿದ್ದ ನಾಲ್ಕು ಸಾವಿರ ಪರ್ಮಿಟ್‌ಗಳನ್ನು ಅಕ್ಷಯ್‌ ಎಂಬ ಗುತ್ತಿಗೆದಾರರ ಮೂಲಕ ಉಡುಪಿ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಪರ್ಮಿಟ್‌ ನಾಪತ್ತೆ: ಇಲಾಖೆಯ ಇಇ ಪರಮೇಶ್ವರಯ್ಯ ಕೆಲ ದಿನಗಳ ಹಿಂದೆ ಪರ್ಮಿಟ್‌ ಗಳು ನಾಪತ್ತೆಯಾಗಿರುವ ಬಗ್ಗೆ ನಗರ ಠಾಣೆಗೆ ದೂರು ನೀಡಿದ್ದರು. ಆಗ ಪೊಲೀಸರು ನಿಮ್ಮ ಕರ್ತವ್ಯಲೋಪ ಕಂಡು ಬರುತ್ತಿದ್ದು, ವಿಚಾರಣೆಗೆ
ಸಹಕರಿಸಬೇಕೆಂದು ಹಿಂಬರಹ ನೀಡಿದ್ದರು ಎಂದು ವಿವರಿಸಿದರು. ಈಗ ಗುತ್ತಿಗೆದಾರ ಸೇರಿದಂತೆ ಇಲಾಖೆಯ ಕೆಲವರನ್ನು ಸಂದೇಹದ ಮೇಲೆ ವಶಕ್ಕೆ ಪಡೆದು ಉಡುಪಿ ಪೊಲೀಸರ ವಶಕ್ಕೆ ನೀಡಲಾಗಿದೆ. ಅವರು ವಿಚಾರಣೆ ನಡೆಸುತ್ತಾರೆ. ಪ್ರಕರಣವು ಚಿಕ್ಕಮಗಳೂರಿಗೆ ಸೇರಿರುವುದರಿಂದ ಇಲ್ಲಿಗೆ ವರ್ಗಾಯಿಸಲು ಉಡುಪಿ ಪೊಲೀಸರಿಗೆ ಪತ್ರ ಬರೆಯುವುದಾಗಿ ಹೇಳಿದರು. ಪರ್ಮಿಟ್‌ಗಳು ನಾಪತ್ತೆಯಾಗಿರುವುದರಲ್ಲಿ ಅಧಿಕಾರಿಗಳ ಕರ್ತವ್ಯಲೋಪವಿದೆ. ಇದರ ಬಗ್ಗೆ ಡಿಸಿಗೆ ಪತ್ರ ಬರೆದು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ದಾಖಲೆಗೆ ತಯಾರಿ
ಬೆಳ್ತಂಗಡಿ ಪೊಲೀಸರು ಲಾರಿಗಳ ತಪಾಸಣೆ ಮಾಡುತ್ತಿದ್ದಾಗ 2016ರ ಜುಲೈ ನಲ್ಲಿ ಮರಳು ಲಾರಿಯೊಂದರಲ್ಲಿ ಚಿಕ್ಕಮಗಳೂರಿನ ಪರ್ಮಿಟ್‌ ದೊರೆತಿದೆ. ಪ್ರಕರಣ ದಾಖಲಿಸಿಕೊಂಡ ಅವರು, ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ವಿಚಾರಿಸಿದ್ದಾರೆ. ಆಗ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯದಿಂದ ಕೆಲ ದಾಖಲೆಗಳನ್ನು ಸಿದ್ಧಪಡಿಸಲು ಲೋಕೋಪಯೋಗಿ ಇಲಾಖೆಯವರು ತಯಾರಿ ನಡೆಸಿದ್ದಾರೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next