ಕೋಲಾರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ಮತ್ತಿತರ ಅವ್ಯವಹಾರಗಳಿಗೆ ಅವಕಾಶ ನೀಡದಿರಿ, ಜಿಲ್ಲೆಗೆ ಯಾವುದೇ ಕಾರಣಕ್ಕೂ ಕಳಂಕ ಬಾರದಂತೆ ಎಚ್ಚರವಸಿ ಎಂದು ಜಿಪಂ ಸಿಇಒ ಜಿ.ಜಗದೀಶ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮ್ಮ ಕಚೇರಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಲವಾರು ವರ್ಷಗಳ ಹಿಂದೆ ಕೆಲವು ಜಿಲ್ಲೆಗಳಲ್ಲಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಪರೀಕ್ಷೆಯಲ್ಲಿ ಅಕ್ರಮಗಳಿಗೆ ಶಿಕ್ಷಕರೇ ಅವಕಾಶ ನೀಡುತ್ತಿದ್ದ ಆರೋಪಗಳು ಇದ್ದವು. ಆದರೆ, ಈಗಿಲ್ಲ ಎಂದರು. ಪರೀಕ್ಷೆಯಲ್ಲಿ ಅಕ್ರಮ ನಡೆಸುವುದು, ವಿದ್ಯಾರ್ಥಿ ಡಿಬಾರ್ ಆಗುವುದು ಸೇರಿ ಯಾವುದೇ ರೀತಿಯ ಕಳಂಕ ಜಿಲ್ಲೆಗೆ ಬರುವುದಕ್ಕೆ ಅವಕಾಶ ನೀಡಬಾರದು, ಇಂತಹ ದೂರು ಬಂದರೆ ನಿಮ್ಮನ್ನು ಸುಮ್ಮನೇ ಬಿಡೋದಿಲ್ಲ ಎಂದು ಎಚ್ಚರಿಸಿದರು.
ಭದ್ರತೆ ಕಲ್ಪಿಸಿ: ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಉತ್ತರ ಪತ್ರಿಕೆಗಳನ್ನು ಎಲ್ಲಾ ಪರೀಕ್ಷೆಗಳು ಮುಗಿಯುವವರೆಗೂ ಡಿಡಿಪಿಐ ಕಚೇರಿಯ ಒಂದು ಕೊಠಡಿಯಲ್ಲಿ ಇರಿಸಲಾಗುವುದು. ಸುತ್ತಲೂ ಪೊಲೀಸ್, ಸಿಸಿಟಿವಿ ಸೇರಿದಂತೆ ಎಲ್ಲಾ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಜಿ.ಜಗದೀಶ್, ಚುನಾವಣೆ ಸ್ಟ್ರಾಂಗ್‌ರೂಂಗೆ ನೀಡುವಂತೆ ಹೆಚ್ಚಿನ ಭದ್ರತೆ ಒದಗಿಸಬೇಕು. ಯಾವುದೇ ಕಾರಣಕ್ಕೂ ಅಹಿತಕರ ಚಟುವಟಿಕೆಗಳಿಗೆ ಅವಕಾಶ ಬೇಡ ಎಂದು ಸೂಚಿಸಿದರು.
ಜಿಲ್ಲಾದ್ಯಂತ 71 ಕೇಂದ್ರಗಳಲ್ಲಿ ಪರೀಕ್ಷೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆಯ 71 ಕೇಂದ್ರಗಳಲ್ಲಿ ನಡೆಯಲಿದ್ದು, 20,194 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಖಾಸಗಿ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಇರುವುದರಿಂದ ಅಕ್ರಮಕ್ಕೆ ಅವಕಾಶಗಳಾಗುವ ಸಲುವಾಗಿ ಕೋಲಾರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮತ್ತು ಬಾಪೂಜಿ ಶಾಲೆಯ ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರ ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು.
ಕೋಲಾರದ 17, ಬಂಗಾರಪೇಟೆ 10, ಕೆಜಿಎಫ್10, ಮಾಲೂರು 10, ಮುಳಬಾಗಿಲು 11, ಶ್ರೀನಿವಾಸಪುರದ 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 10,476 ಬಾಲಕರು, 9717 ಬಾಲಕಿಯರು (823 ಪುನರಾವರ್ತಿತ ಅಭ್ಯರ್ಥಿಗಳು ಸೇರಿ) ಬರೆಯಲಿದ್ದಾರೆ. ಕಳೆದ ಬಾರಿ ಡಿಬಾರ್ ಪ್ರಕರಣ ಯಾವುದೂ ಇಲ್ಲ. ಹಾಗೆಯೇ ಈ ಬಾರಿಯೂ ಸುಗಮವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಡಿಡಿಪಿಐ ಕೆ.ರತ್ನಯ್ಯ ಮಾತನಾಡಿ, ನಮ್ಮಲ್ಲಿಯೂ 6 ಮೌಲ್ಯಮಾಪನಾ ಕೇಂದ್ರಗಳನ್ನು ಕೋಲಾರದ ನಳಂದಾ, ಚಿನ್ಮಯ, ಸೆಂಟ್‌ಆನ್ಸ್, ಸುಗುಣ, ಮಹಿಳಾ ಸಮಾಜ, ಸೈನಿಕ್ ಪಬ್ಲಿಕ್ ಶಾಲೆಯಲ್ಲಿ ಎಲ್ಲಾ ಸೌಲಭ್ಯ ಒಳಗೊಂಡಂತೆ ವ್ಯವಸ್ಥೆ ಮಾಡಲಾಗಿದೆ. ಆಗಿಂದಾಗ್ಗೆ ಆನ್‌ಲೈನ್‌ಗೆ ತುಂಬುವುದರಿಂದಾಗಿ ಈ ಬಾರಿ 10 ದಿನಗಳ ಒಳಗೆ ಫಲಿತಾಂಶ ಹೊರಬರಲಿದೆ ಎಂದರು.
ಜಿಲ್ಲೆಯಲ್ಲಿನ 71 ಪರೀಕ್ಷಾ ಕೇಂದ್ರಗಳಿಗೂ ಓರ್ವ ಮೇಲ್ವಿಚಾರಕರನ್ನು, ಜಿಲ್ಲಾ ಮಟ್ಟದಲ್ಲಿ 3 ಜಾಗೃತ ತಂಡಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರ ಅನವಶ್ಯಕ ಓಡಾಟ, ವಿದ್ಯಾರ್ಥಿಗಳು ಪರೀಕ್ಷಾ ಸಾಮಗ್ರಿ ಹೊರತುಪಡಿಸಿ ಎಲೆಕ್ಟ್ರಾನಿಕ್ ಸೇರಿದಂತೆ ಯಾವುದೇ ವಸ್ತುಗಳನ್ನು ತರದಂತೆ ಸೂಚನೆ ನೀಡಿರುವುದಾಗಿ ಹೇಳಿದರು.
ಸಭೆಯಲ್ಲಿ ಡಯೆಟ್ ಪ್ರಾಂಶುಪಾಲ ವಿಕ್ಟರ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಬಿಇಒಗಳಾದ ಕೆ.ಎಸ್.ನಾಗರಾಜಗೌಡ, ಕೆಂಪರಾಮು, ಮಾಧವರೆಡ್ಡಿ, ಕೆಂಪಯ್ಯ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ಸಿ.ಎಂ.ವೆಂಕಟರಮಣಪ್ಪ ಮತ್ತಿತರರಿದ್ದರು.