ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಪಕ್ಷಗಳು ಯೋಚಿಸಬೇಕು. ಕರಡು ರಚನೆಯಲ್ಲಿ ಲೋಪವಿದ್ದರೆ ತಿದ್ದಿಕೊಳ್ಳಬೇಕೇ ಹೊರತು, ಅಕ್ರಮ ವಲಸಿಗರನ್ನು ಗುರುತಿಸುವ ಕಾರ್ಯಕ್ಕೆ ತಡೆಯಾಗಬಾರದು.
ಅಸ್ಸಾಂನಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸುವ ಪ್ರಕ್ರಿಯೆ ಕುರಿತು ದೇಶಾದ್ಯಂತ ಚರ್ಚೆ ನಡೆಯುವ ಹೊತ್ತಲ್ಲೇ ಕರ್ನಾಟಕದ ರಾಮನಗರದಲ್ಲಿ ಬಾಂಗ್ಲಾದೇಶ ಮೂಲದ ಶಂಕಿತ ಉಗ್ರಗಾಮಿಯೊಬ್ಬನ ಬಂಧನವಾಗಿದೆ. ಜನವರಿ 19ರಂದು ಬಿಹಾರದ ಬೋಧ ಗಯಾ ಮಂದಿರದಲ್ಲಿ ನಡೆದಿದ್ದ ಕಡಿಮೆ ತೀವ್ರತೆಯ ಸ್ಫೋಟ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಎಂಬ ಬಾಂಗ್ಲಾ ಮೂಲದ ಉಗ್ರ ಸಂಘಟನೆಗೆ ಈತ ಸೇರಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ. ಕಳೆದ ನಾಲ್ಕು ವರ್ಷಗಳಿಂದ ಈತ ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಿದ್ದ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ. ಇದೇ ಪ್ರಕರಣದ ಸಂಬಂಧ ಕೇರಳದಲ್ಲಿ ಅಡಗಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಆರೋಪಿಗಳನ್ನೂ ಬಂಧಿಸಲಾಗಿದೆ. ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆದ ಕಾರ್ಯಾಚರಣೆಗೆ ಪ್ರತೀಕಾರವಾಗಿ ಬಾಂಗ್ಲಾ ಮೂಲದ ಈ ಉಗ್ರ ಸಂಘಟನೆ ಭಾರತದ ಬೌದ್ಧಮಂದಿರದಲ್ಲಿ ಸ್ಫೋಟ ನಡೆಸಿತ್ತು. ಅಷ್ಟೇ ಅಲ್ಲ, ದೇಶದಲ್ಲಿ ಜನಾಂಗೀಯ ಸಂಘರ್ಷ ಸೃಷ್ಟಿಸಲು ಮಸೀದಿ, ದೇಗುಲಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಸಂಚನ್ನು ಹೊಂದಿತ್ತು ಎಂಬ ಆಘಾತಕಾರಿ ವಿಷಯವೂ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಇಡೀ ಪ್ರಕರಣ ಅಕ್ರಮ ವಲಸಿಗರಿಂದ ಆಗಬಹು ದಾದ ಅನಾಹುತದ ಒಂದು ಮುಖವನ್ನು ತೆರೆದಿಟ್ಟಿದೆ ಎಂದರೆ ತಪ್ಪಿಲ್ಲ.
ಇಲ್ಲಿ ಆತಂಕಕಾರಿ ಸಂಗತಿ ಎಂದರೆ, ಕಳೆದ ನಾಲ್ಕು ವರ್ಷಗಳಿಂದ ಬಾಂಗ್ಲಾ ದೇಶದ ಪ್ರಜೆಯೊಬ್ಬ ನಮ್ಮ ರಾಜ್ಯದಲ್ಲಿ ಬಿಡಾರ ಹೂಡಿದ್ದರೂ ನಮ್ಮ ವ್ಯವಸ್ಥೆಗೆ ಆತನ ಪತ್ತೆ ಸಾಧ್ಯವಾಗಿಲ್ಲ. ಅಷ್ಟಕ್ಕೂ ಆತ ಹೊಟ್ಟೆಪಾಡಿಗೆ ಯಾವುದೋ ವೃತ್ತಿ ಮಾಡಿಕೊಂಡಿದ್ದವನಾಗಿರಲಿಲ್ಲ, ಸ್ಫೋಟ ಪ್ರಕರಣವೊಂದರ ಆರೋಪಿಯಾಗಿದ್ದ. ಉಗ್ರಗಾಮಿ ಚಟುವಟಿಕೆಯೊಂದೇ ಅಲ್ಲ, ಡ್ರಗ್ಸ್ ಜಾಲ, ವಂಚನೆ ಪ್ರಕರಣ ಹೀಗೆ ವಿವಿಧ ಅಪರಾಧ ಚಟುವಟಿಕೆ ಗಳಲ್ಲಿ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರು ಭಾಗಿಯಾದ ಉದಾಹರಣೆಗಳು ಈ ಹಿಂದೆಯೂ ನಡೆದಿದೆ. ಅಕ್ರಮವಾಗಿ ರಾಜ್ಯದಲ್ಲಿ ವಾಸ್ತವ್ಯ ಹೂಡಿರುವ ವಿದೇಶಿ ನಾಗರಿಕರ ಪತ್ತೆ ಹಚ್ಚಿ ಗಡೀಪಾರು ಗೊಳಿಸಬೇಕು ಎಂಬುದು ಬಹು ಹಿಂದಿನ ಬೇಡಿಕೆ. ಆದರೆ ಆಡಳಿತ ವ್ಯವಸ್ಥೆ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಯಾವುದಾದರೊಂದು ಪ್ರಕರಣ ಬೆಳಕಿಗೆ ಬಂದಾಗ ಅಕ್ರಮ ವಿದೇಶಿಯರನ್ನು ಗುರುತಿಸಲಾಗುತ್ತದೆ ಎಂಬ ಮಾಮೂಲಿ ಹೇಳಿಕೆ ಬಿಟ್ಟರೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರ ಅನುಷ್ಠಾನವಾಗುತ್ತಿಲ್ಲ ಎಂಬುದೇ ವಿಪರ್ಯಾಸ. ಪಾಕ್ ಮೂಲದ ಉಗ್ರರ ಜತೆಗೆ ಈಗ ಬಾಂಗ್ಲಾ ಮೂಲದ ಉಗ್ರ ಸಂಘಟನೆಯ ಸದಸ್ಯರು ದೇಶವ್ಯಾಪಿ ಹಬ್ಬಿದ್ದಾರೆ. ಭಾರತದ ನಾಗರಿಕರನ್ನೂ ತಮ್ಮ ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆತಂಕದ ಸಂಗತಿ. ಅಸ್ಸಾಂನಲ್ಲಿ ನಡೆದಿರುವ ಎನ್‌ಆರ್‌ಸಿಯಂತಹ ಕಟ್ಟುನಿಟ್ಟಿನ ಕ್ರಮಗಳಿಂದ ದೇಶದಲ್ಲಿ ಬೇರುಬಿಟ್ಟಿರುವ ಅಕ್ರಮ ವಲಸಿಗರ ಪತ್ತೆ ಸಾಧ್ಯವಿದೆ. ಅಕ್ರಮವಾಸಿಗಳನ್ನು ಗುರುತಿಸುವುದು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ನಡೆಯ ಲೇಬೇಕಾದ ಕೆಲಸ. ಅಸ್ಸಾಂ ವಿಚಾರವಾಗಿ ಸುಪ್ರೀಂ ಕೋರ್ಟ್ ಕೂಡಾ ಇದನ್ನು ಒತ್ತಿ ಹೇಳಿದೆ. ಈ ನಿಟ್ಟಿನಲ್ಲಿ ಎನ್‌ಆರ್‌ಸಿ ಪಟ್ಟಿಯನ್ನು ಬೇಗನೆ ಪೂರ್ಣಗೊಳಿಸುವಂತೆ ಅಸ್ಸಾಂ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಿತ್ತು. ಆದರೆ ಅಸ್ಸಾಂನಲ್ಲಿ ಎನ್‌ಆರ್‌ಸಿ ಪಟ್ಟಿಯ ಕುರಿತು ರಾಜಕೀಯ ಕಲಹ ಏರ್ಪಟ್ಟಿರುವುದು ದುರ್ದೈವ. ಅಕ್ರಮವಾಸಿಗಳಿಂದ ದೇಶಕ್ಕೆ ಆಗಿರುವ ಸಮಸ್ಯೆಯ ವಿಷಯವನ್ನು ಬಿಟ್ಟು ಚರ್ಚೆ ಕವಲು ಹಾದಿ ಹಿಡಿದಿದೆ. ಇನ್ನಾದರೂ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಪಕ್ಷಗಳು ಯೋಚಿಸಬೇಕು. ಕರಡು ರಚನೆಯಲ್ಲಿ ಲೋಪವಿದ್ದರೆ ತಿದ್ದಿಕೊಳ್ಳಬೇಕೇ ಹೊರತು, ಅಕ್ರಮ ವಲಸಿಗರ ಗುರುತಿಸುವ ಕಾರ್ಯಕ್ಕೆ ತಡೆಆಗಬಾರದು.