Advertisement

ಎಚ್‌ಐವಿ ಆರೈಕೆ ಕೇಂದ್ರದ ಪಕ್ಕವೇ ಅಕ್ರಮ ಕಸ ವಿಲೇವಾರಿ

02:17 PM Apr 10, 2023 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಕಸ ನಿರ್ವಹಣೆ ಬಿಬಿಎಂಪಿಗೆ ದೊಡ್ಡ ತಲೆನೋವಾಗಿದ್ದು, ಖಾಲಿಯಿರುವ ಜಾಗದಲ್ಲೆಲ್ಲಾ ಕಸ ಸುರಿಯುವ ಖಯಾಲಿ ಮುಂದುವರಿದಿದೆ.

Advertisement

ಇದೀಗ ಬೈರತಿ ಸಮೀಪದ ದೊಡ್ಡಗುಬ್ಬಿ ಮುಖ್ಯ ರಸ್ತೆ ಬಳಿಯ ಎಚ್‌ಐವಿ ಆರೈಕೆ ಕೇಂದ್ರದ ಹಿಂಭಾಗವೇ ಅಕ್ರಮವಾಗಿ ಕಸ ಸುರಿಯಲಾಗುತ್ತಿದ್ದು, ಇದರಿಂದ ಎಚ್‌ ಐವಿ ರೋಗಿಗಳು ಹಾಗೂ ಸ್ಥಳೀಯರು ಅನಾರೋಗ್ಯದಿಂದ ಕಂಗೆಟ್ಟು ಹೋಗಿದ್ದಾರೆ.

ಬೆಂಗಳೂರಿಗೆ ಬೇರೆ ರಾಜ್ಯ, ಜಿಲ್ಲೆಗಳಿಂದ ವಲಸೆ ಬರುತ್ತಿರುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಜನಸಂಖ್ಯೆ ಹೆಚ್ಚಿದಂತೆ ಕಸ ನಿರ್ವಹಣೆಯೂ ಸವಾಲಾಗಿದೆ. ಪರಿಣಾಮ ನಗರದ ಹೊರ ವಲಯದಲ್ಲಿ ಸಿಕ್ಕ-ಸಿಕ್ಕ ಕಡೆ ಕಸ ವಿಲೇವಾರಿ ಅವ್ಯಾಹತವಾಗಿದೆ. ದೊಡ್ಡಗುಬ್ಬಿ ಮುಖ್ಯ ರಸ್ತೆ, ಕುವೆಂಪು ಲೇಔಟ್‌, ವಿಸ್ತಾರ ಎಂಬ ಪ್ರದೇಶದಲ್ಲಿ ಎಚ್‌ಐವಿ ಆರೈಕೆ ಕೇಂದ್ರವಿದ್ದು, ಇದರ ಹಿಂಭಾಗದ ಖಾಲಿ ಜಾಗದಲ್ಲಿ ಕಳೆದ 6 ತಿಂಗಳಿನಿಂದ ಬಿಬಿಎಂಪಿ ಸಿಬ್ಬಂದಿ ಅಕ್ರಮವಾಗಿ ಕಸ ಸುರಿಯುತ್ತಿದ್ದಾರೆ. ಈ ಜಾಗದ ಸುತ್ತ-ಮುತ್ತಲೂ ಕಸದ ರಾಶಿಯೇ ತುಂಬಿ ತುಳುಕುತ್ತಿವೆ. ಇದರಿಂದ ಸಮೀಪ ವಾಸಿಸುತ್ತಿರುವ ಸುಮಾರು 2 ಸಾವಿರ ಮಂದಿ ಸಂಕಷ್ಟ ಎದುರಿಸುತ್ತಿದ್ದಾರೆ.

ಕಸ ತುಂಬಿ ಪಕ್ಕದಲ್ಲಿರುವ ತಾಳಕುಂಟೆ, ದೊಡ್ಡಗುಬ್ಬಿ, ರಾಮಪುರ, ಹೊಸಕೋಟೆ ಕೆರೆಗಳೂ ಕಲುಷಿತಗೊಂಡಿವೆ. ಈ ಕೆರೆಗಳ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂದು ಸ್ಥಳೀಯರು “ಉದಯವಾಣಿ’ ಜತೆಗೆ ತಮ್ಮ ಸಮಸ್ಯೆ ಹಂಚಿಕೊಂಡಿದ್ದಾರೆ.

ದುರ್ವಾಸನೆ ನಡುವೆ ವಾಸ: ದೇಶದಲ್ಲೇ ಅತೀ ಹೆಚ್ಚು ಎಚ್‌ಐವಿ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಎಚ್‌ಐವಿ ಸೋಂಕಿತರ ಆರೈಕೆಗಾಗಿ ಬೆಂಗಳೂರಿನ ದೊಡ್ಡಗುಬ್ಬಿ ಮುಖ್ಯ ರಸ್ತೆ, ಕುವೆಂಪು ಲೇಔಟ್‌, ವಿಸ್ತಾರ ಸಮೀಪದಲ್ಲಿ “ಆಕ್ಸೆಪ್ಟ್ ಸೊಸೈಟಿ’ ಆರೈಕೆ ಕೇಂದ್ರವಿದ್ದು, ಸದ್ಯ ಇಲ್ಲಿ 200 ಮಂದಿ ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ತ್ಯಾಜ್ಯ ಕೊಳೆತು ಕಸದ ದುರ್ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡೇ ರೋಗಿಗಳು ದಿನ ದೂಡುತ್ತಿದ್ದಾರೆ. ಕಲುಷಿತ ನೀರಿನಲ್ಲೇ ಸ್ನಾನ ಮಾಡಬೇಕಾಗಿದೆ. ಇದರಿಂದ ಸೋಂಕಿತರ ರೋಗ ನಿರೋಧಕ ಶಕ್ತಿಯೂ ಕುಂಠಿತವಾಗುತ್ತಿದೆ. ಕಸದ ಸಮಸ್ಯೆಯಿಂದ ರೋಗಿಗಳು ಬೇರೆ ರಾಜ್ಯದಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ.

Advertisement

ಕಲುಷಿತ ನೀರಿನ ಸಮಸ್ಯೆ: ಕಸ ತುಂಬಿದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಹಾಕಿರುವ ಕೊಳವೆಬಾವಿಗಳಲ್ಲಿ ಕಪ್ಪಾದ ಕಲುಷಿತ ನೀರು ಬರುತ್ತಿದೆ. ಇದನ್ನು ಬಳಸಲಾಗದೇ ಸ್ಥಳೀಯರು ಸಾವಿರಾರು ರೂ.ತೆತ್ತು ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳುತ್ತಿದ್ದಾರೆ. ಕಸದ ರಾಶಿ ಬಳಿ ಸೊಳ್ಳೆ, ಕ್ರಿಮಿಕೀಟಗಳು ಹೆಚ್ಚಾಗಿವೆ. ಕಸ ಸುಟ್ಟ ಹೊಗೆ ಸೇವನೆಯಿಂದ ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಅಂತರ್ಜಲ ಸಮಸ್ಯೆಯೂ ತಲೆದೂರಿದೆ. ಒಟ್ಟಾರೆ ಕಸದಿಂದ ಸುತ್ತ-ಮುತ್ತಲಿನ ಪರಿಸರ ಸಂಪೂರ್ಣ ಹಾನಿಯಾಗುತ್ತಿದೆ. ಸದ್ಯದಲ್ಲೇ ಮಳೆಗಾಲ ಶುರುವಾಗಲಿದ್ದು, ಮಳೆ ನೀರಿಗೆ ಕಸದ ರಾಶಿ ರಸ್ತೆ ಇಕ್ಕೆಲಗಳಲ್ಲಿ ಹರಿಯುತ್ತವೆ ಎಂದು ಸ್ಥಳೀಯರು “ಉದಯವಾಣಿ’ಗೆ ತಿಳಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ಹೈರಾಣು : ದೊಡ್ಡಗುಬ್ಬಿ ಗ್ರಾಪಂಗೆ ಸೇರಿದ ಈ ಪ್ರದೇಶದಲ್ಲಿ ಈ ಹಿಂದೆ ಬಂಡೆಗಳಿದ್ದವು. ಸರ್ಕಾರವು ಬಂಡೆ ಒಡೆಯುವುದನ್ನು ನಿಲ್ಲಿಸಿದ ಬಳಿಕ ಬೆಂಗಳೂರು ನಗರದಲ್ಲಿ ಸಂಗ್ರಹಿಸಿದ ಟನ್‌ಗಟ್ಟಲೆ ಕಸಗಳನ್ನು ಬಿಬಿಎಂಪಿ ನೌಕರರು ಲಾರಿಗಳಲ್ಲಿ ತಂದು ಇಲ್ಲಿ ಸುರಿಯುತ್ತಿದ್ದಾರೆ. ದೊಡ್ಡಗುಬ್ಬಿ ಗ್ರಾಪಂ ಅಧ್ಯಕ್ಷರು ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಸ್ಥಳೀಯರು ಈ ಬಗ್ಗೆ ಹಲವು ಬಾರಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಪಾಲಿಕೆ ಅಧಿಕಾರಿಗಳಿಗೆ ಈ ಸಂಗತಿ ಗೊತ್ತಿದ್ದರೂ ಸ್ಥಳೀಯರ ಗೋಳು ಕೇಳುವವರೇ ಇಲ್ಲ ದಂತಾಗಿದೆ. ಇನ್ನು ಈ ಪ್ರದೇಶದಿಂದ ಸುಮಾರು 1 ಕಿ.ಮೀ ದೂರದಲ್ಲಿ ಸಚಿವ ಬೈರತಿ ಬಸವರಾಜ್‌ ನಿವಾಸ ವಿದೆ. ಆದರೆ, ಸಚಿವರು ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಸರ್ಕಾರದ ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ಪರಿಶೀಲಿಸಿ ಕ್ರಮಕೈಗೊಂಡರೆ ಸಾವಿರಾರು ಮಂದಿಗೆ ಅನುಕೂಲವಾಗಲಿದೆ. ಕಸದ ಕಲುಷಿತ ಗಾಳಿಯಿಂದ ಸ್ಥಳೀಯರಲ್ಲಿ ವಿವಿಧ ರೋಗಗಳ ಭೀತಿ ಎದುರಾಗಿದೆ. ● ಪರಶುರಾಮ್‌, ಸ್ಥಳೀಯರು

ಕಸದ ರಾಶಿಯಿಂದ ಸ್ಥಳೀಯರಿಗೆ ಹಲವು ಸಮಸ್ಯೆ ಎದುರಾಗುತ್ತಲೇ ಇದೆ. ಇದೀಗ ಇಲ್ಲಿ ವಾಸಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ಅಕ್ಕ-ಪಕ್ಕದ ಕೆರೆಗಳ ನೀರು ಕಲುಷಿತವಾಗಿವೆ. ● ಚಂದ್ರಶೇಖರ್‌, ಸ್ಥಳೀಯ ನಿವಾಸಿ

– ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next