ಗಂಗಾವತಿ:ಮನೆಗಳಲ್ಲಿ ಅಕ್ರಮವಾಗಿ ಸಿಲಿಂಡರ್ ಗಳನ್ನು ಸಂಗ್ರಹಿಸಿ ಬೇರೆ ಸಿಲಿಂಡರ್ ಗಳಿಗೆ ಭರ್ತಿ ಮಾಡುವ ದಂಧೆಕೋರರ ಮನೆಗಳು ಮತ್ತು ಗೃಹಬಳಕೆ ಸಿಲಿಂಡರ್ ಗಳನ್ನು ಬಳಕೆ ಮಾಡುತ್ತಿದ್ದ ಹೊಟೇಲುಗಳು ಮತ್ತು ಬಾರ್ ರೆಸ್ಟೋರೆಂಟ್ ಗಳ ಮೇಲೆ ಆಹಾರ ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಸುಮಾರು ಒಂದು ಸಾವಿರ ಸಿಲಿಂಡರ್ ಗಳನ್ನು ವಶ ಪಡೆದಿದ್ದಾರೆ.
ಪ್ರಶಾಂತ ನಗರದ ಮನೆಯೊಂದರಲ್ಲಿ 40 ಸಿಲಿಂಡರ್, ಚಂದ್ರಹಾಸ ಟಾಕೀಸ್ ಹತ್ತಿರ ಸೇರಿ ನಗರದ ವಿವಿಧ ವಾರ್ಡ್ ಗಳ ಮನೆಗಳೆ ಅಕ್ರಮವಾಗಿ ಸಿಲಿಂಡರ್ ಗಳನ್ನು ಸಂಗ್ರಹ ಮಾಡಿ ಆಟೋ,ಕಾರುಗಳಿಗೆ ಇತರೆ ಉಪಯೋಗಗಳಿಗೆ ಸಿಲಿಂಡರ್ ಭರ್ತಿ ಮಾಡುವ ದಂಧೆ ಹೆಚ್ಚಾಗಿತ್ತು. ರಾಜ್ಯದ ವಿವಿಧೆಡೆ ಸಿಲಿಂಡರ್ ಸ್ಪೋಟದಂತಹ ಘಟನೆ ಹಿನ್ನೆಲೆಯಲ್ಲಿ ಅನಾವುತಗಳಾಗಿದ್ದವು. ಕೂಡಲೇ ಎಚ್ಚೆತ್ತ ಆಹಾರ ಇಲಾಖೆಯ ಅಧಿಕಾರಿಗಳು ಶನಿವಾರ ಬೆಳಗಿನಿಂದ ದಾಳಿ ನಡೆಸಿದ್ದಾರೆ. ಕೆಲವೆಡೆ ಸಿಲಿಂಡರ್ ಗ್ಯಾಸ ವಿತರಣೆಯ ಕೆಲ ಡೀಲರ್ ಗಳು ಸೀಜ್ ಕಾರ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಜರುಗಿದೆ.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಾರಟಗಿ, ಹೊಸಪೇಟೆ ಕಮಲಾಪೂರ,ಕಂಪ್ಲಿಯಿಂದ ಸಿಲಿಂಡರ್ ಗಳನ್ನು ಅಕ್ರಮವಾಗಿ ಹೊಟೇಲ್ ಸೇರಿ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡಲು ಅಕ್ರಮ ಸಿಲಿಂಡರ್ ದಂಗೆಕೋರರು ಹೆಚ್ಚಿನ ಹಣಕ್ಕೆ ಪೂರೈಕೆ ಮಾಡುತ್ತಿದ್ದು ಹಲವು ಭಾರಿ ಅಕ್ರಮ ತಡೆಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಇದೀಗ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಅಕ್ರಮ ಸಿಲಿಂಡರ್ ಬಳಕೆ ಮಾಡುವವರ ವಿರುದ್ದ ಆಹಾರ ಇಲಾಖೆ ಸೀಜ್ ಮಾಡುತ್ತಿದ್ದು ಅಕ್ರಮವೆಸಗುವವರ ವಿರುದ್ದ ಪೊಲೀಸ್ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವರೋ ಇಲ್ಲವೋ .ಅಥವಾ ರಾಜಕೀಯ ಒತ್ತಡಗಳಿಗೆ ಮಣಿದು ಸಿಲಿಂಡರ್ ಗಳನ್ನು ವಾಪಸ್ ಮರಳಿಸುವರೋ ಎಂದು ಕಾಯ್ದು ನೋಡಬೇಕಿದೆ.
ಕಠಿಣ ಕ್ರಮ: ಅಕ್ರಮ ಸಿಲಿಂಡರ್ ದಂಧೆ ನಡೆಸುವ ಕುರಿತು ಹಲವು ದೂರಿನ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣರು ಭಾಗದಲ್ಲಿ ಸೀಜ್ ಕಾರ್ಯ ಕೈಗೊಂಡಿದ್ದು ಅಕ್ರಮ ನಡೆಸುವವರ ವಿರುದ್ಧ ಮೇಲಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಶಿರಾಸ್ಥೆದಾರ ರವಿ ಉದಯವಾಣಿ ಗೆ ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಶೇಖರಪ್ಪ,ಪವನಕುಮಾರ ಸೇರಿ ಹಲವರಿದ್ದರು.