Advertisement

Alone: ನಾ ನನಗೆ ಮರಳಿ ಸಿಗುವೆ…ಇದು ಏಕಾಂಗಿಯ ಮಾತು

01:26 PM Feb 21, 2024 | Team Udayavani |

ಬದುಕಿನಲ್ಲಿ ಅದು ಮಾಡಬೇಕು, ಇದು ಮಾಡಬೇಕು, ಮತ್ತಿನ್ಯಾವುದೋ ಗರಿ….ಹೀಗೆಲ್ಲಾ ಯೋಚಿಸುವವರಲ್ಲಿ ನಾನೂ ಒಬ್ಬಳು. ಮಾಯಾನಗರಿಗೆ ಕನಸುಗಳನ್ನು ಕಟ್ಟಿಕೊಂಡು ಬರೋರು ಒಂದಿಷ್ಟು ಜನ ಆದ್ರೆ, ಅಲ್ಲಿ ಬಂದ್ಮೇಲೆ ಕನಸುಗಳನ್ನು ಕಟ್ಟಿರೋ ಒಂದಿಷ್ಟು ಜನ ಅಂಥವರಲ್ಲಿ ನಾನು ಒಬ್ಬಳು. ಕನಸು ತುಂಬಿದ ಕಣ್ಣುಗಳು, ಜವಾಬ್ದಾರಿ ಅನ್ನೋ ಪೊರೆಯಿಂದ ಮುಚ್ಚಿ ಹೋಗಿವೆ.

Advertisement

ಜೀವನದಲ್ಲಿ ಆಸೆಗಳಿದ್ರೂ ನಿರಾಸೆಯ ಭಯ ಕಾಡ್ತಿದೆ. ನೋವು ತುಂಬಿದ ಬದುಕಿನಲ್ಲಿ ನಗುವನ್ನ ಹುಡುಕ್ತಿರೋ ಈ ಜೀವಕ್ಕೆ ನೀನು ಇದ್ದೀಯಾ ಅನ್ನೋದು ಒಂದು ಧೈರ್ಯ. ಇವತ್ತಲ್ಲ ನಾಳೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ. ನನ್ನೆಲ್ಲಾ ನೋವು ಕಷ್ಟಗಳನ್ನ ನಿನ್ನ ಮಡಿಲಿಗೆ ಹಾಕ್ತಿದ್ದೀನಿ ದೇವರೇ… ಮನಸಿನೊಳಗೂ ಗದ್ದಲ ಭುಗಿಲೆದ್ದಾಗ ಜೀವ ಒದ್ದಾಡುತ್ತೆ. ನೆಮ್ಮದಿ ಹುಡುಕಾಟದಲ್ಲಿ ಅಲೆಮಾರಿಯಾಗಬೇಕಾಗುತ್ತೆ. ಎಷ್ಟೋ ಸಲ ಎಲ್ಲರಿಂದ ದೂರ ಹೋಗಿ ಒಂದು ಶಾಂತ ಜಾಗದಲ್ಲಿ ನೆಮ್ಮದಿಯಾಗಿ ಕೂತ್ಕೋಬೇಕು ಅನ್ಸುತ್ತೆ.

ಕನ್ನಡಿಯಲ್ಲಿ ಹುಡುಕಬೇಕು ನಗುವನ್ನು ಮರೆಯುತ್ತಿರುವೆ ಎಲ್ಲವನ್ನೂ ನನ್ನಲ್ಲಿ ನನಗೆ ಒಂದು ನಂಬಿಕೆ, ಕನಸುಗಳು ನನಸಾಗುತ್ತವೆ ಅಂತ. ಆದ್ರೂ ಕೇಳ್ಳೋಕೆ ಮನಸ್ಸಿನಲ್ಲಿ ಸಾವಿರ ಇದ್ರೂ ಒಪ್ಪಿಗೆಯ ನಿರೀಕ್ಷೆಗಿಂತ ನಿರಾಕರಣೆಯ ಭಯ ಕಾಡತೊಡಗಿದೆ. ಆಸೆ ದೊಡ್ಡದೇನಿಲ್ಲ. ಜೀವನದ ಮುಂದಿನ ಕ್ಷಣ ಇಂದಿನ ಕ್ಷಣಕ್ಕಿಂತ ಚೆನ್ನಾಗಿದ್ದರೆ ಅಷ್ಟೇ ಸಾಕು. ಆ ಕೆಲವು ನೆನಪುಗಳ ಸಾಲಿನಲ್ಲಿ ಮತ್ತೆ ನನ್ನ ಆಹ್ವಾನಿಸದಿರು. ನನ್ನಲ್ಲೇನೋ ಉತ್ತರವಿತ್ತು. ಆದರೆ ಹೇಳುವ ಮನಸ್ಸಿರಲಿಲ್ಲ.,.

ನನ್ನ ವಿವರಣೆಗಳನ್ನು ಕೇಳುವ ಮೊದಲೇ ಅಪರಾಧಿ ಸ್ಥಾನದಲ್ಲಿಟ್ಟವರಿಗೆ ವಿವರಿಸುವ ಅಗತ್ಯವಾದರೂ ಏನಿದೆ ಅನಿಸಿತು? ಪರಿಸ್ಥಿತಿಯ ಪರಿಧಿಯೊಳಗೆ ಬಂಧಿಯಾಗಿ, ಪರಿಪರಿಯಾಗಿ ವೇದನೆ ಪಟ್ಟಾಗ ಅನಿಸಿದ್ದುಂಟು. ಎಲ್ಲಾ ಬಿಟ್ಟು ಎಲ್ಲಾದರೂ ಓಡಿ ಹೋಗಲೇ ಎಂದು.

ಕೆಲವೊಮ್ಮೆ ಮಿತಿಮೀರಿ ಪ್ರಯತ್ನಪಟ್ಟರೂ ಕೆಲವೊಂದನ್ನು ಉಳಿಸಿಕೊಳ್ಳೋಕೆ ಆಗಲ್ಲ, ಕೆಲವೊಂದನ್ನು ಬದಲಾಯಿಸಲಾಗುವುದಿಲ್ಲ. ಪರಿಸ್ಥಿತಿಗಳಂತೂ ಎಂದೂ ನಮ್ಮ ಹಿಡಿತದಲ್ಲಿರುವುದಿಲ್ಲ. ಸ್ವಲ್ಪ ತಾಳ್ಮೆ ಇರಲಿ ಬದುಕಲ್ಲಿ. ಜೀವನದಲ್ಲಿ ಎಲ್ಲಕ್ಕೂ ಸಿದ್ಧರಾಗಿರಬೇಕು. ಕೆಲವೊಮ್ಮೆ ಊಹಿಸಲೂ ಆಗದ ಸ್ಥಿತಿ ಬಂದುಬಿಡುತ್ತೆ. ನಮ್ಮದಲ್ಲದ ಲೋಕದಲ್ಲಿ ನಮ್ಮವರ ಹುಡುಕಾಟ.

Advertisement

ಇಲ್ಲಿ ಭಾವನೆಗಳ ಮಾರಾಟ. ಒಂದು ಆಸೆಗೋಸ್ಕರ ನೂರಾರು ಅವಕಾಶಗಳನ್ನು ಕಳೆದುಕೊಳ್ಳುವುದಕ್ಕಿಂತ ನೂರಾರು ಅವಕಾಶಗಳಿಗೋಸ್ಕರ ಒಂದು ಆಸೆ ಬಿಟ್ಕೊಡೋದು ಉತ್ತಮ ಅನ್ನಿಸಿತ್ತು ಆ ಕ್ಷಣ. ಈ ನೂರೆಂಟು ಗೊಂದಗಳ ಮಧ್ಯೆ ಜೀವ ಸಿಕ್ಕಿಕೊಂಡಿದೆ. ಸಮಯ ಕಳೆದಂತೆ ಎಲ್ಲಾ ಪರಿಸ್ಥಿತಿಗಳ ಪರಿಚಯವಾಗುತ್ತದೆ.

ಸಮಯ ಕಳೆದಷ್ಟೂ ಕಠೊರ. ಜೀವದ ಜೋಗುಳ ಮಾಯವೇ ಆಗಿದೆ… ತಿರುಗಿ ನೋಡಲು ಸಮಯವಿಲ್ಲ ಈ ಬದುಕಿನಲ್ಲಿ. ಎಲ್ಲಾ ಸುಖ ದುಃಖಗಳನ್ನು ಸಮಾಧಾನದಿಂದ ಸ್ವೀಕರಿಸಬೇಕಷ್ಟೇ.

ಕಣ್ಣ ನೀರೇ ಜಾಹೀರಾತಾಗಿದೆ. ನನ್ನನ್ನೇ ನಾನು ಕಳೆದುಕೊಂಡಂತಿದೆ. ಸದ್ಯಕ್ಕೆ ಬಾಕಿ ಉಳಿದಿರುವುದು ನೋವು ತುಂಬಿದ ನಗು ಮಾತ್ರ ಅನಿಸುತ್ತಿದೆ. ಅದು ಹೇಗಿರಬೇಕೆಂದರೆ, ಒಳಗಿರುವ ಅಳುವನ್ನೇ ನಾಚಿಸುವಂತೆ! ಮನಸ್ಸಿನಲ್ಲಿರೋ ನೋವು ಯಾರೆಂದರೆ ಯಾರಿಗೂ ಕಾಣಿಸಬಾರದು. ಯಾಕೆಂದರೆ ಸಾಗುತಿರೋ ನಿಮ್ಮವರು ನಗುತ್ತಲೇ ಇರಲು…

ಸಾಗುತ್ತಿರುವ ಪಯಣವು ಒಂಟಿಯಾಗಿದೆ. ನನ್ನ ಜತೆ ನಾವು ಬಯಸಿದವರ ನೆನಪು ಕಂಡ ಖುಷಿ ಕೂಡ ಜತೆಗೆ ಇರುತ್ತದೆ. ಕಣ್ಣೀರು ಮುಚ್ಚಿಟ್ಟಷ್ಟು ಭಾರ, ಹರಿಬಿಟ್ಟಷ್ಟು ಹಗುರ. ಆಗಾಗ ಏಕಾಂತದಲ್ಲಿ ಕೂತು ಅತ್ತು ಬಿಡುವೆ…ಯಾರಿಗೂ ಹೇಳಲಾಗದ ನನ್ನೀ ನೋವುಗಳನ್ನು ನನ್ನೀ ಒಂಟಿತನಕ್ಕೆ ಇಂದು ಹೇಳಬೇಕಿದೆ. ಏಕಾಂಗಿಯಾಗಿ ಹೊರಡುತ್ತಿರುವೆ. ಗತಿಸಿ ಹೋದ ಘಟನೆಗಳ ನೆನೆದು ಇತಿಹಾಸ ಬರೆಯುವುದು ಹೇಗೆ? ಬಹುಶಃ ಕೆಲವನ್ನ ನೆನೆದು ನಗುವೆ, ಕೆಲವನ್ನ ಮರೆತು ಬಿಡುವೆ

ನಾ ನನಗೆ ಮರಳಿ ಸಿಗುವೆ…

-ದಿವ್ಯಶ್ರೀ

ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next