ಇಂಡೋನೇಷ್ಯಾದ ಅಲಂಕಾರಿಕಾ ತಂತ್ರ ಬಳಸಿ, ನೇಯ್ಗೆಯ ಮುನ್ನ ದಾರಗಳನ್ನು ಟೈ- ಡೈ ಮಾಡಲಾಗುತ್ತದೆ. ವಿಶಿಷ್ಟ ಆಕೃತಿಗಳನ್ನು ಮೂಡಿಸಲು, ಬಟ್ಟೆಯ ಕೆಲವು ಭಾಗಗಳಲ್ಲಿ ದಾರಗಳನ್ನು ಡೈ ಮಾಡಲಾಗುತ್ತದೆ. ಇದೇ ಈ ಬಟ್ಟೆಯ ವೈಶಿಷ್ಟ್ಯ.
ಕುರ್ತಿ, ಸಾರ್ವಕಾಲಿಕವಾಗಿ ಚಾಲ್ತಿಯಲ್ಲಿರುವ ಉಡುಗೆ. ಹತ್ತಾರು ಬಗೆಯ ಕುರ್ತಿಗಳಲ್ಲಿ ಈಗ ಟ್ರೆಂಡ್ ಆಗುತ್ತಿರುವುದು ಇಕತ್ ಕುರ್ತಿಗಳು. ನೋಡಲು ಸ್ಟೈಲಿಶ್, ತೊಡಲು ಆರಾಮದಾಯಕ- ಇದು ಈ ಉಡುಗೆ ಇಷ್ಟವಾಗಲು ಕಾರಣ. ಮೂಲತಃ ಇಂಡೋನೇಷ್ಯಾದ ಅಲಂಕಾರಿಕಾ ತಂತ್ರ ಬಳಸಿ, ನೇಯ್ಗೆಯ ಮುನ್ನ ದಾರಗಳನ್ನು ಟೈ- ಡೈ ಮಾಡಲಾಗುತ್ತದೆ. ವಿಶಿಷ್ಟ ಆಕೃತಿಗಳನ್ನು ಮೂಡಿಸಲು, ಬಟ್ಟೆಯ ಕೆಲವು ಭಾಗಗಳಲ್ಲಿ ದಾರಗಳನ್ನು ಡೈ ಮಾಡಲಾಗುತ್ತದೆ. ಇದೇ ಬಟ್ಟೆಯ ವೈಶಿಷ್ಟ್ಯ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಿ, ಚಳಿಗಾಲದಲ್ಲಿ ಬೆಚ್ಚಗಿಡುವ ಹತ್ತಿಯ ಬಟ್ಟೆ ಬಳಸಿ ಈ ಇಕತ್ ಕುರ್ತಿಗಳನ್ನು ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಕೈಮಗ್ಗದ ಬಟ್ಟೆಗಳಲ್ಲಿ ಇದು ಕೂಡಾ ಒಂದು.
ಎಲ್ಲೆಡೆ ಇದೆ ಇಕತ್ ಹವಾ!: ಲ್ಯಾಟಿನ್ ಅಮೆರಿಕ, ಇರಾನ್, ಥೈಲ್ಯಾಂಡ್, ಕಾಂಬೋಡಿಯಾ, ಜಪಾನ್, ಭಾರತ ಸೇರಿದಂತೆ ಬಹಳಷ್ಟು ಕಡೆ ಇಕತ್ ಬಟ್ಟೆಗಳು ಪ್ರಸಿದ್ಧವಾಗಿವೆ. ಇಕತ್ ಬಟ್ಟೆಗಳಿಂದ ಕುರ್ತಿ ಅಷ್ಟೇ ಅಲ್ಲದೆ, ಲಂಗ, ಪ್ಯಾಂಟ್, ಜಾಕೆಟ್, ಬ್ಯಾಗ್, ಟೋಪಿ, ಪರ್ಸ್, ಪಾದರಕ್ಷೆ, ಅಂಗಿ, ಶಾರ್ಟ್ಸ್, ದುಪಟ್ಟಾ, ಚೂಡಿದಾರ, ಸಲ್ವಾರ್ ಕಮೀಜ್, ಅನಾರ್ಕಲಿ, ಇತ್ಯಾದಿ ವಸ್ತ್ರಗಳನ್ನು ತಯಾರಿಸಲಾಗುತ್ತದೆ.
ಚಂದದ ಜ್ಯುವೆಲರಿ ತೊಡಿ…: ಇಕತ್ ಕುರ್ತಿಗಳ ಜೊತೆ ಸಾಂಪ್ರದಾಯಿಕ ಆಭರಣಗಳು ಚೆನ್ನಾಗಿ ಕಾಣುತ್ತವೆ. ಬೆಳ್ಳಿ ಅಥವಾ ಆಕ್ಸಿಡೈಸ್ಡ್ ಜರ್ಮನ್ ಸಿಲ್ವರ್‌ನ ಜುಮ್ಕಿ, ಅಫ್ಘಾನ್ ಚಾಂದ್ ಬಾಲಿ, ಶಾಂಡೇಲಿಯರ್ (ನೇತಾಡುವ) ಕಿವಿ ಓಲೆ, ತೊಟ್ಟರೆ ಚೆನ್ನ. ಬೆಳ್ಳಿ ಅಥವಾ ಬೆಳ್ಳಿಯನ್ನು ಹೋಲುವ ಬಳೆಗಳು, ಸರ, ಉಂಗುರ, ಕಾಲ್ಗೆಜ್ಜೆ, ಹೇರ್ ಆಕ್ಸೆಸರೀಸ್, ಸೊಂಟ ಪಟ್ಟಿ ತೊಡಬಹುದು. ಹಾಗೆಯೇ ಕೊಲ್ಹಾಪುರಿ ಚಪ್ಪಲಿ, ಜುತ್ತಿ, ಮೋಜ್ರಿಯಂಥ ಭಾರತೀಯ ಶೈಲಿಯ ಪಾದರಕ್ಷೆಗಳು ಇಕತ್ ಡ್ರೆಸ್‌ಗೆ ಚೆನ್ನಾಗಿ ಹೊಂದುತ್ತವೆ.
ಶೂ ತೊಟ್ಟರೆ ಹೇಗೆ?: ಜೀನ್ಸ್ (ಡೆನಿಮ್ ಪ್ಯಾಂಟ್) ಜೊತೆ ಕುರ್ತಿ ತೊಡುವು ದಾದರೆ ಶೂಸ್, ಸ್ನೀಕರ್ಸ್ ಅಥವಾ ಬೂಟ್ ಚೆನ್ನ. ಇವು ಗಳಿಗೆ ಕಾಲರ್ ಇರಲೇ ಬೇಕೆಂ ದಿಲ್ಲ. ಇರುವುದಾದರೆ, ಚೈನೀಸ್ ಕಾಲರ್ ಚೆನ್ನಾಗಿ ಕಾಣುತ್ತದೆ. ತೋಳುಗಳೂ ಅಷ್ಟೇ- ಉದ್ದ, ಕಾಲು, ಅರ್ಧ, ಮುಕ್ಕಾಲು, ಅಥವಾ ಸ್ಲಿವ್‌ಲೆಸ್- ಹೀಗೆ ಎಲ್ಲ ಬಗೆಯ ಆಯ್ಕೆಗಳಿವೆ.
ಸಮಂತಾ ಕಾರಣ: ಇಕತ್ ಕುರ್ತಿಗಳು ಈಗ ಟ್ರೆಂಡ್ ಆಗಲು ಕಾರಣ, ಬಹುಭಾಷಾ ನಟಿ ಸಮಂತಾ ಅಕ್ಕಿನೇನಿ. ಇಕತ್ ಕುರ್ತಿ ತೊಟ್ಟು ತೋಟಗಾರಿಕೆ ಮಾಡುತ್ತಿರುವ ಚಿತ್ರವನ್ನು ಸಮಂತಾ, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಿಂದ ಪ್ರೇರಿತರಾದ ಜನ, ಇಕತ್ ಕುರ್ತಿ ತೊಟ್ಟು ಪೋಸು ಕೊಡುತ್ತಿದ್ದಾರೆ. ಹಾಗಾಗಿ, ಈ ದಿರಿಸು ಈಗ ಟ್ರೆಂಡ್ ಆಗುತ್ತಿದೆ. ಇದನ್ನು, ಪುರುಷರು ಕೂಡಾ ತೊಡಬಹುದು. ಮ್ಯಾಚಿಂಗ್ ಪ್ಯಾಂಟ್ ಅಥವಾ ಪ್ಲೇನ್ ಲೆಗಿಂಗ್ಸ್, ಚೂಡಿದಾರದ ಪ್ಯಾಂಟ್, ಪಲಾಝೊ, ಧೋತಿ, ಹ್ಯಾರೆಮ್ ಪ್ಯಾಂಟ್ ಜೊತೆ ಇದನ್ನು ಧರಿಸಬಹುದು.
* ಅದಿತಿಮಾನಸ ಟಿ.ಎಸ್.