ಮಹಾಲಿಂಗಪುರ : ಪಟ್ಟಣದ ಆರಾಧ್ಯದೈವ ಮಹಾಲಿಂಗೇಶ್ವರ ಜಾತ್ರೆಯ ನಿಮಿತ್ಯ ಶುಕ್ರವಾರ ಮಧ್ಯಾಹ್ನ 2 ರಿಂದ ರಾತ್ರಿ 8-30 ರವರೆಗೆ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಕ್ರೀಡಾ ಪ್ರೇಮಿಗಳು ಮತ್ತು ಕುಸ್ತಿ ಪ್ರೀಯರ ಮನ ತಣಿಸುವಲ್ಲಿ ಯಶಸ್ವಿಯಾಯಿತು.
ಕುಸ್ತಿ ಪಂದ್ಯಾವಳಿಯಲ್ಲಿ ಅಂತರಾಜ್ಯ ಮತ್ತು ಅಂತರ ಜಿಲ್ಲೆ ಸೇರಿದಂತೆ ಒಟ್ಟು 46 ಜೋಡಿ ಪೈಲ್ವಾನ್ ರು ಗೆಲುವಿಗಾಗಿ ಸೆಣಸಾಡಿದರು. ನಂಬರ್ 1 ಆಡಿದ ಮಧ್ಯಪ್ರದೇಶದ ದೀಪಕ ಕುಮಾರ ಪೈ. ಹರಿಯಾಣ ಅವರನ್ನು ಭಾರತ ಕೇಸರಿ ಜ್ಞಾನೇಶ್ವರ ಪೈ. ಜಮದಾಡೆ ಅವರು ಸೋಲಿಸಿ ಗೆಲುವಿನ ನಗೆ ಬೀರಿದರು.
ಮನರಂಜನೆ ನೀಡಿದ ನೇಪಾಳದ ದೇವತಾಪಾ : ನಂಬರ 2 ರಲ್ಲಿ ಆಡಿದ ಮಧ್ಯಪ್ರದೇಶದ ಅಮೀತಕುಮಾರ ಹಾಗೂ ನೇಪಾಳದ ದೇವತಾಪ ಪೈ ನಡುವಿನ ಕುಸ್ತಿಯು ಪಂದ್ಯಾವಳಿಯ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಇಬ್ಬರ ನಡುವೆ ನಡೆದ 30 ನಿಮಿಷಗಳ ರೋಚಕ ಕುಸ್ತಿಯಾಟದಲ್ಲಿ ನೇಪಾಳದ ದೇವತಾಪಾ ಅವರ ಕುಸ್ತಿ ಡಾವುಗಳು ಮತ್ತು ಎದುರಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದ ಚಾಣಾಕ್ಷ ಆಟವು ನೆರೆದಿದ್ದ 15 ಸಾವಿರಕ್ಕೂ ಅಧಿಕ ಜನರಿಗೆ ಸಕ್ಕತ್ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ತನ್ನ ಚಾಕಚಕ್ಯತೆಯ ಕುಸ್ತಿ ಡಾವುಗಳ ಮೂಲಕ ನೇಪಾಳದ ದೇವತಾಪಾ ಅವರು ಮಧ್ಯಪ್ರದೇಶದ ಅಮೀತಕುಮಾರ ಅವರನ್ನು ಚಿತ್ ಮಾಡುವ ಮೂಲಕ ಗೆಲುವಿನ ನಗೆ ಬೀರಿದರು. ಈ ಸಮಯದಲ್ಲಿ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆಯು ಮುಗಿಲು ಮುಟ್ಟಿತ್ತು.
ನಂಬರ 3 ರಲ್ಲಿ ಕುಸ್ತಿಯಾಡಿದ ಪಂಜಾಬ್ ಕೇಸರಿ ಜೋಗಿಂದರ ಪೈ ಅವರನ್ನು ಸೋಲಿಸಿ ದಾವಣಗೇರೆಯ ಕಾರ್ತಿಕ ಪೈ ಕಾಟೆ ಗೆದ್ದು ಬೀಗಿದರು. ನಂಬರ 4 ರಲ್ಲಿ ಪುಣೆಯ ಆದಿತ್ಯಾ ಪೈ ಅವರನ್ನು ಸೋಲಿಸಿ ನಿರ್ವಾನಟ್ಟಿಯ ಶಿವಾನಂದ ಪೈ ಗೆದ್ದರು. ನಂಬರ 5 ರಲ್ಲಿ ಹರಿಯಾಣದ ಲಸುನ್ ಪೈ. ಬಾಗವತ ಅವರನ್ನು ಚಿತ್ ಮಾಡುವ ಮೂಲಕ ಪುಣೆಯ ನಾಗರಾಜ ಪೈ ಬಸಿಡೋನಿ ಗೆಲುವು ಸಾಧಿಸಿದರು. ನಂಬರ 6 ರಲ್ಲಿ ಆಡಿದ ಗೋಡಗೇರಿಯ ಪ್ರಕಾಶ ಪೈ ಇಂಗಳಿ, ಕೋಲ್ಹಾಪೂರದ ಶಾರುಖ ಪೈ ಹಾಗೂ ಏಕೈಕ ಮಹಿಳಾ ಕುಸ್ತಿಯಲ್ಲಿ ಆಡಿದ ಬೆಳಗಾವಿಯ ಪ್ರೀತಿ ಚಿಕ್ಕೋಡಿ ಹಾಗೂ ಮಹಾಲಿಂಗಪುರದ ಮುಸ್ಮಾನ ನದಾಫ್ ಅವರ ನಡುವಿನ ಕುಸ್ತಿಗಳು ಸಮಬಲ ಸಾಧಿಸಿದವು.
ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ್, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ್, ಕುಸ್ತಿ ಕಮಿಟಿ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ, ಶಾಸಕ ಸಿದ್ದು ಸವದಿ, ಮುಖಂಡರಾದ ಸಿದ್ದು ಕೊಣ್ಣೂರ, ಪದ್ಮಜೀತ ನಾಡಗೌಡ, ಎ.ಆರ್.ಬೆಳಗಲಿ, ಸಿದ್ದುಗೌಡ ಪಾಟೀಲ್ ಸೇರಿದಂತೆ ಪುರಸಭೆ ಸದಸ್ಯರು, ಜಾತ್ರಾ ಕಮಿಟಿ ಮತ್ತು ಕುಸ್ತಿ ಕಮಿಟಿ ಪದಾಧಿಕಾರಿಗಳು ಇದ್ದರು. ಬಸನಗೌಡ ಪಾಟೀಲ್, ಹಣಮಂತ ಬುರುಡ, ಕೃಷ್ಣಗೌಡ ಪಾಟೀಲ್, ಬಸವರಾಜ ಘಂಟಿ, ಅಶೋಕಗೌಡ ಪಾಟೀಲ್, ಅಪ್ಪಾಶಿ ಕಾರಜೋಳ, ಮುದಕಪ್ಪ ಮಾಳಿ ಕುಸ್ತಿ ಪಂದ್ಯಾವಳಿಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಕುಸ್ತಿ ವಿಕ್ಷಣೆಗೆ ಬಂದ ಜನಸಾಗರ : ಪ್ರತಿವರ್ಷ ಮರುತೇರಿನ ದಿನ ನಡೆಯುತ್ತಿದ್ದ ಕುಸ್ತಿ ಪಂದ್ಯಾವಳಿಯನ್ನು ಇದೇ ಮೊದಲ ಬಾರಿಗೆ ಎರಡು ದಿನಗಳ ರಥೋತ್ಸವದ ಮರುದಿನ ಪ್ರತ್ಯೇಕವಾಗಿ ಹಮ್ಮಿಕೊಂಡ ಕುಸ್ತಿ ಪಂದ್ಯಾವಳಿ ನೋಡಲು ಸುಮಾರು 15 ಸಾವಿರ ಜನರು ಆಗಮಿಸಿದ್ದರು. ಜನರ ನಿಯಂತ್ರಣಕ್ಕಾಗಿ ಪೊಲೀಸ್ ರು ಹರಸಾಹಸ ಪಟ್ಟರು.