ಇಲ್ಲೊಂದು ಕುರಿ ಫಾರಂ ಇದೆ. ಕುರಿಗಳ ಮಧ್ಯೆ ಸ್ವತ್ಛ ಮನಸ್ಸುಳ್ಳ ನಾಯಕನಿದ್ದಾನೆ. ಕುರಿ ಇಲ್ಲಿ ಕೇವಲ ಸಾಂಕೇತಿಕವಾದರೂ ಅದೇ ಪರಿಸರದ ನಡುವೆ ಸಿನಿಮಾ ಕಟ್ಟಿಕೊಡಲಾಗಿದೆ. ಕೇಳಿದ ಕಥೆಯೆನಿಸಿದರೂ ಹೊಸತನದ ನಿರೂಪಣೆಯ ಸಿನಿಮಾವಿದು. ಹೆಸರು “ಕೇದಾರನಾಥ ಕುರಿ ಫಾರಂ’.
ಸರಳ ಕಥೆ, ಸರಳ ನಿರೂಪಣೆಯ ಈ ಚಿತ್ರ ಕೊನೆಗೊಂದಿಷ್ಟು ವಿರಳತೆ ತೋರುತ್ತದೆ. ಇಲ್ಲಿ ಸಂಭಾ ಷಣೆಗಳೇ ಪ್ರಧಾನ, ಅವುಗಳೇ ಕಥೆ ಯನ್ನು ಮುನ್ನಡೆಸಿಕೊಂಡು ಹೋಗುವೆ. ಹಳ್ಳಿ ಸೊಗಡು, ಸ್ನೇಹ- ಸಂಬಂಧಗಳು, ನಡೆಯಬಾರದ ಸನ್ನಿವೇಶ ಗಳು, ಸೇಡು, ಪ್ರತಿರೋಧ ಕೊನೆ ಗೊಂದು ವಿಚಿತ್ರ ಘಟನೆ… ಇದೇ ಕೇದಾರನಾಥ ಕುರಿ ಫಾರಂ ಸಿನಿಮಾ ಸರಕು.
ಕೇದಾರನಾಥನೆಂಬ ಮಾಲೀಕನ ಕುರಿ ಫಾರಂನಲ್ಲಿ ನಡೆಯುವ ಕಥೆಯಿದು. ಮಾಲೀಕನ ಆಳಾಗಿ, ಕುರಿ ಕಾಯುವ ಕೆಲಸ, ಗೆಳೆಯರೊಂದಿಗೆ ಕುಡಿತ… ಹೀಗೆ ಕಾಲ ಕಳೆಯುವ ನಾಯಕನ ಬಾಳಲ್ಲಿ ಬರುವ ನಾಯಕಿ, ಅವರಿಬ್ಬರ ಭೇಟಿ, ಪ್ರೇಮಾಂಕುರ, ಶೃಂಗಾರ ಹೀಗೆ ಸಾಗುವಾಗಲೇ ನಾಯಕಿ ತಂದೆಯ ಸಾವು ಕಥೆಗೆ ಒಂದು ವಿರಾಮ ನೀಡುತ್ತದೆ. ಮುಂದೆ ಏನಾಗುತ್ತದೆ ಎಂಬುದನ್ನು ಸಿನಿಮಾದಲ್ಲಿ ನೋಡಿದರೆ ಚೆಂದ.
ಚಿತ್ರದ ಮುಕ್ಕಾಲು ಭಾಗ ಒನ್ ವೇಯಲ್ಲಿ ಸಾಗಿದಂತೆ ಭಾಸವಾಗುತ್ತದೆ. ಇನ್ನೇನು ಚಿತ್ರ ಮುಗಿಯಬೇಕು ಅನ್ನುವಷ್ಟರಲ್ಲಿ ಕಥೆಯ ದಿಕ್ಕು ಬದಲಾವಣೆ, ಪ್ರೇಕ್ಷಕನಿಗೆ ಅಚ್ಚರಿಯೆನಿಸುವುದಂತೂ ಖಂಡಿತ. ಚಿತ್ರದ ಕೆಲವು ಸಂಭಾಷಣೆಗಳು ಮನ ಮುಟ್ಟುತ್ತವೆ. ಮಡೆನೂರು ಮನು ಹಾಗೂ ಶಿವಾನಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಟೆನ್ನಿಸ್ ಕೃಷ್ಣ, ಸುನಂದಾ ನಟಿಸಿದ್ದಾರೆ.
ನಿತೀಶ ಡಂಬಳ