“ಕುರಿ ಕಾಯೋನು’ ಹೀಗೊಂದು ಚಿತ್ರ ಆರಂಭವಾಗುತ್ತಿದೆ. ಮಹೇಶ್(ಓಂ) ಈ ಚಿತ್ರದ ಮೂಲಕ ನಿರ್ದೇಶಕನಾಗುತ್ತಿದ್ದಾರೆ. ಜೊತೆಗೆ ಹೀರೋ ಕೂಡ ಆಗುತ್ತಿದ್ದಾರೆ. ಅವರ ನಟನೆ ಹಾಗೂ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಅನಿವಾಸಿ ಕನ್ನಡಿಗರಾದ ರಾಜೇಶ್, ಪ್ರಿಯಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇತ್ತೀಚೆಗೆ ಶಾಸಕ ಭೈರತಿ ಬಸವರಾಜ್ ಅವರು “ಕುರಿ ಕಾಯೋನು’ ಚಿತ್ರದ ಟೈಟಲ್ ಲಾಂಚ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ನಿರ್ಮಾಪಕಿ ಪ್ರಿಯಾ ರಾಜೇಶ್ ಮಾತನಾಡಿ, “ನಾವು ಮಹೇಶ್ ಅವರರನ್ನು 29 ವರ್ಷಗಳಿಂದ ನೋಡುತ್ತಿದ್ದೇವೆ. ತುಂಬಾ ಕಷ್ಟಪಟ್ಟಿದ್ದಾರೆ. ಈಗ ಕುರಿ ಕಾಯೋನ ಚಿತ್ರವನ್ನು ಮಹೇಶ್ ಮಾಡುತ್ತಿದ್ದಾರೆ. ಅವರಿಗೆ ನನ್ನ ಹಾಗೂ ರಾಜೇಶ್ ಇಬ್ಬರದ್ದೂ ಪೂರ್ತಿ ಬೆಂಬಲವಿದೆ’ ಎಂದರು.
ನಿರ್ದೇಶಕ, ನಾಯಕ ಮಹೇಶ್ ಮಾತನಾಡಿ, “ಕುರಿ ಕಾಯೋನು’ ಕಥೆಯ ಬಗ್ಗೆ ಹೇಳಬೇಕೆಂದರೆ, ನಾಯಕ ಮುಗ್ಧ, ಆತನಿಗೆ ತನ್ನ ಕುರಿಗಳನ್ನು ಬಿಟ್ಟರೆ ಹೊರಗಿನ ಪ್ರಪಂಚವೇ ಗೊತ್ತಿರಲ್ಲ , ಕುರಿಯನ್ನು ಜೀವದಂತೆ ಪ್ರೀತಿಸುತ್ತಾನೆ. ಆ ಕುರಿಯನ್ನು ಯಾರೋ ಕೆಣಕಿದಾಗ ಆತ ಕೆರಳುತ್ತಾನೆ. ತನ್ನ ಕುರಿ ಕಳೆದುಹೋದಾಗ ವಿಚಲಿತನಾಗುತ್ತಾನೆ. ಗಣೇಶ ಹಬ್ಬಕ್ಕೆ ಮುಹೂರ್ತ ಮಾಡಿ,ಕೋಲಾರ, ಅಂತರಗಂಗೆ, ಮಲೆ ಮಾದೇಶ್ವರ ಬೆಟ್ಟ ಇತರೆಡೆ ಚಿತ್ರೀಕರಿಸುವ ಯೋಜನೆಯಿದೆ. ಚಿತ್ರದ ಕಥೆಗೆ ಟ್ವಿಸ್ಟ್ ನೀಡುವ ಸಿಎಂ ಪಾತ್ರವಿದ್ದು, ಅದನ್ನು ನಮ್ಮ ಶಾಸಕರಾದ ಭೈರತಿ ಬಸವರಾಜ್ ಅವರಿಂದಲೇ ಮಾಡಿಸುವ ಯೋಜನೆಯಿದೆ’ ಎಂದು ಹೇಳಿದರು.
ನಿರ್ಮಾಪಕರಾದ ರಾಜೇಶ್, ಹಿರಿಯ ನಟ ಕೋಟೆ ಪ್ರಭಾಕರ್, ವೀಣಾ ಮಹೇಶ್ ಚಿತ್ರದ ಕುರಿತು ಮಾತನಾಡಿದರು. ಕುರಿ ಕಾಯೋನು ಚಿತ್ರದಲ್ಲಿ 4 ಹಾಡುಗಳಿದ್ದು ರಾಘವೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.