ಹರಪನಹಳ್ಳಿ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನಾನು ಒಬ್ಬ ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷ ಅವಕಾಶ ನೀಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹಡಗಲಿ ತಾಲೂಕು ಇಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದರವರುತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 25 ವರ್ಷಗಳಿಂದ ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ್ದೇನೆ. ರಾಜಕೀಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರ ಕ್ಷೇತ್ರದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೆನೆ ಎಂದರು.
ನಾನೂ ಮೂಲತಃ ವಕೀಲನಾಗಿ, ವಕೀಲರ ಸಂಘದ ಅಧ್ಯಕ್ಷನಾಗಿ, ಬಳ್ಳಾರಿ ವಿವಿ ಸಂಘದ ಸಹ ಕಾರ್ಯದರ್ಶಿಯಾಗಿ, ಹರಪನಹಳ್ಳಿ ಎಡಿಬಿ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಹಡಗಲಿ ತಾಲೂಕಿನಲ್ಲಿ ಎರಡು ಬಾರಿ ತಾಲೂಕು ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ, ಬಿಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದೇನೆ. ಹರಪನಹಳ್ಳಿ ನನಗೆ ಹೊಸದೆನು ಅಲ್ಲ ಎಂದು ಹೇಳಿದರು.
ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಯಾರಾದರೂ ಆಕಾಂಕ್ಷಿಗಳಾಗಬಹುದು, ನಾನು ಯಾರ ನಾಯಕತ್ವದಲ್ಲಿ, ಯಾರ ಮಾತು ಕೇಳಿ ಈ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿ ಬಂದಿಲ್ಲ, ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಆಗಾಗಿ ನನಗೆ ಪಕ್ಷದ ಹೈಕಮಾಂಡ್ ಗುರುತಿಸಿ ನನಗೆ ಅವಕಾಶ ಕಲ್ಪಿಸಿಕೊಟ್ಟರೆ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.
ನಾನು ಕಾಂಗ್ರೆಸ್ ಪಕ್ಷದ ಬಣದಲ್ಲಿದ್ದೇನೆ, ಇಲ್ಲಿ ಯಾವುದೇ ಬಣಗಳಿಲ್ಲ ಈ ಕ್ಷೇತ್ರದಲ್ಲಿ 10 ಜನ ಆಕಾಂಕ್ಷಿಗಳು ಇದ್ದರು ಎಲ್ಲರೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಯಾರಿಗೆ ಟಿಕೆಟ್ ನೀಡಿದರು ಪಕ್ಷಕ್ಕೆ ಬದ್ದವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಭರತೇಶ ಜೋಗಿನರ್, ಪಟ್ನಾಮದ ಪರಶುರಾಮ, ರಾಗಿರೊಟ್ಟಿ ಜಾಕೀರ, ಚಪ್ಪರದಮನೆ ಮಹ್ಮದ್, ಜ್ಯೋತಿ ಈಶಪ್ಪ, ದಾದಾಪೀರ್, ಸೇರಿದಂತೆ ಇತರರು ಇದ್ದರು.