ಬೆಂಗಳೂರು: ಏಳು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಆಯುರ್ವೇದ ವೈದ್ಯನನ್ನು ಮನೆ ಮಾರಾಟದ ಹಣದ ವಿಚಾರಕ್ಕೆ ಮಧ್ಯವರ್ತಿಗಳೇ ಹತ್ಯೆಗೈದು ಲಕ್ಷ್ಮಣ ತೀರ್ಥ ನದಿಯ ಹಿನ್ನಿರಿಗೆ ಎಸೆದಿರುವ ಸಂಗತಿಯನ್ನು ಬನಶಂಕರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಜಯನಗರ ನಿವಾಸಿ ಆನಂದ್(44) ಕೊಲೆಯಾದ ಆಯುರ್ವೇದ ವೈದ್ಯ. ಕೃತ್ಯ ಎಸಗಿದ ಮಧ್ಯವರ್ತಿ ಗಳಾದ ಬನಶಂಕರಿ ನಿವಾಸಿಗಳಾದ ಮೊಹಮ್ಮದ್ ಗೌಸ್ ಅಲಿಯಾಸ್ ಗೌಸ್(31), ಈತನ ಸಹಚರರಾದ ನದೀಂ ಪಾಷಾ(32), ಸೈಯದ್ ನೂರ್ ಪಾಷಾ(39) ಬಂಧಿತರು.
ಆರೋಪಿಗಳು 2024ರ ಜುಲೈ 9ರಂದು ವೈದ್ಯ ಆನಂದ್‌ನನ್ನು ಹತ್ಯೆಗೈದು, ಮೃತದೇಹವನ್ನು ಮೈಸೂರಿನ ಲಕ್ಷ್ಮಣ ತೀರ್ಥ ನದಿಯ ಹಿನ್ನಿರಿಗೆ ಎಸೆದಿದ್ದರು. ಮತ್ತೂಂದೆಡೆ ಆನಂದ್ ಸಂಬಂಧಿ ರಘುಪತಿ ರಾಜಗೋಪಾಲ್ ಎಂಬುವರು ಬನಶಂಕರಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಸುದೀರ್ಘ ತನಿಖೆ ನಡೆಸಿದಾಗ ಆರೋಪಿಗಳ ಸುಳಿವು ಸಿಕ್ಕಿದ್ದು, ಇದೀಗ ಎಲ್ಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ?: ಜಯನಗರ 7ನೇ ಬ್ಲಾಕ್‌ನಲ್ಲಿ ಆನಂದ್ ವಾಸವಿದ್ದ ಮನೆಯನ್ನು ಆರೋಪಿಗಳಾದ ಮೊಹಮ್ಮದ್ ಗೌಸ್, ಕಿಶೋರ್, ಸಂತೋಷ್ ಎಂಬ ಮೂವರು ಮಧ್ಯವರ್ತಿಗಳ ಮೂಲಕ ಪ್ರಸಾದ್ ಎಂಬಾತನಿಗೆ 90 ಲಕ್ಷ ರೂ. ಮಾರಾಟ ಮಾಡಲಾಗಿತ್ತು. ಉಪನೋಂದಣಾಧಿಕಾರಿ ಕಚೇರಿಯಲ್ಲೂ ರಿಜಿಸ್ಟ್ರಾರ್ ಮಾಡಿಸಲಾಗಿತ್ತು. ಆ ವ್ಯವಹಾರದಲ್ಲಿ ಆನಂದ್‌ಗೆ ಬಂದಿದ್ದ 45 ಲಕ್ಷ ರೂ. ಅನ್ನು ಆರೋಪಿಯೇ ಪಡೆದುಕೊಂಡಿದ್ದು, ಕಿಶೋರ್, ಸಂತೋಷ್ ಹಾಗೂ ಲಕ್ಷ್ಮೀಪತಿ ಎಂಬವರು ಹಂಚಿಕೊಂಡಿದ್ದರು. ಮತ್ತೂಂದೆಡೆ ಆನಂದ್‌ಗೆ ಹೇಳದೆ ಮನೆ ಕೀಯನ್ನು ಪ್ರಸಾದ್ ಕೊಟ್ಟಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಮನೆಯನ್ನು ಧ್ವಂಸ ಮಾಡಲಾಗಿತ್ತು. ಈ ಮಧ್ಯೆ ಪ್ರಸಾದ್ ವ್ಯವ ಹಾರದಲ್ಲಿ ಕೆಲವೊಂದು ಗೊಂದಲ ಉಂಟಾಗಿದ್ದರಿಂದ ಆನಂದ್, ಪ್ರಸಾದ್ ವಿರುದ್ಧ ದೂರು ದಾಖಲಿಸಿದ್ದರು. ಹೀಗಾಗಿ ಮನೆ ಮಾರಿದ್ದ ಬಾಕಿ 45 ಲಕ್ಷ ರೂ. ಅನ್ನು ಪ್ರಕರಣ ವಾಪಸ್ ಪಡೆದಾಗ ಕೊಡುವುದಾಗಿ ಪ್ರಸಾದ್ ಹೇಳಿದ್ದ ಎಂಬುದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಮತ್ತೂಂದೆಡೆ ಮೈಸೂರಿನ ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ಆನಂದ್, ಪದೇ ಪದೆ ಮೊಹಮ್ಮದ್ ಗೌಸ್‌ಗೆ ಕರೆ ಮಾಡಿ ಬೆಂಗಳೂರಿಗೆ ಹೋಗೋಣ ಎಂದು ಒತ್ತಾಯಿಸುತ್ತಿದ್ದರು. ಅದರಿಂದ ಗಾಬರಿಗೊಂಡ ಆರೋಪಿ, ಒಂದು ವೇಳೆ ಆನಂದ್ ನನ್ನು ಬೆಂಗಳೂರಿಗೆ ಕರೆದೊಯ್ದರೆ ತನ್ನ ಕಳ್ಳಾಟ ಬಯಲಾಗುತ್ತದೆ ಎಂದು ನಿರ್ಧರಿಸಿ, ತನ್ನ ಇಬ್ಬರು ಸಹಚರರ ಜತೆ ಸೇರಿಕೊಂಡು ಆನಂದ್ ಹತ್ಯೆಗೆ ಸಂಚು ರೂಪಿಸಿದ್ದಾನೆ. ಅದರಂತೆ 2024ರ ಜುಲೈ 9ರಂದು ಆನಂದ್‌ನನ್ನು ಬೆಂಗಳೂರಿಗೆ ಕರೆದೊಯ್ಯುವುದಾಗಿ ಕಾರಿನಲ್ಲಿ ಹತ್ತಿಸಿಕೊಂಡ ಹಂತಕರು, ಬೆಳಗಿನ ಜಾವ 2.30ರ ಸುಮಾರಿಗೆ ಕೆಆರ್‌ಎಸ್ ಜಲಾಶಯ ಬಳಿಯಿರುವ ಸಾಗರಕಟ್ಟೆ ಸೇತುವೆ ಬಳಿ ಕಾರು ನಿಲ್ಲಿಸಿದ್ದರು. ಈ ವೇಳೆ ನಿದ್ದೆಯ ಮಂಪರಿನಲ್ಲಿದ್ದ ಆನಂದ್‌ನ ಕತ್ತಿಗೆ ನೈಲಾನ್ ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದರು. ಬಳಿಕ ಮೃತದೇಹವನ್ನು ಲಕ್ಷ್ಮಣ ತೀರ್ಥದ ಹಿನ್ನೀರಿನಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್: ಜೂನ್ 1ರಿಂದ ಆನಂದ್ ಸಂಪರ್ಕಕ್ಕೆ ಸಿಗದಿದ್ದಾಗ ಹುಡುಕಾಟ ನಡೆಸಿ ವಿಫಲವಾಗಿದ್ದ ಅವರ ಸಂಬಂಧಿ ರಘುಪತಿ ಎಂಬುವರು ಜುಲೈ 18ರಂದು ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಆನಂದ್ ಅವರನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಲು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಹ ಸಲ್ಲಿಸಿದ್ದರು. ಬಳಿಕ ನಾಪತ್ತೆಯಾಗಿರುವ ಆನಂದ್ ಅವರನ್ನು ಆದಷ್ಟು ಬೇಗ ಪತ್ತೆಹಚ್ಚುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿತ್ತು.
ಛತ್ತೀಸ್‌ಗಢದಲ್ಲಿ ವೈದ್ಯನ ಮೊಬೈಲ್ ಪತ್ತೆ: ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದಾಗ ಪೊಲೀಸರು, ಆನಂದ್ ಬಳಸುತ್ತಿದ್ದ ಮೊಬೈಲ್ ಅಕ್ಟೋಬರ್‌ನಲ್ಲಿ ಛತ್ತೀಸ್‌ಗಢದಲ್ಲಿ ಕಾರ್ಯ ನಿರ್ವಹಿಸಿರುವುದು ಪತ್ತೆಯಾಗಿತ್ತು. ಛತ್ತೀಸ್‌ಗಢಕ್ಕೆ ತೆರಳಿ ಮೊಬೈಲ್ ಬಳಸುತ್ತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಸೈಯ್ಯದ್ ನೂರ್ ಪಾಷಾನ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ಸೈಯ್ಯದ್ ನೂರ್ ಪಾಷಾನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹತ್ಯೆಯ ವಿಚಾರ ಬಯಲಾಗಿದೆ. ಬಳಿಕ ಇತರೆ ಆರೋಪಿಗಳ ಮಾಹಿತಿ ಸಂಗ್ರಹಿಸಿ ಇದೀಗ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಜುಲೈ 11ರಂದು ಮೈಸೂರಿನ ಯಳವಾಲ ಬಳಿ ಹಿನ್ನೀರಿನಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವ ಆನಂದ್ ಅವರದ್ದು ಎಂಬುದು ಖಚಿತಪಡಿಸಿಕೊಂಡ ಬಳಿಕ ನಾಪತ್ತೆ ಪ್ರಕರಣವನ್ನು ಹತ್ಯೆ ಪ್ರಕರಣವೆಂದು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಅಲ್ಲಿನ ಸ್ಥಳಿಯ ಪೊಲೀಸರಿಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.