ಕೊಪ್ಪಳ: ಕಳೆದ ನಾಲ್ಕಾರು ವರ್ಷಗಳ ಬಳಿಕ ತುಂಗಭದ್ರೆಗೆ ಜೀವಕಳೆ ಬಂದಿದೆ. ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿದೆ. ಆದರೆ ಮುನಿರಾಬಾದ್ ಸಮೀಪದ ಎಚ್ ಎಚ್-63 ಹಳೇ ಸೇತುವೆಯ ಗೇಟ್ ಬಳಿ ಜನರು ನೀರಿನ ಹರಿವು ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಆದರೆ ಹಳೆ ಸೇತುವೆ ಅಪಾಯವನ್ನೂ ಮರೆತಿದ್ದಾರೆ.
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತ್ಯ ಧಿಕ ಮಳೆಯಾದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಾಗಲೇ ಡ್ಯಾಂ ಬಹುತೇಕ ಭರ್ತಿಯಾಗಿದ್ದು, ಒಳ ಹರಿವಿನ ಪ್ರಮಾಣವೂ 50 ಸಾವಿರ ಕ್ಯೂಸೆಕ್‌ನಷ್ಟಿದೆ. ಡ್ಯಾಂನ ನೀರಿನ ಸಂಗ್ರಹಣಾ ಸಾಮರ್ಥ್ಯದ ಸ್ಥಿತಿಗತಿ ಅವಲೋಕಿಸಿದ ನೀರಾವರಿ ಇಲಾಖೆಯಿಂದ ಹೆಚ್ಚುವರಿ ನೀರನ್ನು ಜಲಾಶಯ ಮುಖ್ಯ ಗೇಟ್ ಗಳ ಮೂಲಕ ಹರಿಬಿಡಲಾಗಿದೆ.
ಹಲವು ವರ್ಷಗಳಿಂದ ಡ್ಯಾಂನಲ್ಲಿ ನೀರು ಸಂಗ್ರಹಣೆಯಾಗದೇ ಇರುವುದನ್ನು ನೋಡಿದ ಜನರು ಈಗ ನೀರಿನ ದೃಶ್ಯ ನೋಡಿ ಕಣ್ಮನ ತಣಿಸಿಕೊಳ್ಳಲು ತಂಡೋಪ ತಂಡವಾಗಿ ಡ್ಯಾಂನತ್ತ ಹೆಜ್ಜೆ ಹಾಕುತ್ತಿದ್ದಾರೆ. ಡ್ಯಾಂನ ಮುಂಭಾಗದ ಸುಂದರ ನೋಟವು ಸಮೀಪದ ರಾಷ್ಟ್ರೀಯ ಹೆದ್ದಾರಿ-63 ರಸ್ತೆಯಲ್ಲಿ ನಿಂತು ನೋಡಿದರೆ ಎಲ್ಲರ ಕಣ್ಣು ಕೊರೈಸುವಂತೆ ಕಾಣುತ್ತದೆ. ಅಲ್ಲಿ ಡ್ಯಾಂನಿಂದ ನೀರು ಹೊರ ಬರುತ್ತಿರುವ ದೃಷ್ಯವೂ ಎಲ್ಲರ ಕಣ್ಣನ್ನು ಅರಳಿಸುವಂತೆ ಮಾಡುತ್ತದೆ.
ಆದರೆ ಡ್ಯಾಂ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗಾಗಿಯೇ ಹಲವು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಆ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಅದರ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಹಳೆ ಸೇತುವೆಯಲ್ಲಿ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಇದನ್ನೇ ಸದ್ಭಳಕೆ ಮಾಡಿಕೊಳ್ಳುತ್ತಿರುವ ಜನರು ಹಳೇ ಸೇತುವೆ ಮೇಲೆ ಕುಳಿತು ಡ್ಯಾಂನಿಂದ ನೀರು ಹರಿದು ಬರುತ್ತಿರುವ ಫೋಟೋ ಹಾಗೂ ವೀಡಿಯೋ ಹಾಗೂ ಸೇಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಮಕ್ಕಳು, ವೃದ್ಧರು ಸೇರಿದಂತೆ ಯುವಕರು ಸೇತುವೆ ಮೇಲೆ ಓಡಾಡುತ್ತಿದ್ದಾರೆ. ಸೇತುವೆ ಕೆಳ ಭಾಗದಲ್ಲಿ ನೀರಿನ ರಭಸವೂ ಹೆಚ್ಚಾಗಿದೆ. ಅಲ್ಲದೇ, ಸೇತುವೆ ಶಿಥಿಲಾವಸ್ಥೆಯಲ್ಲಿದೆ. ಅದರ ಮೇಲೆ ಜನದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಜನರಿಗೆ ಅಪಾಯಕ್ಕೆ ಆಹ್ವಾನ ನೀಡುವಂತ ಸ್ಥಿತಿಯಲ್ಲಿದೆ.
ಹಳೆ ಸೇತುವೆಗೆ ಎಡ ಹಾಗೂ ಬಲ ಭಾಗದಲ್ಲಿ ಯಾವುದೇ ರಕ್ಷಣಾ ಗೋಡೆಯಿಲ್ಲ. ಹೀಗಾಗಿ ಜನರು ಸ್ವಲ್ಪ ಆಯ ತಪ್ಪಿದರೂ ಭೋರ್ಗರೆಯುವ ನೀರಿನಲ್ಲಿ ಬೀಳುವುದು ನಿಶ್ಚಿತ. ನೀರಿನ ಮೋಜಿನಲ್ಲಿಯೇ ತೊಡಗುತ್ತಿರುವ ಯುವಕರು ಬೈಕ್‌ನಲ್ಲಿ ರೈಡಿಂಗ್ ಮಾಡುತ್ತಿದ್ದಾರೆ. ಇದು ಜನರಿಗೆ ಕಿರಿಕಿರಿ ಮಾಡಲಾಂಭಿಸಿದೆ.
ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವು ತುಂಗಭದ್ರಾ ಡ್ಯಾಂ ಮುಂಭಾಗದಲ್ಲಿನ ಹಳೆ ಸೇತುವೆಯ ಬಳಿ ಭದ್ರತಾ ವ್ಯವಸ್ಥೆ ಕೈಗೊಳ್ಳುವ ಅಗತ್ಯವಿದೆ. ಅವಘಡಗಳು ಸಂಭವಿಸುವ ಮುನ್ನ ಜಾಗೃತರಾಗಬೇಕಿದೆ. ರಕ್ಷಣಾ ಗೋಡೆ ಇಲ್ಲವೇ ಬ್ಯಾರೆಕೇಡ್‌ಗಳ ಅಳವಡಿಸುವ ಅವಶ್ಯಕತೆಯಿದೆ ಎನ್ನುತ್ತಿದ್ದಾರೆ ಸ್ಥಳೀಯ ಪ್ರಜ್ಞಾವಂತ ಜನರು.
ತುಂಗಭದ್ರಾ ಡ್ಯಾಂ ಮುಂಭಾಗದಲ್ಲಿ ಹಳೆ ಸೇತುವೆ ಮೇಲೆ ಜನರು ನೀರು ಹರಿಯುವುದನ್ನು ನೋಡುತ್ತಿದ್ದಾರೆ. ಆದರೆ
ಸೇತುವೆ ತುಂಬಾ ಹಳೆಯದಾಗಿದ್ದು, ಕುಸಿಯುವ ಸಾಧ್ಯತೆಯಿದೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಳೆ ಸೇತುವೆಯ ಸುತ್ತ ಭದ್ರತೆ ಒದಗಿಸಿ ಜಾಗೃತಿ ಮೂಡಿಸಬೇಕಿದೆ.
ವೀರೇಂದ್ರ ಮುನಿರಾಬಾದ್,
ಸ್ಥಳೀಯ ನಿವಾಸಿ.