ಪಣಜಿ: ಸಿನಿಮಾಕ್ಕೂ ಬಾಲ್ಯಕ್ಕೂ ಬಹಳ ಸಂಬಂಧವಿದೆ. ಹಲವು ಸಿನಿಮಾಗಳ ಕಥಾವಸ್ತುಗಳು ಬಾಲ್ಯದ ನೆನಪುಗಳೇ. ಈ ಬಾರಿಯ ಇಫಿ ಚಿತ್ರೋತ್ಸವದಲ್ಲಿ ಮಕ್ಕಳ ಬಾಲ್ಯ ಮತ್ತು ಮಕ್ಕಳ ಕನಸನ್ನು ಹೇಳುವಂಥ ಆರು ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.
ಯುನಿಸೆಫ್‌ನ ಸಹಯೋಗದಲ್ಲಿ ಬಿತ್ತರಿಸುತ್ತಿರುವ ವಿಭಾಗವಿದು. ಹೇಗೆ ಕನಸುಗಳು, ಛಲ, ಸಾಮರ್ಥ್ಯ ಮಕ್ಕಳ ಬಾಲ್ಯವನ್ನು ರೂಪಿಸುತ್ತವೆ ಹಾಗೂ ಆ ಹೊತ್ತಿನ ಸಾಮಾಜಿಕ ಹಾಗೂ ಆರ್ಥಿಕ ಸನ್ನಿವೇಶಗಳ ಪಾತ್ರವೇನು ಎಂಬುದನ್ನು ಕಟ್ಟಿಕೊಡುವ ಪ್ರಯತ್ನ ಈ ವಿಭಾಗದ್ದು. ಕೆಪರ್‌ನೌಮ್ (Capernaum), ನಾನಿ ತೆರಿ ಮೊರ್ನಿ, ಸುಮಿ, ಟು ಫ್ರೆಂಡ್ಸ್, ಉಡ್ ಜಾ ನನ್ಹೆ ದಿಲ್ ಹಾಗೂ ಧನಕ್ ಪ್ರದರ್ಶನಗೊಳ್ಳುತ್ತಿರುವ ಆರು ಚಿತ್ರಗಳು. ಇವೆಲ್ಲವೂ ಮಕ್ಕಳಿಗೆ ಸ್ಫೂರ್ತಿ ತುಂಬುವಂಥ ಚಿತ್ರಗಳು.
ಕೆಲವು ಮಕ್ಕಳ ಬಾಲ್ಯದ ಶೌರ್ಯದ ಕಥನವೂ ಈ ಚಿತ್ರಗಳ ಕಥಾವಸ್ತುಗಳಾಗಿವೆ. ಉದಾಹರಣೆಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ ಬಾಲಕಿಯೊಬ್ಬಳು ನೀರಿನಲ್ಲಿ ಮುಳುಗುತ್ತಿದ್ದ ತನ್ನ ಆಜ್ಜಿಯನ್ನು ರಕ್ಷಿಸಿದ ಕಥೆಯೂ ಒಂದು ಚಿತ್ರದ ಕಥಾವಸ್ತುವಾಗಿದೆ. ಹಾಗೆಯೇ ಸ್ಫೂರ್ತಿ ತುಂಬಬಲ್ಲಂತ ಹಲವು ಕಥೆಗಳಿವೆ. ಸುಮಿ ಅಂಥ ಮತ್ತೊಂದು ಪಾತ್ರ. ಬಡ ಕುಟುಂಬದ ಸುಮಿ ತನ್ನ ಊರಿಂದ ಬಹಳ ದೂರದಲ್ಲಿರುವ ಶಾಲೆಗೆ ಹೋಗಲು ಬೈಸಿಕಲ್ ನ್ನು ಹೇಗಾದರೂ ಹೊಂದಬೇಕೆಂಬ ಕನಸು ಹೊಂದುತ್ತಾಳೆ. ಅದನ್ನು ಈಡೇರಿಸಿಕೊಳ್ಳಲು ಹತ್ತಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವೆಲ್ಲವನ್ನೂ ಗೆದ್ದು ಕೊನೆಗೂ ತನ್ನ ಕನಸನ್ನು ಈಡೇರಿಸಿಕೊಳ್ಳುವ ಸುಮಿ ಬದುಕನ್ನಷ್ಟೇ ಗೆಲ್ಲುವುದಿಲ್ಲ ; ಹಲವು ಮಕ್ಕಳಿಗೆ ಮಾದರಿಯಾಗುತ್ತಾಳೆ.
ಮತ್ತೊಂದು ಸಿನಿಮಾ ಇಬ್ಬರು ಗೆಳೆಯರದ್ದು. ಬಾಬ್ರಿ ಮಸೀದಿ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ನಡೆಯುವ ಕಥಾನಕ. ಸಮಾಜದ ಮತಭೇದ ಹೆಚ್ಚುತ್ತಿರುವ ಮಧ್ಯೆಯೂ ಹೇಗೆ ಇಬ್ಬರು ಗೆಳೆಯರು ಹೇಗೆ ಬದುಕುತ್ತಾರೆ, ತಮ್ಮ ಬಾಲ್ಯ, ಜೀವನವನ್ನು ಸ್ವೀಕರಿಸುತ್ತಾರೆ ಎಂಬುದು ಕಥಾವಸ್ತು. ಇದೇ ಮೊದಲ ಬಾರಿಗೆ ಮಕ್ಕಳ ಸಿನಿಮಾ ಎಂಬ ವಿಭಾಗ ಮಾದರಿಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಅಯೋಜನೆ ಮಾಡಲಾಗಿದೆ.