ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಾ.ಕೆ.ಸುಧಾಕರ್, ಅತೃಪ್ತ ಶಾಸಕರ ತಂಡ ಸೇರಲು ಮುಂಬೈಗೆ ತೆರಳಿದ್ದಾರೆ. ಎಂಟಿಬಿ ನಾಗರಾಜ್ ಜತೆ ಡಾ.ಕೆ.ಸುಧಾಕರ್ ಅವರ ಮನವೊಲಿಸಲು ಕಾಂಗ್ರೆಸ್ ನಾಯಕರು ಶನಿವಾರ ತೀವ್ರ ಪ್ರಯತ್ನ ಪಟ್ಟರಾದರೂ ಸುಧಾಕರ್ ಯಾರಿಗೂ ಸಿಗಲಿಲ್ಲ.
“ವಿಧಾನಸೌಧದಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ. ಪಕ್ಷದಲ್ಲಿ ಇದ್ದಾಗ ಸಾಕಷ್ಟು ನೋವು ಆನುಭವಿಸಿದ್ದೇನೆ. ಹೀಗಾಗಿ, ನನ್ನ ದಾರಿ ನನಗೆ, ನಿಮ್ಮ ದಾರಿ ನಿಮಗೆ’ ಎಂದು ಡಾ.ಕೆ.ಸುಧಾಕರ್ ಹೇಳಿ ಹೋಗಿದ್ದಾರೆಂದು ತಿಳಿದು ಬಂದಿದೆ.
ಎಂಟಿಬಿ ನಾಗರಾಜ್ ಜತೆ ಮುಂಬೈಗೆ ತೆರಳಲು ಮೊದಲೇ ನಿರ್ಧಾರವಾಗಿತ್ತು. ಆದರೆ, ಎಂಟಿಬಿ ನಾಗರಾಜ್ ಅವರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಸಿದ್ದರಾಮಯ್ಯ ಮನೆಗೆ ಕರೆದೊಯ್ದು ಮನವೊಲಿಸುವ ಪ್ರಯತ್ನ ನಡೆಸಿದ್ದರು. ಎಂಟಿಬಿ ನಾಗರಾಜ್‌ಗಾಗಿ ಕಾಯುತ್ತಿದ್ದ ಡಾ.ಕೆ.ಸುಧಾಕರ್, ಕೊನೆಗೆ ರಾತ್ರಿ 7 ಗಂಟೆಗೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ಮುಂಬೈಗೆ ತೆರಳಿದರು.
ಹೀಗಾಗಿ, ಸುಧಾಕರ್ ಮನವೊಲಿಸಲು ಎಂಟಿಬಿ ನಾಗರಾಜ್ ಜತೆ ಹೋಗಿದ್ದ ಸಚಿವ ಜಮೀರ್ ಅಹಮದ್, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಬರಿಗೈಲಿ ವಾಪಸ್ಸಾಗಿದ್ದಾರೆ. ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಿಂದ ತಮ್ಮ ಮನವೊಲಿಕೆಗೆ ಬರುತ್ತಿರುವ ವಿಚಾರ ತಿಳಿದ ಸುಧಾಕರ್, ಯಾರ ಕೈಗೂ ಸಿಗದೆ ಮುಂಬೈಗೆ ತೆರಳಿದ್ದಾರೆ.
ಹೀಗಾಗಿ, ಎಂಟಿಬಿ ನಾಗರಾಜ್ ಅವರು ಮತ್ತೆ ಸಿದ್ದರಾಮಯ್ಯ ನಿವಾಸಕ್ಕೆ ವಾಪಸ್ಸಾಗಿ ಡಾ.ಸುಧಾಕರ್ ಕೈಗೆ ಸಿಗದ ಬಗ್ಗೆ ಮಾಹಿತಿ ನೀಡಿದರು. ಆಗ, ಸಿದ್ದರಾಮಯ್ಯ ನಿವಾಸದಿಂದಲೇ ಅವರ ಮೊಬೈಲ್‌ಗೆ ಕರ ಮಾಡಿದರೂ, ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಹೇಳಲಾಗಿದೆ.