Advertisement

Mangaluru: ರಸ್ತೆ ಬದಿಯಲ್ಲಿ ನಿಂತರೆ ಸೊಳ್ಳೆ ಕಚ್ಚೋದು ಖಚಿತ!

05:51 PM Aug 12, 2024 | Team Udayavani |

ಮಹಾನಗರ: ನಗರದ ರಸ್ತೆ ಬದಿಗಳೇ ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣಗಳಾಗಿ ಮಾರ್ಪಾಡಾಗಿದೆಯೇ ಎನ್ನುವಂತೆ ಕೆಲವು ರಸ್ತೆಗಳು ಕಾಣಿಸುತ್ತಿದೆ. ರಸ್ತೆ ಬದಿಯಲ್ಲಿ ಹಾಗೇ ಸುಮ್ಮನೆ ಹೋಗಿ ನಿಂತರೆ ಸಾಕು ಹಗಲು ವೇಳೆಯಲ್ಲೇ ಸೊಳ್ಳೆಗಳು ಬಂದು ಕಾಲು, ಕೈಗಳಿಗೆ ಕಚ್ಚುತ್ತಿವೆ!

Advertisement

ಡೆಂಗ್ಯೂ, ಮಲೇರಿಯಾ ಸಹಿತ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲವನ್ನು ನಿರಂತರವಾಗಿ ಮಾಡುತ್ತಿದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎನ್ನುವುದು ಎಲ್ಲರೂ ನೀಡುವ ಮೊದಲ ಸೂಚನೆ. ಆದರೆ ಈ ರೀತಿ ರಸ್ತೆ ಬದಿಯಲ್ಲೇ ಸೊಳ್ಳೆಗಳು ಕಚ್ಚಿದರೆ ಏನು ಮಾಡುವುದು ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ. ಆದ್ದರಿಂದ ಇದೊಂದು ಗಂಭೀರ ವಿಚಾರವಾಗಿದ್ದು, ಸಂಬಂಧಪಟ್ಟವರು ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ತ್ಯಾಜ್ಯ ರಾಶಿ ಇರುವಲ್ಲೇ ಹೆಚ್ಚು

ತ್ಯಾಜ್ಯ ರಾಶಿ ಇರುವಲ್ಲೇ ಸೊಳ್ಳೆಗಳ ಕಾಟ ಹೆಚ್ಚಿದೆ. ಮರಗಳು ಇರುವಲ್ಲಿ, ತರಗೆಲೆಗಳು ಬೀಳುವಲ್ಲಿಯೂ ಸೊಳ್ಳೆಗಳು ಹೆಚ್ಚಾಗಿ ಹಾರಾಡುತ್ತಿವೆ. ಮುಖ್ಯವಾಗಿ ನಗರದ ವಿವಿಧ ಒಳ ರಸ್ತೆಗಳಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ರಾಶಿಗಳು ಕಂಡು ಬರುತ್ತಿದ್ದು, ಪ್ಲಾಸ್ಟಿಕ್‌ ತಟ್ಟೆ, ಲೋಟಗಳು, ಬಾಕ್ಸ್‌ ಮಾದರಿಯ ಥರ್ಮೊಕೋಲ್‌ ಮೊದಲಾದವುಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುವ ತಾಣಗಳಾಗಿವೆ. ಕೆಲವು ಕಡೆಗಳಲ್ಲಿ ರಸ್ತೆಯನ್ನು ಗುಡಿಸುವವರೂ ತ್ಯಾಜ್ಯವನ್ನು ತೆರವು ಮಾಡದೆ ರಸ್ತೆ ಬದಿಯಲ್ಲೇ ರಾಶಿ ಹಾಕಿರುವುದೂ ಕಂಡು ಬಂದಿದೆ. ಇದರಿಂದ ಸೊಳ್ಳೆಗಳು ಅವುಗಳಲ್ಲಿ ಕುಳಿತುಕೊಂಡು ಯಾರಾದರೂ ಅಲ್ಲಿ ಬಂದು ನಿಂತಾಗ ಕಚ್ಚುತ್ತವೆ.

ಕತ್ತಲಾಗುತ್ತಿದ್ದಂತೆ ಹಿಂಡಾಗಿ ಬರುವ ಸೊಳ್ಳೆ

Advertisement

ಕತ್ತಲಾಗುತ್ತಿದ್ದಂತೆ ಸೊಳ್ಳೆ ಕಾಟ ಹೆಚ್ಚಾಗುತ್ತಿದೆ. ಕೆಲವು ರಸ್ತೆಗಳಲ್ಲಿ ರಾತ್ರಿ ವೇಳೆ, ಮುಂಜಾನೆ ವೇಳೆ ವಾಕಿಂಗ್‌ ಮಾಡುವವರಿಗೂ ಸೊಳ್ಳೆ ಕಾಟ ನೀಡುತ್ತಿದೆ. ಬೇಸಗೆಯಲ್ಲೂ ಸೊಳ್ಳೆ ಕಾಟ ಇತ್ತು, ಆದರೆ ಮಳೆ ಆರಂಭವಾಗುತ್ತಿದ್ದಂತೆ ಸೊಳ್ಳೆ ಕಾಟ ಹೆಚ್ಚಾಗಿದೆ ಎನ್ನುತ್ತಾರೆ ಪಾಂಡೇಶ್ವರ ಭಾಗದಲ್ಲಿ ಪ್ರತಿನಿತ್ಯ ಮುಂಜಾನೆ ವೇಳೆ ವಾಕಿಂಗ್‌ ಮಾಡುವ ರೋಬರ್ಟ್‌ ವಾಸ್‌.

ತಾಜ್ಯ ತೆರವಿಗೆ ಕ್ರಮ ವಹಿಸಿ

ನಗರದ ಮಾರ್ಕೆಟ್‌ ರಸ್ತೆ, ಸ್ಟೇಟ್‌ ಬ್ಯಾಂಕ್‌ ಪರಿಸರ, ಪಾಂಡೇಶ್ವರ, ಕೋರ್ಟ್‌ ರಸ್ತೆ, ರೈಲ್ವೇ ಸ್ಟೇಷನ್‌ ರಸ್ತೆ ಸೇರಿದಂತೆ ನಗರ ಸಾಕಷ್ಟು ಸ್ಥಳಗಳಲ್ಲಿ ರಸ್ತೆಬದಿಯಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಹಸಿಕಸ-ಒಣ ಕಸ ಎಲ್ಲವೂ ಮಿಶ್ರವಾಗಿರುತ್ತದೆ. ಹಸಿ ಕಸ ಕೊಳೆತು ವಾಸನೆಯೂ ಬೀರುತ್ತದೆ. ಪ್ಲಾಸ್ಟಿಕ್‌ ಚೀಲದಲ್ಲಿ ಇದನ್ನು ಕಟ್ಟಿ ಎಸೆದಿದ್ದರೂ ನಾಯಿಗಳು ಎಳೆದಾಡಿ ಚಲ್ಲಾಪಿಲ್ಲಿ ಮಾಡುತ್ತಿವೆ. ಆದ್ದದಿಂದ ರಸ್ತೆ ಬದಿ ತ್ಯಾಜ್ಯ ಎಸೆಯದಂತೆ ತಡೆಯುವ ಅಥವಾ ಪ್ರತಿ ದಿನ ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂಜಾಗ್ರತೆ ಅಗತ್ಯ

ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕದಂತೆ ಈಗಾಗಲೇ ಹಲವು ಬಾರಿ ಸೂಚನೆ ನೀಡಲಾಗಿದೆ. ಸ್ವತ್ಛತ ಕಾರ್ಮಿಕರಿಗೆ ಪ್ರತಿ ದಿನ ಸ್ವತ್ಛತ ಕಾರ್ಯ ಕೈಗೊಳ್ಳುವಂತೆಯೂ ಸೂಚನೆ ನೀಡಲಾಗಿದೆ. ಮಳೆಗಾಲವಾಗಿರುವುದರಿಂದ ಸಾಕಷ್ಟು ಮುಂಜಾಗ್ರತೆ ವಹಿಸುವ ಅಗತ್ಯವಿದ್ದು, ಆರೋಗ್ಯ ವಿಭಾಗಕ್ಕೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗುವುದು. – ಸುಧೀರ್‌ ಶೆಟ್ಟಿ ಕಣ್ಣೂರು, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next