ವಿಜಯಪುರ: ನನ್ನ ಬಗ್ಗೆ ಹಗುರವಾಗಿ ಮಾತನಾಡಿದ ವಾಟಾಳ ಸೇರಿದಂತೆ ಇತರರನ್ನು ವಿಧಾನಸೌಧ ಸದನಕ್ಕೆ ಕರೆಸಿ ಛಿಮಾರಿ ಹಾಕುವ ಅಧಿಕಾರ ನಮಗಿದೆ. ಶಾಸಕರ ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷನಾಗಿರುವ ನಾನು ಒಂದೇ ಒಂದು ದೂರು ನೀಡಿದರೆ ಸದನಕ್ಕೆ ಛೀಮಾರಿ ಹಾಕಿಸಿ, ಜೈಲಿಗೆ ಕಳಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದರು.
ಬುಧವಾರ ನಗರದಲ್ಲಿ ಡಿಸೆಂಬರ್ 5 ರ ಕರ್ನಾಟಕ ಬಂದ್ ವಿರೋಧಿಸಿ ತಮ್ಮ ನೇತೃತ್ವದಲ್ಲಿ ಜರುಗಿದ ಹಿಂದೂಪರ ಸಂಘಟನೆಗಳ ಪ್ರಮುಖರು, ತಮ್ಮ ಬೆಂಬಲಿಗರ ಸಭೆಯಲ್ಲಿ ವಾಟಾಳ್ ಹಾಗೂ ಕನ್ನಡ ಪರ ಸಂಘಟನೆಗಳ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, ನನಗೆ ಕನ್ನಡ ಕಲಿಸುವ ಅಗತ್ಯವಿಲ್ಲ. ಕನ್ನಡದ ಹೆಸರಿನಲ್ಲಿ ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಪದ ಬಳಸಿ ನಿಂದಿಸುವ ಕೆಲಸ ನಡೆದಿದೆ. ಕನ್ನಡದಲ್ಲಿ ಬೈಗುಳ ಹುಟ್ಟಿದ್ದೇ ವಿಜಯಪುರ ಜಿಲ್ಲೆಯಲ್ಲಿ. ನಾವು ಬೈಗುಳ ಆರಂಭಿಸಿದರೆ ಸರಿಯಲ್ಲ ಎಂದು ಸುಮ್ಮನಿದ್ದೇವೆ. ವಾಟಾಳ ನಾಗರಾಜ ಅವರಂಥ ಅಡ್ಜಸ್ಟಮೆಂಟ್ ಜನರಿಂದ ನಾನೇನೂ ಕಲಿಯಬೇಕಿಲ್ಲ ಎಂದು ವಾಟಾಳ್ ಹಾಗೂ ಡಿ.5 ರಂದು ಬಂದ್ ಕರೆ ನೀಡಿರುವವರಿಗೆ ತಿರುಗೇಟು ನೀಡಿದ್ದಾರೆ.
ವಾಟಾಳ್ ನಾಗರಾಜ ಬಾಯಿಗೆ ಬಂದಂತೆ ಮಾತಾಡುವುದನ್ನು ಬಿಡಬೇಕು. ಅಡ್ಜಸ್ಟಮೆಂಟ್ ರಾಜಕಾರಣಕ್ಕೆ ನಾನು ಹೆದರುವ ವ್ಯಕ್ತಿಯಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಅತ್ಯಂತ ಕೆಟ್ಟ ಪದ ಬಳಸಿ ನಿಂದಿಸಿದ್ದು, ಇಂಥ ಪದ ಬಳಸುವವರು ಕನ್ನಡಿಗರಾ. ಬೈಗುಳ ಹುಟ್ಟಿದ್ದೆ ವಿಜಯಪುರದಲ್ಲಿ, ನಮಗೂ ಬರುತ್ತೆ, ಆದರೆ ನಾವು ಸುಮ್ಮನಿದ್ದೇವೆ ಎಂದರೆ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ನನಗೆ ಬುದ್ದಿ ಭ್ರಮಣೆಯಾಗಿದೆ ಎನ್ನುವ ವಾಟಾಳ ನಾಗರಾಜ ನಾನು ಜನರಿಂದಲೇ ಐದು ಬಾರಿ ಚುನಾಯಿತ ಪ್ರತಿನಿಧಿ ಆಗಿದ್ದೇನೆ ಎಂಬುದನ್ನು ಮರೆಯಬಾರದು. ಶಾಸಕರಾದವರಿಗೆ ಕನಿಷ್ಟ ಗೌರವ ಕೊಡದ ವಾಟಾಳ ಇನ್ನಾದರೂ ಎಚ್ಚರಿಕೆಯಿಂದ ಮಾತನಾಡಬೇಕು. ಇಲ್ಲವಾದಲ್ಲಿ ಶಾಸಕರ ಹಕ್ಕು ಬಾಧ್ಯತಾ ಸಮೀತಿ ಅಧ್ಯಕ್ಷನಾಗಿರುವ ನಾನು ವಾಟಾಳ್ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿ, ದೂರು ನೀಡಿದರೆ ವರ್ಷ ಪೂರ್ತಿ ಜೈಲು ಸೇರಬೇಕಾಗುತ್ತದೆ. 1 ಲಕ್ಷ ರೂ. ದಂಡ ತೆರಬೇಕಾಗುತ್ತದೆ. ಇನ್ಮೇಲೆ ಬಾಯಿಗೆ ಬಂದಂತೆ ಮಾತಾಡಿದರೆ, ಕಪ್ಪು ಮಸಿ ಬಳೀತಿನಿ ಅಂತೆಲ್ಲ ಹಾರಾಡಿದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನಾರು ತಿಂಗಳಲ್ಲಿ ವಿಜಯಪುರ ನೋಡಲು ಕರ್ನಾಟಕದ ಜನರು ಬರುವಂತೆ ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ. ಕನ್ನಡದ ಹೆಸರಿನಲ್ಲಿ ಜೀವನ ನಡೆಸುವ ವ್ಯಕ್ತಿಗಳು ಕರೆ ನೀಡಿರುವ ಕರ್ನಾಟಕ ಬಂದ್‍ನ್ನು ರಾಜ್ಯದ ಜನರು ಸಂಪೂರ್ಣ ವಿಫಲ ಮಾಡಬೇಕು. ಕನ್ನಡದ ಹೆಸರಿನಲ್ಲಿ ಜನರನ್ನು ಅನಗತ್ಯ ಪ್ರಚೋದಿಸಿ ಸಮಾಜದಲ್ಲಿ ಶಾಂತಿ ಕದಡುವ ಇಂಥವರನ್ನು ಜನರೇ ಬುದ್ದಿ ಕಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಗೋ ಸಂರಕ್ಷಣೆ ಮಾಡಿದವರು ಶಿವಾಜಿ ಮಹಾರಾಜ. ಅಗರ್ ಶಿವಾಜಿ ನಾ ಹೋತಾತೋ ಸಬ್ ಕಾ ಸುನ್ನತ್ ಹೋತಾ ಥಾ ಎಂದ ಯತ್ನಾಳ, ಬಸನಗೌಡ ಮರಾಠರಿಗೆ ಹುಟ್ಟಿದಾನಾ ಎಂದು ಕೇಳುತ್ತಾರೆ ಕೆಲವರು. ಹೌದು ನಾನು ಹುಟ್ಟಿದೇನೆ, ನೀವೆಲ್ಲ ಕ್ರಾಸ್ ಬ್ರೀಡ್‍ಗೆ ಹುಟ್ಟಿದಿರಾ ಎಂದು ವಾಗ್ದಾಳಿ ನಡೆಸಿದರು.
ಪ್ರತಿಯೊಂದರಲ್ಲೂ ಜಾತಿ ಬೇಧ ಹುಟ್ಟಿಸುತ್ತಿದ್ದಾರೆ. ವೀರಶೈವ-ಲಿಂಗಾಯತ ಎಂದು ಈಗಾ ಬೇಧ ಶುರುವಾಗಿದೆ. ವೀರಶೈವರು-ಲಿಂಗಾಯತರು ಬೇರೆ ಬೇರೆ ರೀತಿ ವಿಭೂತಿ ಹಚ್ಚುತ್ತಾರಾ ಎಂದು ಪ್ರಶ್ನಿಸಿದ ಅವರು, ಕನ್ನಡ-ಮರಾಠಾ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ.
ನೀ ಏನೇ ಮಾಡೋದಿದ್ದರೂ ಬೆಂಗಳೂರಲ್ಲೇ, ಇಲ್ಲೇನು ನಿನ್ನ ಆಟ ನಡೆಯದು ಎಂದು ವಾಟಾಳ ಹೆಸರು ತೆಗದು ಕುಟುಕಿದ ಯತ್ನಾಳ, ನೀವು ನನ್ನ ಪ್ರತಿಕೃತಿ ಸುಟ್ಟಷ್ಟು ನನ್ನ ಆಯುಷ್ಯ 10 ವರ್ಷ ಹೆಚ್ಚಾಗುತ್ತೆ ಎಂದರು.