ಕೀವ್(ಉಕ್ರೇನ್): ಯುದ್ಧದ ಸಂದರ್ಭದಲ್ಲಿ ರಷ್ಯಾದಿಂದ ಕಡಿಮೆ ಬೆಲೆಗೆ ತೈಲವನ್ನು ಖರೀದಿಸಿರುವ ಭಾರತದ ವಿರುದ್ಧ ಉಕ್ರೇನ್ ವಿದೇಶಾಂಗ ಸಚಿವ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ನೈತಿಕವಾಗಿ ಸಮರ್ಪಕವಾದ ನಿರ್ಧಾರವಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ವೈರಲ್ ವಿಡಿಯೋ: ಅಯ್ಯೋ.. ಆನೆ ಪ್ರತಿಮೆ ಮಧ್ಯೆ ಸಿಲುಕಿ ಹೊರಗೆ ಬರಲಾರದೆ ಭಕ್ತನ ಹೆಣಗಾಟ!
ರಷ್ಯಾದ ದಾಳಿಯಿಂದಾಗಿ ಉಕ್ರೇನ್ ನಿವಾಸಿಗಳು ಬಿಕ್ಕಟ್ಟಿಗೆ ಸಿಲುಕಿದ್ದು, ಮತ್ತೊಂದೆಡೆ ಸಾವು, ನೋವು ಅನುಭವಿಸುತ್ತಿದ್ದಾರೆ. ಇಂತಹ ಅವಕಾಶವನ್ನು ಬಳಸಿಕೊಂಡು ಭಾರತ ರಷ್ಯಾದಿಂದ ಅಗ್ಗದ ಬೆಲೆಗೆ ತೈಲ ಖರೀದಿಸುತ್ತಿದೆ ಎಂದು ಡೆಮೈಟ್ರೋ ಕುಲೇಬಾ ಎನ್ ಡಿಟಿವಿ ಜತೆಗಿನ ವಿಶೇಷ ಸಂದರ್ಶನದಲ್ಲಿ ದೂರಿದ್ದಾರೆ.
ಒಂದು ವೇಳೆ ನಿಮಗೆ (ಭಾರತ) ಲಾಭವಾಗಿದ್ದರೆ ಅದು ನಮ್ಮ (ಉಕ್ರೇನ್) ಸೋಲಿನಿಂದಾಗಿ, ಈ ನಿಟ್ಟಿನಲ್ಲಿ ನಮ್ಮ ಸಂಕಷ್ಟ ಬಗೆಹರಿಸಲು ನಿಮ್ಮಿಂದ (ಭಾರತ) ನೆರವು ಸಿಗಬಹುದೆಂಬ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.
ರಷ್ಯಾದಿಂದ ಭಾರತ ಅಗ್ಗದ ಬೆಲೆಗೆ ತೈಲವನ್ನು ಖರೀದಿಸುವ ನಿರ್ಧಾರವನ್ನು ಉಕ್ರೇನ್ ಜನ ಅನುಭವಿಸುತ್ತಿರುವ ನರಕಯಾತನೆಯ ಕನ್ನಡಿಯ ಮೂಲಕ ನೋಡಬೇಕಾಗಿದೆ ಎಂಬುದಾಗಿ ಕುಲೇಬಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಪಾತ್ರ ವಹಿಸಬೇಕೆಂದು ಕುಲೇಬಾ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.