ಬೆಂಗಳೂರು: “ಪುಕ್ಕಟೆ ಜಮೀನು ಸಿಗುತ್ತೆ ಎಂದಾದರೆ ಅದಕ್ಕಾಗಿ ಜನ ಮಣ್ಣು ತಿನ್ನಲಿಕ್ಕೂ ಹೇಸುವುದಿಲ್ಲ; ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಂಜೂರು ಮಾಡಿಕೊಳ್ಳಲು ಅರ್ಜಿ ಸಲ್ಲಿಸುತ್ತಾರೆ. 50 ರೂ. ಕೊಟ್ಟರೆ ಅಂತಹ ಸುಳ್ಳು ಅರ್ಜಿಗಳಿಗೆ ಮೊಹರು ಹಾಕುವ ಅಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಇರುತ್ತಾರೆ.
ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರೆ ಅವರೇ ರಾಜಕಾರಣಿಗಳ ಮತ ಬ್ಯಾಂಕ್ ಆಗಿರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ’ ಹೀಗೆಂದು ಬೆಂಗಳೂರು ವಿಭಾಗದ ಭೂ ಮಂಜೂರಾತಿ ವ್ಯಾಜ್ಯವೊಂದರ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್ ಸತ್ಯನಾರಾಯಣ ಬೇಸರದ ಮಾತುಗಳನ್ನಾಡಿದರು.
45 ವರ್ಷಗಳಿಂದ ತಾನು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದೇನೆ. ಆ ಜಮೀನು ನನ್ನ ಸ್ವಾಧೀನದಲ್ಲಿದೆ. ಅದನ್ನು ತನಗೆ ಮಂಜೂರು ಮಾಡಲು ಸಲ್ಲಿಸಿದ್ದ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ. ಆದ್ದರಿಂದ ಸದರಿ ಜಮೀನನ್ನು ತನಗೇ ಮಂಜೂರು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು. ಅರ್ಜಿ ಮತ್ತು ಅದರೊಂದಿಗೆ ಲಗತ್ತಿಸಲಾಗಿದ್ದ ದಾಖಲೆಗಳ ಪರಿಶೀಲನೆ ವೇಳೆ ಅರ್ಜಿದಾರನಿಗೆ ವಯಸ್ಸು 40 ವರ್ಷ ಇದ್ದು, ಆತ ಕಳೆದ 45 ವರ್ಷದಿಂದ ಜಮೀನು ಸಾಗುವಳಿ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಅಂಶವನ್ನು ಗಮನಿಸಿದ ನ್ಯಾಯಮೂರ್ತಿಗಳು ಕೋಪಗೊಂಡು ಅರ್ಜಿದಾರರ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
“ಏನ್ರೀ ವಕೀಲರೇ… ನಿಮ್ಮ ಅರ್ಜಿದಾರನಿಗೆ ಸದ್ಯ 40 ವರ್ಷ ವಯಸ್ಸು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆದರೆ ಕಳೆದ 45 ವರ್ಷಗಳಿಂದ ಆತ ಸರ್ಕಾರಿ ಜಮೀನಿನ ಸಾಗುವಳಿ ಮಾಡುತ್ತಿದ್ದು, ಆ ಜಮೀನು ಆತನ ಸ್ವಾಧೀನದಲ್ಲಿದೆ ಎಂದು ಹೇಳುತ್ತಿದ್ದೀರಿ. ಅದ್ಹೇಗೆ ಸಾಧ್ಯ, ಅರ್ಜಿದಾರನ ವಯಸ್ಸೇ ಈಗ 40 ವರ್ಷ ಆಗಿರಬೇಕಾದರೆ, ಆತ 45 ವರ್ಷದಿಂದ ಸಾಗುವಳಿ ಮಾಡಿಕೊಂಡಿರಲು ಹೇಗೆ ಸಾಧ್ಯ?’ ಎಂದು ಕಟುವಾಗಿ ಪ್ರಶ್ನಿಸಿದರು.
ಏನೂ ಮಾಡಲು ಸಾಧ್ಯವಿಲ್ಲ: “ಸರ್ಕಾರದ ಜಮೀನು ಉಚಿತವಾಗಿ ಸಿಗುವುದೆಂದರೆ ಜನ ಮಣ್ಣು ಸಹ ತಿನ್ನೋಕೂ ಹೇಸುವುದಿಲ್ಲ ಅಲ್ಲವೇ? ಸುಳ್ಳು ಅರ್ಜಿ ಹಾಗೂ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸರ್ಕಾರಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಲಾಗುತ್ತದೆ. 50 ರೂ. ನೀಡಿದರೆ ಸರ್ಕಾರಿ ಕಚೇರಿಗಳಲ್ಲಿ ಇಂತಹ ಅರ್ಜಿಗಳಿಗೆ ಮೊಹರು ಹಾಕುತ್ತಾರೆ. ಅಂತಹ ಸರ್ಕಾರಿ ನೌಕರರನ್ನು ಕಚೇರಿಗಳಿಂದ ಹೊರ ಹಾಕಬೇಕು.
ನಕಲಿ ದಾಖಲೆಗೊಂದಿಗೆ ಸುಳ್ಳು ಅರ್ಜಿ ಸಲ್ಲಿಸುವವರನ್ನು ವಿಚಾರಣೆಗೊಳಪಡಿಸಬೇಕು. ಆದರೆ, ಅವರೇ ರಾಜಕಾರಣಿಗಳ ಮತ ಬ್ಯಾಂಕ್ ಆಗಿರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಕಟುವಾಗಿ ನುಡಿದರು. ಬಳಿಕ ಅರ್ಜಿದಾರ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿರುವ ಕಾರಣ ಈ ಅರ್ಜಿ ವಿಚಾರಣೆ ನಡೆಸುವುದಕ್ಕೆ ಯೋಗ್ಯವಾಗಿಲ್ಲ ಎಂದು ತಿಳಿಸಿದ ನ್ಯಾಯಮೂರ್ತಿಗಳು ಅರ್ಜಿಯನ್ನು ತಿರಸ್ಕರಿಸಿದರು.