Advertisement

ನನಗಿಂತ ಬುದ್ಧಿವಂತರು ಸಿಕ್ಕರೆ ಅವರನ್ನೇ ರಾಜ್ಯಾಧ್ಯಕ್ಷ ಮಾಡಲಿ

08:46 PM Jun 25, 2023 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ವಿ. ಸೋಮಣ್ಣ, ಇದೀಗ “ನನಗಿಂತ ಬುದ್ಧಿವಂತರು ಸಿಕ್ಕರೆ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ’ ಎಂದು ಹೇಳುವ ಮೂಲಕ ಪಕ್ಷಕ್ಕೆ ಹೊಸ ಸವಾಲು ಹಾಕಿದ್ದಾರೆ.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ. ಒಂದು ವೇಳೆ ನನಗಿಂತ ಬುದ್ಧಿವಂತರು ಯಾರಾದರೂ ಇದ್ದರೆ ಅವರಿಗೇ ಅಧ್ಯಕ್ಷ ಸ್ಥಾನ ಕೊಡಲಿ. ನಾನು ಪಕ್ಷ ಹೇಳುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಹೇಳಿದರು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬೌಂಡರಿ, ಸಿಕ್ಸರ್‌ ಬಾರಿಸಲು ಹೋಗಿ ಬೌಲ್ಡ್‌ ಆಗಿದ್ದೇನೆ. ನಾನು ಸುಮ್ಮನೆ ಕೂತಿರುವವನಲ್ಲ, ನಿದ್ದೆ ಮಾಡಲ್ಲ, ಬೇರೆಯವರಿಗೂ ನಿದ್ದೆ ಮಾಡಲು ಬಿಡಲ್ಲ, ನಾನು ಸನ್ಯಾಸಿ ಅಲ್ಲ, ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ. ಪಕ್ಷ ಏನು ತೀರ್ಮಾನ ಮಾಡುತ್ತದೆ ಎಂದು ನೋಡಬೇಕು.

ನಾನು ಪಕ್ಷ ಹೇಳಿದ ಕೆಲಸ ಮಾಡಿದ್ದೇನೆ. ಎಂಥಹ ಸಂದರ್ಭದಲ್ಲೂ ವಿಚಲಿತನಾಗಿಲ್ಲ. ಪಕ್ಷ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲದಿದ್ದರೆ ಬೇಸರ ಇಲ್ಲ ಎಂದೂ ಇದೇ ವೇಳೆ ಸೋಮಣ್ಣ ಹೇಳಿದರು.

ಪಕ್ಷ ನೀಡಿದ ಕೆಲಸಗಳನ್ನು ತಲೆ ಮೇಲೆ ಹೊತ್ತು ಮಾಡಿದ್ದೇನೆ. ಇಲ್ಲಿಯವರೆಗೂ 12 ಚುನಾವಣೆಗಳನ್ನು ನೋಡಿದ್ದೇನೆ. 7 ರಿಂದ 8 ಉಪಚುನಾವಣೆಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಕ್ಷ ಕೊಟ್ಟಿದೆ. ಆದರೆ ಕಳೆದ ಒಂದೂವರೆ ತಿಂಗಳಿಂದ ನಿರುದ್ಯೋಗಿಯಾಗಿ ಕುಳಿತಿದ್ದೇನೆ. ನನಗೆ ಸುಮ್ಮನೆ ಕುಳಿತು ಅಭ್ಯಾಸವಿಲ್ಲ. ಸದಾ ಚಟುವಟಿಕೆಯಿಂದ ಇರುವವ. ನಾನು ಏನು ಕಳೆದುಕೊಂಡಿದ್ದೇನೋ ಅದನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.

Advertisement

2019ರ ಚಿಂಚೋಳ್ಳಿ ಮತ್ತು ಕುಂದಗೋಳ ಉಪಚುನಾವಣೆ ವಿಚಾರ ಪ್ರಸ್ತಾಪಿಸಿದ ಸೋಮಣ್ಣ , ಚಿಂಚೋಳಿ ಚುನಾವಣೆಯಲ್ಲಿ ಸೋಮಣ್ಣ, ರವಿಕುಮಾರ್‌ ಚುನಾವಣಾ ಉಸ್ತುವಾರಿಯಾಗಿದ್ದರೆ ಕುಂದಗೋಳಕ್ಕೆ ಯಡಿಯೂರಪ್ಪ, ಪ್ರಹ್ಲಾದ್‌ ಜೋಶಿ, ಡಿ.ವಿ. ಸದಾನಂದಗೌಡರು ಉಸ್ತುವಾರಿಗಳು ಆಗ ಬಿಜೆಪಿ ಚಿಂಚೋಳಿ ಗೆದ್ದು, ಕುಂದಗೋಳದಲ್ಲಿ ಸೋಲು ಅನುಭವಿಸಿತು ಎಂದು ಯಡಿಯೂರಪ್ಪ ವಿರುದ್ಧ ತಮಗಿರುವ ಅಸಮಧಾನವನ್ನು ವ್ಯಕ್ತಪಡಿಸಿದರು.

ಪ್ರತಿಫ‌ಲ ಬಯಸಿ ಕೆಲಸ ಮಾಡಬಾರದು. ನಮ್ಮೆಲ್ಲರಿಗಿಂತ ದೊಡ್ಡವರು ಈ ದೇಶಕ್ಕೆ ಸಮರ್ಪಣೆ ಮಾಡಿಕೊಂಡಿದ್ದಾರೆ. ಯಾರ ಜೊತೆಗೂ ರಾಜೀ ಮಾಡಿಕೊಳ್ಳದೇ ಪಕ್ಷದ ಕೆಲಸ ಮಾಡಬೇಕು. ಆದರೆ ಕೆಲವು ವಿಚಾರಗಳ ಬಗ್ಗೆ ಮಾತಾಡಿದರೆ ಕೆಲವರಿಗೆ ತಪ್ಪಾಗಿ ಕಾಣಿಸುತ್ತದೆ ಎಂದು ಮಾಚಿ ಸಚಿವರು ನೋವು ವ್ಯಕ್ತಪಡಿಸಿದರು.

ಕಟೀಲ್‌ ಕಾರ್ಯವೈಖರಿಗೆ ಮೆಚ್ಚುಗೆ
ಹಾಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಸಂಭಾವಿತ, ಸಂಸ್ಕಾರ ಇರುವ ವ್ಯಕ್ತಿ. ಇಡೀ ರಾಜ್ಯವನ್ನು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಪ್ರವಾಸ ಮಾಡಿದ್ದಾರೆ. ಅವರ ಶ್ರಮ ದುಡಿಮೆ, ದೂರದೃಷ್ಟಿ ಚಿಂತನೆಗಳಿಂದ ಪಕ್ಷ ಇಲ್ಲಿವರೆಗೆ ಬೆಳೆದಿದೆ ಎಂದು ಕಟೀಲ್‌ ಕಾರ್ಯವೈಖರಿಗೆ ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next