Advertisement

ತೆರಿಗೆ ಪಾವತಿಸದಿದ್ದರೆ ಸಂಕಷ್ಟ ಖಚಿತ: ಅಗರವಾಲ್‌

08:28 AM Feb 15, 2019 | |

ಹರಿಹರ: ತಮ್ಮ ಆದಾಯದ ಪ್ರಮಾಣಕ್ಕೆ ತಕ್ಕಂತೆ ತೆರಿಗೆ ಪಾವತಿಸದವರು ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸುವುದು ಖಚಿತ ಎಂದು ದಾವಣಗೆರೆ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸುನಿಲ್‌ ಕುಮಾರ್‌ ಅಗರವಾಲ್‌ ಹೇಳಿದರು.

Advertisement

ನಗರದ ಎಸ್‌ಜೆವಿಪಿ ಕಾಲೇಜಿನ ಸಭಾಂಗಣದಲ್ಲಿ ಆದಾಯ ತೆರಿಗೆ ಇಲಾಖೆಯು ಚೇಂಬರ್‌ ಆಫ್‌ ಕಾಮರ್ಸ್‌ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಆದಾಯ ತೆರಿಗೆ ಕಾನೂನುಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಯಲ್ಲಿ ಅತ್ಯಂತ ವ್ಯವಸ್ಥಿತ ತಂತ್ರಜ್ಞಾನಗಳಿದ್ದು, ಹೆಚ್ಚುವರಿ ಆದಾಯ ಹೊಂದಿದವರು ಒಂದಲ್ಲ ಒಂದು ದಿನ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನ್ಯಾಯಯುತವಾಗಿ ಹಾಗೂ ನಿಯಮಿತವಾಗಿ ತೆರಿಗೆ ಹಣ ಪಾವತಿಸುವವರಿಗೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ತೊಂದರೆಯಿಲ್ಲ. ಆದಾಯ ತೆರಿಗೆ ಇಲಾಖೆ ಸ್ನೇಹಮಹಿಯಾಗಿದ್ದು, ತೆರಿಗೆದಾರರಿಗೆ ಅಗತ್ಯ ಸಲಹೆ-ಸೂಚನೆ ನೀಡಲಾಗುತ್ತಿದೆ. ಒಂದು ವೇಳೆ ಹೆಚ್ಚುವರಿ ತೆರಿಗೆ
ಪಾವತಿಸಿದಲ್ಲಿ ಅದನ್ನು ಇಲಾಖೆ 24 ಗಂಟೆಗಳೊಳಗೆ ಮರು ಪಾವತಿ ಮಾಡಲಾಗುತ್ತದೆ ಎಂದರು. 

ತೆರಿಗೆ ಪಾವತಿ ಸರಳೀಕರಣಕ್ಕೆ ಇಲಾಖೆ ಈಗಾಗಲೆ ಹಲವಾರು ಕ್ರಮ ಕೈಗೊಂಡಿದ್ದು, ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ತೆರಿಗೆದಾಯಕ ಆದಾಯ ಹೊಂದಿರುವ ಪ್ರತಿಯೊಬ್ಬ ನಾಗರಿಕರೂ ಪ್ರಮಾಣಿಕವಾಗಿ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ದೇಶದ ಆರ್ಥಿಕ, ಸಾಮಾಜಿಕ ಭದ್ರತೆಗಳಿಗೂ ಪೂರಕವಾಗುತ್ತದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಶಂಕರ್‌ ಖಟಾವಕರ್‌, ಆದಾಯ ತೆರಿಗೆ ಅಧಿಕಾರಿಗಳು ಅನಗತ್ಯವಾಗಿ ತೊಂದರೆ ನೀಡುತ್ತಾರೆ, ಕಿರುಕುಳ ಕೊಡುತ್ತಾರೆ ಎಂಬುದೆಲ್ಲಾ ಸುಳ್ಳು. ನಮ್ಮ ವ್ಯಾಪಾರಿಗಳೊಂದಿಗೆ ತೆರಿಗೆ ಇಲಾಖೆ ಯಾವಾಗಲೂ ಸ್ನೇಹಮಹಿಯಾಗಿ ವರ್ತಿಸಿದ್ದು, ಮುಂದೆಯೂ ಇದೇ ರೀತಿ ಸಹಕಾರದ ನೀರೀಕ್ಷೆ ಮಾಡುತ್ತೇವೆ ಎಂದರು.

Advertisement

ಆದಾಯ ತೆರಿಗೆ ಅಧಿಕಾರಿಗಳಾದ ಭಾಸ್ಕರ್‌ ಎಸ್‌., ಮಂಜು ರಮಣಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಎಸ್‌. ಜೆ.ವಿ.ಪಿ. ವಿದ್ಯಾಪೀಠದ ಆಡಳಿತಾಧಿಕಾರಿ ಪಾಟೀಲ್‌ ಎಸ್‌.ಎಲ್‌., ದಾವಣಗೆರೆ ಚೇಂಬರ್‌ ಆಫ್‌ ಕಾಮರ್ಸ್‌ ಕಾರ್ಯದರ್ಶಿ ಅಜ್ಜಂಪುರ ಶಂಭುಲಿಂಗಪ್ಪ, ಬಿ.ಜಿ.ಬಸವರಾಜಪ್ಪ, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿರಾಧೇಶ, ಡಿ.ಆರ್‌. ಶಂಕರ್‌, ಚೇಂಬರ್‌ ಆಫ್‌ ಕಾಮರ್ಸ್‌ ಕಾರ್ಯದರ್ಶಿ ಬಸವರಾಜಪ್ಪ ಹಲಸಬಾಳು, ತೆರಿಗೆ ಸಲಹೆಗಾರರಾದ ಎಚ್‌.ಎಸ್‌. ಮಂಜುನಾಥ್‌ ಸುಬ್ರಮಣ್ಯ, ಶೇಖರ್‌, ಶಶಿಧರ್‌, ಲಿಂಗರಾಜ, ಆರ್‌.ಆರ್‌. ಕಾಂತರಾಜ್‌, ಭೂಮಿಕಾ ಸೇರಿದಂತೆ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next