Advertisement

ಹುಡುಕುತ ಬರುವೆಯಾ ಹೇಳದೆ ಹೋದರೆ… 

12:30 AM Jan 15, 2019 | |

ಗಂಟೆ ಹನ್ನೆರಡೂವರೆ ಆಯಿತು. ಅಂದರೆ ಪರೀಕ್ಷೆಗಳು ಮುಗಿದಿರುತ್ತವೆ. ಅವಳೂ ಪೇಪರ್‌ ಕೊಟ್ಟು ನಿರಾಳವಾಗಿ ಹೊರಬಂದಿರುತ್ತಾಳೆ. ಎಲ್ಲವೂ ಸರಿ ಇದ್ದಿದ್ದರೆ, ಕ್ಯಾಂಪಸ್ಸಿನ ಗುಲ್‌ ಮೊಹರ್‌ ಮರದಡಿಯ ಕಲ್ಲು ಬೆಂಚಿನಲ್ಲಿ ಇಬ್ಬರೂ ಪಠ್ಯಗಳನ್ನು ಚರ್ಚಿಸುತ್ತಿದ್ದರು. ಇದೊಂದೇ ಪರೀಕ್ಷೆ ಬಾಕಿ ಇದ್ದದ್ದು.  ಅವನ  ದುರದೃಷ್ಟ, ಎರಡು ದಿನಗಳಿಂದ ಕಾಡುತ್ತಿರುವ ಜ್ವರ ಇವತ್ತು ಪರೀಕ್ಷೆ ಬರೆಯುವ ಅವಕಾಶವನ್ನೇ ನೀಡಲಿಲ್ಲ. ಇನ್ನು ಸಪ್ಲಿಮೆಂಟರಿಗಾಗಿ ಕಾಯಬೇಕು… ಓದಿದ್ದೆಲ್ಲ ವ್ಯರ್ಥ! ಅವನಿಗೆ ಬೇಸರವಾಯಿತು.    
ಪೇಪರ್‌ ಹೇಗಿತ್ತೆಂದು ವಿಚಾರಿಸೋಣ ಎಂದುಕೊಂಡು, ಅವಳಿಗೆ ಸಂದೇಶ ಕಳುಹಿಸಿದ. 

Advertisement

“ಎಲ್ಲಿದ್ದೀಯಾ…?’

“ನಮ್ಮ ಮಾಮೂಲಿ ಮಾಲ್‌ನ ಫ‌ುಡ್‌ ಕೋರ್ಟ್‌ನಲ್ಲಿ’ ಕ್ಷಣದಲ್ಲೇ ಉತ್ತರ ಬಂತು. 

“ಪೇಪರ್‌ ಸುಲಭ ಇತ್ತಾ? ನೀನು ಬಿಡು ಬರೆದಿರ್ತೀಯ…’  

“ಯಾರಿಗೆ ಗೊತ್ತು ?ನಾನು ಮಾರ್ನಿಂಗ್‌ ಷೋ ಮುಗಿಸಿ ಈಗ ಹೊರಗೆ ಬಂದೆ’

Advertisement

ಅವನಿಗೆ ಅರ್ಥವಾಗಲಿಲ್ಲ, “ಪರೀಕ್ಷೆಗೆ ಹೋಗಲಿಲ್ವ? ಚೆನ್ನಾಗಿಯೆ ಓದಿದ್ಯಲ್ಲಾ?’

“ನೀನು ಬರೆಯದ ಪೇಪರ್‌ ನನಗೂ  ಬೇಡ ಅಂತ ತೀರ್ಮಾನಿಸಿ ಹೋಗಲಿಲ್ಲ…ಬರೆದರೆ ಒಟ್ಟಿಗೇ ಬರೆದರಾಯ್ತು. ಮೊದಲು ನಿನ್ನ ಜ್ವರ ಇಳಿಯಲಿ, ಬೇಗ ಗುಣಮುಖನಾಗು…’ 

ನಕ್ಕಂತಾಯ್ತು ಸಂದೇಶದಲ್ಲೇ… 

“ಯಾಕೆ  ಹೀಗೆ ಮಾಡಿದ್ದು? ಓದಿನ ವಿಷಯದಲ್ಲೂ ತುಂಟಾಟವಾ?… ಲಘುವಾಗಿ ತೆಗೆದುಕೊಳ್ಳುವ ಸಂಗತಿಯಲ್ಲ ಇದು… ‘
“ಸರಿ ಸಿಟ್ಟಾಗಬೇಡ. ಫ್ರೆಂಡ್ಸ್‌ ಯಾರೂ ನಿನಗೆ ಮೆಸೇಜ್‌ ಮಾಡಲಿಲ್ವ?’

“ಇಲ್ಲ, ಮೊಬೈಲ್‌ ಸ್ವಿಚ್‌ ಆಫ್ ಮಾಡಿ, ಮಾತ್ರೆ ನುಂಗಿ ಮಲಗಿದ್ದೆ… ನೀನು ಪರೀಕ್ಷೆಗೆ ಹೋಗದಿದ್ದದ್ದು ನನಗೆ ಬೇಸರ…’

“ನನಗೆ ಹಾಗೇನಿಲ್ಲ…’ಹಲ್ಕಿರಿದಳು ಇಮೋಜಿ ಕಳಿಸಿ.  

ಅವಳು ಸಿಕ್ಕಾಪಟ್ಟೆ ಕಾಡುತ್ತಾಳೆ, ಆದರೂ ಅವಳೆಂದರೆ ಅವನಿಗೆ ಇಷ್ಟ.

ಅಷ್ಟರಲ್ಲೇ ಅವನ ಗೆಳೆಯನಿಂದ ಬಂದಿದ್ದ ಮೆಸೇಜ್‌ ಕಡೆಗೆ ಗಮನ ಹರಿಯಿತು, “ನಿನ್ನ ಮಟ್ಟಿಗೆ ಸಿಹಿಸುದ್ದಿ, ಪ್ರಶ್ನೆ ಪತ್ರಿಕೆ ಬೇರೆ ಯಾವುದೋ ಕೇಂದ್ರದಲ್ಲಿ ಬಹಿರಂಗವಾಗಿದ್ದರಿಂದ ಹತ್ತು ದಿನಗಳ ಮಟ್ಟಿಗೆ ಮುಂದಕ್ಕೆ ಹೋಗಿದೆ. ಯು ಆರ್‌ ಲಕ್ಕಿ, ಟೇಕ್‌ ಕೇರ್‌’  
ಅವಳ ಹುಸಿನಾಟಕ ಬಯಲಾಗಿತ್ತು. 

ಅವಳೆಂದರೆ ತನ್ನ ಪಾಲಿನ ಅದೃಷ್ಟವೇ ಅಂದುಕೊಂಡ ಅವನು…   

ಹೃದಯಕೆ ಹೆದರಿಕೆ 
ಹೀಗೆ ನೋಡಿದರೆ 
ಹುಡುಕುತ ಬರುವೆಯಾ 
ಹೇಳದೆ ಹೋದರೆ…
ಎಂದು ಫೋನ್‌ ಹಾಡಿತು. ಅವಳದೇ ಕರೆ…  
ಈಗ ನಿರಾಳನಾಗುವ ಸರದಿ ಅವನದು… 
– ರಾಜಿ,ಬೆಂಗಳೂರು 

Advertisement

Udayavani is now on Telegram. Click here to join our channel and stay updated with the latest news.

Next