ಚಿತ್ರದುರ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಮಾಧ್ಯಮ ಸಂಚಾಲಕರಾಗಿದ್ದ ಸಲೀಂ ಅವರು ಮಾಡಿರುವ ಭ್ರಷ್ಟಾಚಾರ ಆರೋಪ ವಿಚಾರಕ್ಕೆ ಸಂಬಂಧಿಸಿ ದೂರು ನೀಡಿದರೆ ಸರಕಾರ ತನಿಖೆ ನಡೆಸುತ್ತದೆ ಎಂದು ಬುಧವಾರ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಲೀಂ ಮತ್ತು ಉಗ್ರಪ್ಪ ಮಾತಿನಿಂದ ಸತ್ಯ ಹೊರ ಬಂದಿದೆ. ಆ ಬಗ್ಗೆ ನಾವು ಟೀಕೆ ಮಾಡುವುದು ಸರಿಯಲ್ಲ ಎಂದರು.
ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ನಾವು ಯಾರ ಹಂಗಿಲ್ಲ ಅಂದರೂ ಮತದಾರರ ಹಂಗಲ್ಲಿರುತ್ತೇವೆ ಎಂದು ‘ಯಾರ ಹಂಗಿಲ್ಲ’ ಎಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
‘ಬಿಜೆಪಿ ಕೊಲೆ ಗಡುಕ ಸರಕಾರ’ ಎಂದ ಸಿದ್ಧರಾಮಯ್ಯ ಅವರಿಗೆ ತಿರುಗೇಟು ನೀಡಿ, ಬಿಜೆಪಿ ಯಾರ ಕೊಲೆ ಮಾಡಿದೆ? ಮಾತಿನ ಮೇಲೆ ಹಿಡಿತವಿರಲಿ. ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದವರು ಕೊಲೆಗಡುಕರು ಎಂಬುದರ ಅರ್ಥ ಸೀರಿಯಸ್ ಆಗುತ್ತದೆ ಎಂದರು.
ಮಾಜಿ ಸಿಎಂ ಬಿಎಸ್ ವೈ, ಸಿದ್ಧರಾಮಯ್ಯ ಜೊತೆ ಸೇರಿಕೊಂಡಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿ, ಮಾಜಿ ಮುಖ್ಯಮಂತ್ರಿಗಳು ರಾಜ್ಯ, ದೇಶದ ಬಗ್ಗೆ ಚರ್ಚಿಸಲು ಸೇರಿಬಹುದು ತಪ್ಪೇನಿದೆ, ರಾಜಕಾರಣಿಗಳು ಸೇರಿಕೊಂಡರೆ ಆಪರೇಷನ್ ಅಂತೀರಿ ಎಂದರು.
ರೈತರಿಗೆ 1 ಲೀಟರ್ ಡೀಸೆಲ್ ಗೆ 20ರೂ. ಸಬ್ಸಿಡಿ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಸಿಎಂ ಜತೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದರು.