ಬೆಂಗಳೂರು: “ನಮ್ಮನ್ನು ಬಿಟ್ಟರೆ ಜೆಡಿಎಸ್‌ಗೆ ಬೇರೆ ವಿಧಿಯೇ ಇಲ್ಲ ಅಥವಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ಜೆಡಿಎಸ್‌ಗೆ ಅನಿವಾರ್ಯ,’ ಎಂಬ ಭಾವನೆ ಕಾಂಗ್ರೆಸ್‌ನ ಮುಖಂಡರಿಗೆ ಇದ್ದರೆ, ಅದನ್ನು ಬಿಡಬೇಕು ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೇಳಿದ್ದಾರೆ.
ಸೆ.28ರಂದು ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಜೆ.ಪಿ. ನಗರದ ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಪೋರೇಟರ್‌ಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೇಯರ್ ಸ್ಥಾನವನ್ನು 2 ಬಾರಿ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಈ ಬಾರಿ ನಮಗೆ ಬಿಟ್ಟುಕೊಡಬೇಕು. ಇದು ನನ್ನದಷ್ಟೇ ಅಲ್ಲ ಪಕ್ಷದ ಮುಖಂಡರ ಹಾಗೂ ಪಾಲಿಕೆ ಸದಸ್ಯರ ಅಭಿಪ್ರಾಯ,’ ಎಂದರು.
“ಕಾಂಗ್ರೆಸ್ ಅನ್ನು ಬೆಂಬಲಿಸುವುದು ಬಿಟ್ಟರೆ ಜೆಡಿಎಸ್‌ಗೆ ವಿಧಿಯೇ ಇಲ್ಲ. ನಮ್ಮನ್ನು ಬೆಂಬಲಿಸುವುದು ಅವರಿಗೆ ಅನಿವಾರ್ಯ ಅಥವಾ ಅಧಿಕಾರ ಬೇಕಿದ್ದರೆ ಜೆಡಿಎಸ್‌ನವರು ನಮ್ಮ ಹತ್ತಿರವೇ ಬರಬೇಕು ಎಂಬ ಭಾವನೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಇದ್ದರೆ, ಅದನ್ನು ಬಿಟ್ಟು ಬಿಡಲಿ. ಹೀಗಾಗಿ ಈ ಬಾರಿ ಮೇಯರ್ ಸ್ಥಾನವನ್ನು ನಮಗೆ ಬಿಟ್ಟುಕೊಡಬೇಕು. ಹಾಗಂತ ಅಧಿಕಾರದ ಹಪಾಹಪಿ ನಮಗಿಲ್ಲ. ಈ ನಡುವೆ ಕಳೆದ 2 ವರ್ಷಗಳಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನೀಡಿಲ್ಲ. ಇತ್ತೀಚಿನ ಮಳೆ ಆವಾಂತರವೇ ಅದಕ್ಕೆ ಸಾಕ್ಷಿ,’ ಎಂದರು.
ಪಾಲಿಕೆ ಅನುದಾನಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸದಸ್ಯರ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ. ಸ್ಥಾಯಿ ಸಮಿತಿಗಳ ಅಧಿಕಾರವನ್ನು ಮೊಟಕುಕೊಳಿಸಿ ಶಾಸಕರು, ಸಚಿವರ ಹಂತದಲ್ಲೇ ಎಲ್ಲವೂ ನಿರ್ಣಯ ಆಗುತ್ತಿದೆ. ಕಳೆದ ಎರಡು ವರ್ಷಗಳಿಂದ ಪಾಲಿಕೆಯಲ್ಲಿ ಜೆಡಿಎಸ್‌ಅನ್ನು ಪಕ್ಷವನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದೆ. ಇಂದಿನ ಸಭೆಯಲ್ಲಿ ಪಾಲಿಕೆ ಸದಸ್ಯರು ತಮ್ಮ ಅಳಲು ಹಾಗೂ ನೋವುಗಳನ್ನು ತೊಡಿಕೊಂಡಿದ್ದಾರೆ ಎಂದು ಹೇಳಿದರು.
“ಅಷ್ಟಕ್ಕೂ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಯಾರೂ ನನ್ನೊಂದಿಗಾಗಲಿ ಅಥವಾ ಎಚ್.ಡಿ. ದೇವೇಗೌಡರೊಂದಿಗಾಗಲಿ ಚರ್ಚಿಸಿಲ್ಲ. ಚರ್ಚೆಗೆ ಬಂದರೆ, ಸಭೆಯಲ್ಲಿ ಮೂಡಿಬಂದ ಅಭಿಪ್ರಾಯಗಳು, ಪಕ್ಷದ ಪಾಲಿಕೆ ಸದಸ್ಯರ ನೋವುಗಳು ಹಾಗೂ ಮುಖಂಡರ ನಿಲುವುಗಳನ್ನು ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು,’ ಎಂದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಶಾಸಕ ಕೆ. ಗೋಪಾಲಯ್ಯ, ವಿಧಾನಪರಿಷತ್ ಸದಸ್ಯರಾದ ನಾರಾಯಣಸ್ವಾಮಿ, ಅಪ್ಪಾಜಿಗೌಡ, ಟಿ.ಎ. ಶರವಣ ಸೇರಿದಂತೆ ಜೆಡಿಎಸ್‌ನ 14 ಮಂದಿ ಕಾರ್ಪೋರೇಟರ್‌ಗಳು ಇದ್ದರು.