ಹುಳಿಯಾರು: ಕಳೆದ ಎರಡು – ಮೂರು ವರ್ಷ ಗಳಿಂದ ಉತ್ತಮ ಮಳೆಯಾಗದ ಪರಿಣಾಮ ಕುಡಿಯುವ ನೀರಿನ ಸೆಲೆಯಾಗಿರುವ ಬೋರನ ಕಣಿವೆ ಜಲಾಶಯ ದಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ. 10-15 ದಿನಗಳಲ್ಲಿ ಮಳೆ ಬಾರದಿದ್ದರೆ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಜಾಕ್‌ವಾಲ್ಗೆ ನೀರು ಸಿಗದಾಗುತ್ತದೆ. ಪರಿ ಣಾಮ ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಲ್ಭಣಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಸುಮಾರು 2423.5 ಎಂಟಿಎಫ್‌ಸಿ ನೀರು ಸಂಗ್ರಹಿ ಸುವ ಸಾಮರ್ಥ್ಯ ಹೊಂದಿರುವ ಬೋರನ ಕಣಿವೆ ಜಲಾಶಯದಲ್ಲಿ 31 ಅಡಿ ನೀರು ನಿಲ್ಲುತ್ತದೆ. ಅದರಲ್ಲಿ ಹುಳಿಯಾರು ಪಟ್ಟಣಕ್ಕೆ ನಿತ್ಯ 2.08 ಮೀಲಿಯನ್ ಲೀಟರ್ ನೀರು ಪೂರೈಸಲಾಗುತ್ತದೆ. 675.12 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಕೃಷಿ ಕೊಡಲಾಗುತ್ತದೆ. ಆದರೆ, ಕಳೆದ 2-3 ವರ್ಷಗಳಿಂದ ಕೃಷಿ ನೀರು ಕೊಟ್ಟೇ ಇಲ್ಲ. ಇದೀಗ ಜಲಾಶಯದಲ್ಲಿ ನೀರು ಐದಾರು ಅಡಿಗೆ ಕುಸಿ ದಿದ್ದು, ಕೆಲವೇ ದಿನಗಳಲ್ಲಿ ಹುಳಿಯಾರು ಪಟ್ಟಣಕ್ಕೂ ನೀರು ಅಲಭ್ಯವಾಗಲಿರುವುದು ಆತಂಕದ ಸಂಗತಿ.
ನಿತ್ಯ 2.08 ಮಿಲಿಯನ್ ಲೀಟರ್ ಅಗತ್ಯ: 2011ರ ಜನ ಗಣತಿ ಪ್ರಕಾರ 15 ಸಾವಿರ ಜನಸಂಖ್ಯೆ ಹೊಂದಿ ರುವ ಹುಳಿಯಾರು ಪಟ್ಟಣ ಈಗ ಇಪ್ಪತ್ತು ಸಾವಿರ ಜನಸಂಖ್ಯೆ ಮೀರಿದೆ. ಇವರಿಗೆ ನಿತ್ಯ 2.08 ಮಿಲಿಯನ್ ಲೀಟರ್ ನೀರಿನ ಬೇಡಿಕೆ ಇದೆ. ಆದರೆ, ಇವತ್ತು ಜಲಾಶಯದಿಂದ 1.2 ಮಿಲಿಯನ್ ಲೀಟರ್ ನೀರು ಮಾತ್ರ ಹರಿಸಲಾಗುತ್ತಿದೆ. ಇನ್ನುಳಿದ 0.88 ಮಿಲಿ ಯನ್ ಲೀಟರ್ ನೀರನ್ನು ಕೊಳವೆ ಬಾವಿಗಳಿಂದ ಪೂರೈಸಲಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿಯ ನೀರು ಪೂರೈಕೆ ಎಂಜಿನಿಯರ್ ಡಿ.ಮಂಜುನಾಥ್ ತಿಳಿಸಿದ್ದಾರೆ.
ಕೈಕೊಟ್ಟ ಪೂರ್ವ ಮುಂಗಾರು: ಕಳೆದ ವರ್ಷವೂ ಸಹ ಜಲಾಶಯದ ನೀರಿನ ಮಟ್ಟ ತೀವ್ರ ಕುಸಿತ ಕಂಡು ನೀರಿನ ಹಾಹಾಕಾರ ಸೃಷ್ಟಿಯಾಗಿತ್ತು. ಅಷ್ಟರಲ್ಲಾಗಲೇ ಮುಂಗಾರು ಮಳೆ ಬಿದ್ದ ಪರಿಣಾಮ ಈ ವರ್ಷದ ಬೇಸಿಗೆ ವರೆವಿಗೂ ನೀರು ಲಭ್ಯವಾಗಿದೆ. ಆದರೆ, ಈ ವರ್ಷ ಪೂರ್ವ ಮುಂಗಾರು ಮಳೆ ಕೈಕೊಟ್ಟಿದ್ದು ಜಲಾ ಶಯದ ನೀರಿನ ಮಟ್ಟ ಗಣನೀಯವಾಗಿ ಕುಸಿ ಯುತ್ತಿದೆ. ಈಗಾಗಲೇ ಹುಳಿಯಾರು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಜಾಕ್‌ವಾಲ್ಗೆ ನೀರು ಲಭ್ಯ ವಾಗದಿದ್ದರಿಂದ 3 ಬಾರಿ ಜೆಸಿಬಿ ಮೂಲಕ ಚಾನಲ್ ತೆಗೆದು ಜಾಕ್‌ವಾಲ್ಗೆ ನೀರು ಹರಿಸಿ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ.
ಕೊಳಚೆ ನೀರು ಸರಬರಾಜು: ಪ್ರಸ್ತುತ ಬೋರನ ಕಣಿವೆ ಜಲಾಶಯದಿಂದ ಲಭ್ಯವಾಗುತ್ತಿರುವ ನೀರು ಡೆಟ್ ವಾಟರ್ ಆಗಿದ್ದು, ನೂರಾರು ವರ್ಷಗಳಿಂದ ಸಂಗ್ರಹವಾದ ನೀರಾಗಿದೆ. ಈ ನೀರಿನಲ್ಲಿ ಜಲಚರಗಳ, ಪ್ರಾಣಿಪಕ್ಷಿಗಳ ಮಲ ಮೂತ್ರದ ಜೊತೆ ಹಳ್ಳಗಳಿಂದ ಹರಿದು ಬಂದ ತ್ಯಾಜ್ಯ ಬೆರೆತು ವಿಪರೀತ ಕೊಳಚೆ ಯಾಗಿದೆ. ಜಾಕ್‌ವಾಲ್ ಬಳಿ ಹೋದರೂ ಸಾಕು ಮೂಕು ಮುಚ್ಚಿಕೊಳ್ಳುವಷ್ಟು ದುರ್ನಾತ ಬೀರುವ ಕಲುಶಿತ ನೀರಾಗಿದೆ. ಈ ನೀರು ಕುಡಿಯುವುದಿರಲಿ ಸ್ನಾನ ಮಾಡುವುದಕ್ಕೂ ಯೋಗ್ಯವಾಗಿಲ್ಲ. ಆದರೆ. ನೀರಿನ ಹಾಹಾಕಾರ ಎದುರಿಸಲು ಸತ್ಯ ಮುಚ್ಚಿಟ್ಟು ಅಧಿಕಾರಿಗಳು ನೀರು ಸರಬರಾಜು ಮಾಡುತ್ತಿದ್ದಾರೆ.
ಇಷ್ಟಾದರೂ ಬೇಸಿಗೆಯೊಂದಿಗೆ ಪಟ್ಟಣದ ಅನೇಕ ವಾರ್ಡ್‌ಗಳಲ್ಲಿ ನೀರಿನ ಹಾಹಾಕಾರ ಕೂಡ ಆರಂಭವಾಗಿದೆ. ಇಂದಿಗೂ ಅನೇಕ ವಾರ್ಡ್‌ಗಳಲ್ಲಿ 10-15 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಅನೇಕ ಕಡೆಗಳಲ್ಲಿ ನಿತ್ಯಕರ್ಮಗಳಿಗೆ ಸಹ ನೀರಿಲ್ಲದೇ ಜನರು ಪಟ್ಟಣ ಪಂಚಾಯ್ತಿಗೆ ಹಿಡಿಶಾಪ ಹಾಕು ತ್ತಿದ್ದಾರೆ. ದುಡ್ಡು ಕೊಟ್ಟು ನೀರು ಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ಜಲಾಶಯ ಒಣಗಿ, ಸಕಾಲಕ್ಕೆ ಮಳೆ ಬಾರದೆ, ಕೊಳವೆ ಬಾವಿಗಳು ಒಣಗಿದರೆ ಉಂಟಾಗುವ ಜಲಕಂಟಕ ನಿಭಾಯಿಸಲು ಪಟ್ಟಣ ಪಂಚಾಯ್ತಿ ಯಾವ ರೀತಿಯಲ್ಲಿ ಸಿದ್ಧತೆ ಮಾಡಿ ಕೊಳ್ಳುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.
● ಎಚ್.ಬಿ.ಕಿರಣ್ ಕುಮಾರ್