ಬೆಳಗಾವಿ: ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದ ಹಲವು ಡಿಸಿಎಂ ಹುದ್ದೆ ವಿಚಾರ ಇದೀಗ ಬದಲಾಗಿ ಮುಖ್ಯಮಂತ್ರಿ ಬದಲಾವಣೆ ಸದ್ದು ಹೆಚ್ಚಾಗುತ್ತಿದೆ. ಒಕ್ಕಲಿಗ ಸ್ವಾಮೀಜಿ ಹೇಳಿಕೆ ಬಳಿಕ ಇದೀಗ ಪಂಚ ಪೀಠದಿಂದ ಲಿಂಗಾಯತ ಮುಖ್ಯಮಂತ್ರಿಗೆ ಬೇಡಿಕೆ ಬಂದಿದೆ.
ಈ ಬಗ್ಗೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದು, ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ.
ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ಶ್ರೀಶೈಲ ಜಗದ್ಗುರುಗಳ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನಗಳನ್ನು ಹೆಚ್ಚುವರಿ ಮಾಡಿದರೆ ಲಿಂಗಾಯತ ಮಂತ್ರಿಗಳಿಗೆ ಹೆಚ್ಚಿನ ಸ್ಥಾನ ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ ಎಂದರು.
ಒಕ್ಕಲಿಗ ಸಮಾಜದ ಚಂದ್ರಶೇಖರ ಸ್ವಾಮೀಜಿ ಅವರು ಗುರುವಾರ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಹೇಳಿಕೆ ನೀಡಿದ ಬೆನ್ನಲ್ಲೇ ಸ್ವಾಮೀಜಿಗಳ ಮೂಲಕವೇ ಲಿಂಗಾಯತ ಮುಖ್ಯಮಂತ್ರಿಗೆ ಆಗ್ರಹಿಸಲಾಗಿದೆ.
ವೀರಶೈವ ಲಿಂಗಾಯತ ಸಮಾಜದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ ಇಂಥವರಿಗೆ ಅವಕಾಶ ನೀಡಬೇಕು. ಕಾಶಿ, ಉಜ್ಜಯಿನಿ ಜಗದ್ಗುರುಗಳ ಜತೆಗೂ ಈ ವಿಚಾರದಲ್ಲಿ ಚರ್ಚೆ ಮಾಡಲಾಗಿದೆ. ಒಂದು ವೇಳೆ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಒಂಡಂಬಡಕೆ ಆಗಿದ್ದರೆ ಒಡಂಬಡಿಕೆಯ ಪ್ರಕಾರ ನಡೆದುಕೊಳ್ಳಲಿ ಎಂದರು.