ಇಂಡಿ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಧಾರವಾಡ ಶಾಸಕ ಅರವಿಂದ ಬೆಲ್ಲದ ಬಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್
ಸಿಂಗ್ ಯಾರಧ್ದೋ ಮಾತು ಕೇಳಿ ಹೇಳಿಕೆ ನೀಡಿದ್ದಾರೆ. ಇದರ ಪರಿಣಾಮವನ್ನು ಮುಂಬರುವ ದಿನಗಳಲ್ಲಿ ಬಿಜೆಪಿ ಎದುರಿಸಬೇಕಾಗುತ್ತದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ ಎಚ್ಚರಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಉತ್ತರ ಕರ್ನಾಟಕದ ಪ್ರಬಲ ನಾಯಕರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ರಾಜ್ಯದ ಪಂಚಮಸಾಲಿ ಸಮಾಜವನ್ನು ಬಸನಗೌಡರು ಒಗ್ಗೂಡಿಸಿದ್ದಾರೆ. ಅಲ್ಲದೆ ಹಿಂದೂತ್ವದ ಪ್ರತಿಪಾದಕರಾಗಿದ್ದಾರೆ.
ರಾಜ್ಯದ ಕೋಟ್ಯಂತರ ಹಿಂದೂಗಳ ಮನಸ್ಸಿನಲ್ಲಿ ಬಸನಗೌಡರಿದ್ದಾರೆ. ಅಂತಹ ನಾಯಕ ಬೆಳೆಯಬಾರದೆಂಬ ದುರುದ್ದೇಶದಿಂದ ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಬಸನಗೌಡರನ್ನು ತುಳಿಯುವ ಹುನ್ನಾರ ನಡೆಯತ್ತಿದೆ ಎಂದು ಆರೋಪಿಸಿದರು.
ಬಸನಗೌಡರೊಂದಿಗೆ ಇಡೀ ಹಿಂದೂ ಸಮಾಜವಿದೆ. ಅವರನ್ನು ಕಡೆಗಣಿಸಿದರೆ ಬಿಜೆಪಿಗೆ ತಕ್ಕ ಪಾಠ ಕಲಿಸಲು ಪಂಚಮಸಾಲಿ ಸಮಾಜ ಹಾಗೂ ಹಿಂದೂಗಳು ತಯಾರಾಗಿದ್ದಾರೆ. ಬಿಜೆಪಿ ವರಿಷ್ಠರು ಬಸನಗೌಡರ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ಬಿಜೆಪಿ ರಾಜ್ಯದಲ್ಲಿ ಧೂಳಿಪಟವಾಗುವುದರಲ್ಲಿ ಸಂಶಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜದ ಮುಖಂಡ ಎ.ಪಿ. ಬಿರಾದಾರ ಮಾತನಾಡಿ, ಪಂಚಮಸಾಲಿ ಸಮಾಜ ಆರ್ಥಿಕವಾಗಿ ಹಿಂದುಳಿದಿದೆ. ನಮ್ಮ ಸಮಾಜ ಭೂಮಿಯನ್ನೇ ನಂಬಿ ಬದುಕಿ ಸಾಗಿಸುವ ಸಮಾಜವಾಗಿದೆ. ಸಕಾಲಕ್ಕೆ ಮಳೆಯಾಗದೆ ಇರುವುದರಿಂದ ಬೆಳೆ ಹಾನಿಯಾಗಿ ಇಡೀ ರೈತ ಸಮುದಾಯ ಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸರ್ಕಾರ ಪಂಚಮಸಾಲಿ ಸಮಾಜವನ್ನು ಕೂಡಲೆ 2ಎ ಪ್ರವರ್ಗಕೆ ಮತ್ತು ಕೇಂದ್ರದಲ್ಲಿ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು ಎಂದರು.
ಕೂಡಲಸಂಗಮ ಪೀಠದ ಜಗದ್ಗುರುಗಳು ಮತ್ತು ಬಸನಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದರು. ನ್ಯಾಯವಾದಿಗಳಾದ ಎಸ್.ಆರ್. ಬಿರಾದಾರ, ವೀರೇಂದ್ರ ಪಾಟೀಲ, ಡಿ.ಜಿ. ಜೋತಗೊಂಡ, ಜೆ.ಬಿ. ಬೇನೂರ, ಎಂ.ಬಿ. ಬಿರಾದಾರ, ಎಸ್.ಸಿ. ಚಾಂದಕವಟೆ, ಪಿ.ಜಿ. ನಾಡಗೌಡ ಇದ್ದರು.