ಬೆಂಗಳೂರು: ಬೆಳ್ಳಂದೂರು ಕೆರೆ ಸುತ್ತಮುತ್ತಲ ಕೈಗಾರಿಕೆಗಳು, ಅಪಾರ್ಟ್‌ಮೆಂಟ್ ಹಾಗೂ ವಸತಿ ಸಮುಚ್ಚಯಗಳು ಕಾಲಮಿತಿಯೊಳಗೆ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳದಿದ್ದರೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಗುರುವಾರ ಸೂಚನೆ ನೀಡಿದೆ.
ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಸಂಬಂಧಪಟ್ಟ ಪ್ರಕರಣ ಸಂಬಂಧ ಗುರುವಾರ ವಿಚಾರಣೆ ವೇಳೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆರೆಯ ಸುತ್ತಮುತ್ತಲಿನ 97 ಕೈಗಾರಿಕೆಗಳ ಪೈಕಿ 76 ಕೈಗಾರಿಕೆಗಳನ್ನು ಬಂದ್ ಮಾಡಿರು ವುದಾಗಿ ನ್ಯಾಯಾಧೀಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಿತು. ಇದಕ್ಕೆ ಆಕ್ಷೇಪಿಸಿದ ನ್ಯಾಯಪೀಠವು, ಮಾಲಿನ್ಯಕಾರಕ ಎಲ್ಲ ಕೈಗಾರಿಕೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕಿತ್ತಲ್ಲವೇ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆದಿತ್ಯ ಸೋಂಧಿ ಅವರನ್ನು ಪ್ರಶ್ನಿಸಿತು.
ಅಲ್ಲದೆ, ಕೆರೆಯ ಸುತ್ತಮುತ್ತಲಿನ ಎಲ್ಲ ಕೈಗಾರಿಕೆಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಸಿಕೊಳ್ಳುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಡಿಎ ಹಾಗೂ ಜಲಮಂಡಳಿಯ ಜಂಟಿ ತನಿಖಾ ತಂಡವು ಸೂಚಿಸಬೇಕು. ನಿಗದಿತ ಕಾಲಮಿತಿಯೊಳಗೆ ಘಟಕ ಅಳವಡಿಕೆಗೆ ಕಾರ್ಖಾನೆಗಳು ಕ್ರಮ ಕೈಗೊಳ್ಳದಿದ್ದರೆ ಅವುಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಿ ಬೀಗಮುದ್ರೆ ಹಾಕಬೇಕು.
ಹಾಗೆಯೇ ಕಾಲಮಿತಿಯೊಳಗೆ ಕೊಳಚೆ ನೀರು ಸಂಸ್ಕರಣಾ ಘಟಕ ಅಳವಡಿಸಿಕೊಳ್ಳದ ಅಪಾರ್ಟ್‌ಮೆಂಟ್‌ಗಳು ಹಾಗೂ ವಸತಿ ಸಮುಚ್ಚಯಗಳಿಗೂ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಬೇಕು ಎಂದು ನಾಯಾಧೀಕರಣ ಸೂಚನೆ ನೀಡಿತು. ಕೆರೆಯನ್ನು ಮಲಿನಗೊಳಿಸುತ್ತಿರುವ ಕೈಗಾರಿಕೆಗಳನ್ನು ತಕ್ಷಣ ಬಂದ್ ಮಾಡಬೇಕು.
ಬೆಳ್ಳಂದೂರು ಕೆರೆಗೆ ನೀರು ಸೇರುವ 17 ಕಾಲುವೆ, ನಾಲೆಗಳ ವಿಸ್ತೀರ್ಣ, ನೀರು ಹರಿಯುವ ಸಾಮರ್ಥಯ ಹಾಗೂ ಗುಣಮಟ್ಟದ ವಿವರ ನೀಡಬೇಕು. ಬಯೋಲಾಜಿಕಲ್ ಆಕ್ಸಿಜನ್ ಡಿಮಾಂಡ್ ಪ್ರಮಾ ಋಣದ ನಿಖರ ಮಾಹಿತಿ ಹಾಗೂ ಮಂಡಳಿಯು ಎಸ್‌ಟಿಪಿ ಅಳವಡಿಕೆಗೆ ನಿಗದಿಪಡಿಸಿರುವ ಮಾನದಂಡಗಳ ವಿವರ, ಬೆಳ್ಳಂದೂರು ಕೆರೆ ಸುತ್ತಮುತ್ತ ನಿರ್ಮಾಣಗೊಂಡಿರುವ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಕಟ್ಟಡ ಸಂಕೀರ್ಣಗಳ ವಿವರ ಸಲ್ಲಿಸಬೇಕು ಎಂದೂ ನ್ಯಾಯಾಧೀಕರಣ ತಾಕೀತು ಮಾಡಿದೆ.
ಅದರಂತೆ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿಯು ಹಾಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳ ನೀರಿನ ಮಾದರಿ ಸಂಗ್ರಹಿಸಿ ಅದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಪರಿಶೀಲನೆಗೆ ಒಳಪಡಿಸಲು ಕ್ರಮ ಕೈಗೊಳ್ಳಬೇಕಿದೆ.