ಬಸ್ರೂರು: ಬಳ್ಕೂರು ಗ್ರಾ.ಪಂ. ಬಸ್ರೂರಿನ ಪಂಚಗ್ರಾಮಗಳಲ್ಲಿ ಒಂದು. ಬಸ್ರೂರು ಸಿಂಡಿಕೇಟ್ ಬ್ಯಾಂಕ್‌ನ ಎದುರು ಸಾಗುವ ರಸ್ತೆಯಲ್ಲೆ ಮುಂದೆ ಸಂಚರಿಸಿದರೆ ವಾರಾಹಿ ನದಿ ತಟ ಸಿಗುತ್ತದೆ. ಹಾಗೆಯೇ ಮುಂದೆ ಸಾಗಿದರೆ ಬಳ್ಕೂರು ಕಳುವಿನ ಬಾಗಿಲು ಸಿಗುತ್ತದೆ. ಹಿಂದೆ ಇಲ್ಲಿ ಕಳುವಿನ ದೋಣಿ ದಾಟಿ ಆಚೆ ಹೋದರೆ ಗುಲ್ವಾಡಿ ಸಿಗುತ್ತದೆ.
ಈಗ ಇಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣವಾಗಿದ್ದು ಜನರು ಮತ್ತು ಲಘು ವಾಹನಗಳು ಇದರ ಮೇಲೆ ಚಲಿಸಬಹುದು. ಈ ಡ್ಯಾಂನ ಹಿನ್ನೀರು ಬೇಸಗೆಯಲ್ಲಿ ಸಿಹಿಯಾಗಿರದು. ವೆಂಟೆಡ್ ಡ್ಯಾಂನಿಂದ ನೇರ ಸಾಗಿದರೆ ಕಂಡ್ಲೂರು ಕಳುವಿನ ಬಾಗಿಲು ಸಿಗುತ್ತದೆ. ಹಿಂದೆ ಇಲ್ಲಿಂದ ದೋಣಿ ಮೂಲಕ ಕಂಡ್ಲೂರಿಗೆ ಸಾಗುತ್ತಿದ್ದರು. ಕಂಡ್ಲೂರು ಸೇತುವೆಯಾದ ಮೇಲೆ ಇಲ್ಲಿನ ದೋಣಿ ಸಂಚಾರವಿಲ್ಲ.
ಬಸ್ರೂರಿನಿಂದ ವಾರಾಹಿ ನದಿ ತಟದಲ್ಲೆ ಸಾಗಿ ಬರುವ ರಸ್ತೆ ಕಂಡ್ಲೂರು ಕಳುವಿನ ಬಾಗಿಲಿಗೆ ನಿಂತಿತ್ತು. ಆದರೆ ಪ್ರಸ್ತುತ ನದಿ ತಟದಲ್ಲೆ ಅಗಲ ಕಿರಿದಾದ ಕಾಂಕ್ರೀಟ್ ರಸ್ತೆಯೊಂದು ನಿರ್ಮಾಣವಾಗಿದೆ. ಇಲ್ಲಿಯೇ ಸುವರ್ಣ ಗ್ರಾಮ ಯೋಜನೆಯಡಿ ಕಾಂಕ್ರೀಟ್ ರಸ್ತೆಯೂ ಸೇರಿದ್ದು ಈ ಕಿರಿದಾದ ಕಾಂಕ್ರೀಟ್ ರಸ್ತೆ ಕಂಡ್ಲೂರು ಸೇತುವೆವರೆಗೆ ಸಾಗುತ್ತದೆ. ಈ ರಸ್ತೆ ತುಸು ಅಗಲಗೊಂಡರೆ ಬೃಹತ್ ವಾಹನ ಸಂಚಾರಕ್ಕೂ ಅನುಕೂಲ ಕಲ್ಪಿಸಿದಂತಾಗುತ್ತದೆ ಎನ್ನುವುದು ಗ್ರಾಮಸ್ಥರ ಅನಿಸಿಕೆ. ಹಿಂದೆ ಕಂಡೂÉರು ಕಳುವಿನ ಬಾಗಿಲಿನ ತನಕ ಬಸ್ ಒಂದು ಸಂಚರಿಸುತ್ತಿದ್ದು, ರಸ್ತೆಯ ಕಾರಣದಿಂದ ಸ್ಥಗಿತಗೊಂಡಿದೆ. ಇದರೊಂದಿಗೆ ಬಳ್ಕೂರು ಗ್ರಾಮದ ನದಿ ತಟದಲ್ಲಿ ಸಾಗುವ ರಸ್ತೆಗೆ ಬಸ್ ಬರಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ಜಾಗವಿಲ್ಲದ ಗೋಮಾಳ
ಕಂಡ್ಲೂರು ಸೇತುವೆಯ ಪಶ್ಚಿಮಕ್ಕೆ ನದಿ ತಟದಲ್ಲಿ ಒಂದು ಬೃಹತ್ ಗೋಮಾಳವಿತ್ತು. ಇಲ್ಲೊಂದು ಉದ್ದನೆಯ ಕಲ್ಲಕಂಬವಿದ್ದು ಶತಮಾನದ ಹಿಂದೆ ಗೋವುಗಳು ಮೇಯಲು ಬಂದಾಗ ಮೈಯುಜ್ಜಲು ಅನುಕೂಲವಾಗಲೆಂದು ಇದನ್ನು ಹಾಕಲಾಗಿತ್ತು ಎನ್ನಲಾಗಿದೆ. ಈಗ ಗೋಮಾಳದಲ್ಲಿ ಉಳಿದಿರುವುದು ಕೇವಲ ಎರಡು ಎಕರೆ ಮಾತ್ರ. ಉಳಿದ ಜಾಗದಲ್ಲೆಲ್ಲ ಮನೆಗಳು ನಿರ್ಮಾಣ ವಾಗಿವೆ. ಗೋಮಾಳವನ್ನು ಉಳಿಸಿಕೊಳ್ಳುವತ್ತ ಯಾರ ಗಮನವೂ ಇಲ್ಲ.
ಬಿ.ಎಚ್.ನಲ್ಲಿ ಸರ್ಕಲ್ ಬೇಕು
ಬಸ್ರೂರಿನಿಂದ ಕಂಡ್ಲೂರಿಗೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಮಧ್ಯೆ ಬಿ.ಎಚ್. ಕ್ರಾಸ್ ಸಿಗುತ್ತದೆ. ಬಿ.ಎಚ್. ಅಂದರೆ ಬಸ್ರೂರು-ಹುಣ್ಸೆಮಕ್ಕಿ ರಸ್ತೆ ಎಂದರ್ಥ. ಇಲ್ಲಿ ವಾಹನ ಸವಾರರಿಗೆ ಬಹಳಷ್ಟು ಗೊಂದಲವಾಗುತ್ತಿದ್ದು, ಒಂದು ಸರ್ಕಲ್ ಅನ್ನು ನಿರ್ಮಿಸಬೇಕಾಗಿದೆ. ಈ ಎಲ್ಲ ಬೇಡಿಕೆಗಳು ಸಾಕಾರ ಗೊಂಡರೆ ಬಳ್ಕೂರು ಗ್ರಾಮಕ್ಕೆ ನವ ಚೈತನ್ಯ ಬರಲಿದೆ.
ಕೃಷಿ ಮುಖ್ಯ ಉದ್ಯೋಗ
ಬಳ್ಕೂರು ಗ್ರಾಮದ ಜನರ ಮುಖ್ಯ ಉದ್ಯೋಗ ಕೃಷಿಯಾಗಿದ್ದು ಮೂರು ವಾರ್ಡ್‌ಗಳಲ್ಲಿ 2,998 ಜನರು ವಾಸ್ತವ್ಯ ಹೊಂದಿದ್ದಾರೆ. ಖ್ಯಾತ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟರು ಮೂಲತಃ ಬಳ್ಕೂರಿನ ಕುಜ್ಞಾಡಿ ಮನೆಯ ವರಾಗಿದ್ದಾರೆ. ಖ್ಯಾತ ಬರಹಗಾರ, ಕಥೆಗಾರ ಡಾ| ಸಂಪೂರ್ಣಾನಂದ ಬಳ್ಕೂರು ಈ ಗ್ರಾಮದರಾಗಿದ್ದಾರೆ. ಬಹಳ ಹಿಂದೆ ಇಲ್ಲಿ ಹರಿಯುವ ವಾರಾಹಿ ನದಿ ಇಲ್ಲಿನ ಹೊಳೆಬಾಗಿಲು ಮನೆಯವರೆಗೂ ವಿಸ್ತರಿಸಿದ್ದು ಅನಂತರದ ವರ್ಷಗಳಲ್ಲಿ ಈಗಿನ ಸ್ಥಳಕ್ಕೆ ಸೀಮಿತಗೊಂಡಿತು ಎಂದು ತಿಳಿದು ಬರುತ್ತದೆ.
ರಸ್ತೆ ವಿಸ್ತರಣೆಯಾಗಲಿ: ಬಳ್ಕೂರು ಕಳುವಿನ ಬಾಗಿಲಿನಿಂದ ನದಿತಟದಲ್ಲಿ ಸಾಗುವ ಕಿರಿದಾದ ರಸ್ತೆ ಇನ್ನಷ್ಟು ವಿಸ್ತರಣೆಗೊಳ್ಳಬೇಕು. ಒಂದು ಬದಿಯಲ್ಲಿ ನದಿ ಹರಿಯುತ್ತಿದ್ದರೆ ಇನ್ನೊಂದು ಬದಿಯಲ್ಲಿ ಖಾಸಗಿ ಮನೆ ಮತ್ತು ತೋಟಗಳಿವೆ. ಬೆನಕನಕಟ್ಟೆ-ಕುದ್ರುವಿನಲ್ಲಿ ರಸ್ತೆ ಅಗಲಗೊಳಿಸಲು ಪ್ರಯತ್ನಿಸಲಾಗುವುದು. ಬೀಚ್‌ನಲ್ಲಿ ಸರ್ಕಲ್ ನಿರ್ಮಿಸುವ ಬಗ್ಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ಅದಲ್ಲದೆ ಇಲ್ಲಿಂದ ಕಂಡ್ಲೂರು ಸೇತುವೆಯ ತನಕ ಸಾಗುವ ರಾಜ್ಯ ಹೆದ್ದಾರಿಯೂ ಕಿರಿದಾಗಿದ್ದು ಈ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ. –
ನಿಶ್ಚಿತ್ ಶೆಟ್ಟಿ, ಬಳ್ಕೂರು ಗ್ರಾ.ಪಂ. ಅಧ್ಯಕ್ಷರು
ಬಸ್ ಬರಲಿ: ಬಸ್ರೂರು ಸಿಂಡಿಕೇಟ್ ಬ್ಯಾಂಕ್‌ನ ಎದುರಿನಿಂದ ಸಾಗುವ ರಸ್ತೆ ಬಳ್ಕೂರು ಕಳುವಿನ ಬಾಗಿಲಿನ ಮೂಲಕ ಕಂಡ್ಲೂರು ಹಳೆ ಕಳುವಿನ ಬಾಗಿಲಿನ ತನಕವೂ ಇದೆ. ಈ ರಸ್ತೆಯಲ್ಲಿ ಆದಷ್ಟು ಶೀಘ್ರ ಬಸ್ ಸಂಚರಿಸಬೇಕಾಗಿದೆ. ಇದರಿಂದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. –
ರಾಮ, ಕಳುವಿನ ಬಾಗಿಲು ನಿವಾಸಿ
– ದಯಾನಂದ ಬಳ್ಕೂರು