ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಆಪ್ಟಿಕಲ್ ಫೈಬರ್ (ಒಎಫ್ಸಿ) ಅಳವಡಿಕೆ ಹಾಗೂ ದುರಸ್ತಿಗಾಗಿ ರಸ್ತೆ ಅಗೆಯುವ ಏಜೆನ್ಸಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಪಶ್ಚಿಮ ವಲಯದ ಸಿ.ಎನ್.ಆರ್.ರಾವ್ ಕೆಳಸೇತುವೆ, ಸದಾಶಿವನಗರ ಪೊಲೀಸ್ ಠಾಣೆ, ಬಿಇಎಸ್ ರಸ್ತೆ, ಯಶವಂತಪುರ ವೃತ್ತ, ರಾಜಾಜಿನಗರ ಮೆಟ್ರೋ ಸ್ಟೇಷನ್, ಕೆ.ಸಿ.ಜನರಲ್ ಆಸ್ಪತ್ರೆ, ನವರಂಗ್ ಚಿತ್ರಮಂದಿರ ಜಂಕ್ಷನ್, ಡಾ.ರಾಜ್‌ಕುಮಾರ್, ಗೂಡ್‌ಶೆಡ್ ಶಾಂತಲಾ ಸಿಲ್ಕ್ ಜಂಕ್ಷನ್, ಉಪ್ಪಾರ ಪೇಟೆ ಪೊಲೀಸ್ ಠಾಣೆ ಜಂಕ್ಷನ್ ರಸ್ತೆಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಅನಧಿಕೃತವಾಗಿ ಒಎಫ್ಸಿ ಅಳವಡಿಕೆಗೆ ರಸ್ತೆ ಅಗೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಪಾಲಿಕೆಯಿಂದ ರಸ್ತೆ ಅಗೆಯಲು ಅನುಮತಿ ಪಡೆದ ಸಂಸ್ಥೆಗಳು ಸಹ ಕಾಲಮಿತಿಯೊಳಗೆ ರಸ್ತೆ ದುರಸ್ತಿ ಪಡಿಸಿದ್ದಾರೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಒಂದೊಮ್ಮೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ರಾತ್ರಿ ಪೂರ್ವ ವಲಯದ ಟ್ರೀನಿಟಿ ವೃತ್ತ, ಹಳೆ ಮದ್ರಾಸ್ ರಸ್ತೆ, ಇಂದಿರಾ ನಗರ, ದೊಮ್ಮಲೂರು, ಮರ್ಫಿಟೌನ್ ಸೇರಿದಂತೆ ಹಲವು ಭಾಗಗಳ ರಸ್ತೆಗಳನ್ನು ಪರಿಶೀಲನೆಗೆ ಮೊದಲು ಅಧಿಕಾರಿಗಳ ಸಭೆ ನಡೆಸಿದ ಆಯುಕ್ತರು, ಹೆಚ್ಚಿನ ಗುಂಡಿಗಳಿರುವ ಭಾಗಗಳಲ್ಲಿ 48 ಗಂಟೆಗಳೊಳಗೆ ಮುಚ್ಚಲು ಮುಂದಾಗಬೇಕು. ಉಳಿದಂತೆ ಮಳೆ ನಿಂತ ಕೂಡಲೇ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಕ್ರಮಕೈಗೊಳ್ಳದಿದ್ದರೆ ಅಂತಹ ಎಂಜಿನಿಯರ್‌ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದರೊಂದಿಗೆ ವಿಶೇಷ ಆಯುಕ್ತ (ಯೋಜನೆ) ನೇತೃತ್ವದಲ್ಲಿ ಮಹದೇವಪುರ ವಲಯದ ಐಟಿಪಿಎಲ್, ಹೂಡಿ ವೃತ್ತ, ಬಸವನಪುರ ರಸ್ತೆ, ಭಟ್ಟರಹಳ್ಳಿ, ಆನಂದಪುರ ಜಂಕ್ಷನ್, ಚನ್ನಸಂದ್ರ ವೃತ್ತ, ಕಲ್ಕೆರೆ, ಹೊರಮಾವು, ರಾಮಮೂರ್ತಿ ನಗರ, ಮಹದೇವಪುರ ರಸ್ತೆ, ಯಮಲೂರು ರಸ್ತೆ, ಬೆಳ್ಳಂದೂರು ರಸ್ತೆ, ದೊಡ್ಡನೆಕ್ಕುಂದಿ ರಸ್ತೆ, ಹೋಫ್ ಫಾರಂ ಜಂಕ್ಷನ್, ಕುಂದಲಹಳ್ಳಿ ಮುಖ್ಯರಸ್ತೆ ಸೇರಿದಂತೆ ಪ್ರಮುಖ ಭಾಗಗಳಲ್ಲಿ ರಸ್ತೆಗಳನ್ನು ಪರಿಶೀಲಿಸಿದರು.