ಶಹಾಬಾದ: ಕಾನೂನನ್ನು ಸರಿಯಾಗಿ ಅರ್ಥೈಸಿಕೊಂಡರೆ ಮಹಿಳೆಯರ ಸಮಸ್ಯೆಗಳು ಬಗೆಹರಿಯಲು ಸಾಧ್ಯವಾಗುತ್ತದೆ ಎಂದು ಎಐಎಂಎಸ್‌ಎಸ್‌ನ ರಾಜ್ಯ ಜಂಟಿ ಕಾರ್ಯದರ್ಶಿ ಕಾ| ಹರಿಣಿ ಹೇಳಿದರು. ಎಐಎಂಎಸ್‌ಎಸ್ ಶಹಾಬಾದ ಸ್ಥಳೀಯ ಸಮಿತಿ ವತಿಯಿಂದ ನಗರದ ಹನುಮನ ನಗರ ಬಡಾವಣೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಿ ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಮುಖ್ಯಭಾಷಣಕಾರರಾಗಿ ಅವರು ಮಾತನಾಡಿದರು. ಸಮಾಜದಲ್ಲಿ ಆಳವಾಗಿ ಬೇರೂರಿರುವ ಪುರುಷ ಪ್ರಧಾನ ಮನೋಭಾವ ಮತ್ತು ಸಾಂಸ್ಕೃತಿಕ ಅವನತಿಯಿಂದಾಗಿ ಈಗ ಮಹಿಳೆ ಎಲ್ಲ ರಂಗದಲ್ಲಿಯೂ ಸಮಸ್ಯೆ ಎದುರಿಸಬೇಕಾಗಿದೆ. ಮಹಿಳೆಯರು ತಮ್ಮ ಪ್ರಜ್ಞಾಮಟ್ಟ ಬೆಳೆಸಿಕೊಳ್ಳಬೇಕಾಗಿದೆ. ತಾನು ಅಬಲೆ ಅಲ್ಲ. ಎಲ್ಲ ವಿಷಯ ತಿಳಿದುಕೊಳ್ಳಬಹುದು. ಧೈರ್ಯದಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ನಮ್ಮ ವಿಮೋಚನೆ ನಾವೇ ಪಡೆದುಕೊಳ್ಳಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೂಲಿಗಾಗಿ ಹೊಲಗದ್ದೆಗಳಿಗೆ ಹಾಗೂ ಅಂಗಡಿಗಳಿಗೆ ಕಳುಹಿಸುವುದು ಅಪರಾಧ. ಇದನ್ನು ತಪ್ಪಿಸಲು ಬಡತನ ಹಾಗೂ ನಿರುದ್ಯೋಗ ಸಮಸ್ಯೆಗಳು ಹೋಗಬೇಕು. ಇಡೀ ದೇಶದ ಆಸ್ತಿ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಹಾಗೂ ಎಲ್ಲರೂ ಸಾಂಸ್ಕೃತಿಕವಾಗಿ, ನೈತಿಕವಾಗಿ, ಸಾಮಾಜಿಕವಾಗಿ ಒಂದೇ ವೇದಿಕೆ ಹಂಚಿಕೊಂಡು ಹೊಸ ಆಲೋಚನೆ ಮೇಲೆ ದುಡಿಯುವ ವರ್ಗ ಪ್ರತಿಬಿಂಬಿಸಬೇಕು. ಆಗ ಮಾತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಹೇಳಿದರು. ಸ್ಥಳೀಯ ಸಮಿತಿ ಅಧ್ಯಕ್ಷೆ ಗುಂಡಮ್ಮ ಎಸ್. ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಅಂಬುಜಾ ದೇಸಾಯಿ ಹಾಗೂ ಮಹಾದೇವಿ ಅತನೂರ, ಸದಸ್ಯರಾದ ಮಹಾದೇವಿ ಮಾನೆ, ರೇಷ್ಮಾ ಸುಬೇದಾರ, ಸವಿತಾ ಆರ್.ಅಲ್ಲಿಪುರ, ಸಿದ್ದಮ್ಮ ಕೊಟನೂರ, ಭೀಮಬಾಯಿ ಬಿ. ಸಾತನೂರ, ಶಿಲ್ಪಾ ಎನ್. ಹುಲಿ ಸೇರಿದಂತೆ ಹನುಮಾನ ನಗರದ ಮಹಿಳೆಯರು ಪಾಲ್ಗೊಂಡಿದ್ದರು.