Advertisement

ಸರ್ಕಾರ ಟೇಕಾಫ್ ಆಗದಿದ್ದರೆ ಸಾಲ ಮನ್ನಾ ಸಾಧ್ಯವಾಗುತ್ತಿತ್ತೇ?

12:10 PM Aug 31, 2018 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಟೇಕಾಫ್ ಆಗದೇ ಇದ್ದರೆ ರೈತರ 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಸಾಧ್ಯವಾಗುತ್ತಿತ್ತೇ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಸರ್ಕಾರ 100 ದಿನ ಪೂರೈಸುತ್ತಿದ್ದರೂ ಇನ್ನೂ ಟೇಕಾಫೇ ಆಗಿಲ್ಲ ಎಂಬ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಟೀಕೆಗೆ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಪ್ರತಿಕ್ರಿಯೆ ನೀಡಿದ ಅವರು, ಕೊಡಗಿನ ಅತಿವೃಷ್ಟಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಕೇಂದ್ರ ಸರ್ಕಾರವೇ ಶ್ಲಾ ಸಿದೆ. ಸರ್ಕಾರ ಟೇಕಾಫ್ ಆಗದೇ ಇದ್ದರೆ ಇದು ಸಾಧ್ಯವಾಗುತ್ತಿತ್ತೇ? ಭ್ರಮಾಲೋಕದಲ್ಲಿರುವ ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ರೈತರ 45,000 ಕೋಟಿ ರೂ. ಸಾಲ ಮನ್ನಾ ಮಾಡುವ ನಿರ್ಧಾರ ಸಣ್ಣದೇನೂ ಅಲ್ಲ. ಅದೇ ರೀತಿ ರೈತರು, ಕೃಷಿ ಕಾರ್ಮಿಕರನ್ನು ಖಾಸಗಿ ಸಾಲದಿಂದ ಮುಕ್ತಗೊಳಿಸುವ ಋಣ ಪರಿಹಾರ ಅಧಿನಿಯಮ ಜಾರಿಗೊಳಿಸಲು ಮುಂದಾಗಿರುವುದು ಸರ್ಕಾರದ ಇಚ್ಛಾಶಕ್ತಿಯನ್ನು ತೋರಿಸುತ್ತದೆ.

ಕ್ರಿಯಾಶೀಲ ಸರ್ಕಾರ ಮಾತ್ರ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯ. ಆದರೆ, ನಮ್ಮ ಸರ್ಕಾರದಲ್ಲಿ ಡಿನೋಟಿಫಿಕೇಷನ್‌, ಅಪರಾಧ ಪ್ರಕರಣಗಳು ಆಗಿಲ್ಲ. ಬಹುಷಃ ಇಂತಹ ಸರ್ಕಾರ ಮಾತ್ರ ಕ್ರಿಯಾಶೀಲ ಎಂದು ಯಡಿಯೂರಪ್ಪ ಭಾವಿಸಿರಬಹುದು ಎಂದು ವ್ಯಂಗ್ಯವಾಡಿದರು.

ಸರ್ಕಾರ ಅಸ್ಥಿರ. ಶೀಘ್ರದಲ್ಲೇ ಉರುಳುತ್ತದೆ ಎಂಬ ಬಿಜೆಪಿ ಟೀಕೆ ಬಗ್ಗೆಯೂ ಕಿಡಿ ಕಾರಿದ ಅವರು, ಈ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಅಧಿಕಾರದಲ್ಲಿ ಮುಂದುವರಿಯಲಿದೆ. ಬಿಜೆಪಿಯವರು ಸರ್ಕಾರ ಅಸ್ಥಿರ ಎಂದು ಹೇಳುತ್ತಾ ಕಾಲ ಕಳೆಯಬೇಕಾಗುತ್ತದೆ ಎಂದರು.

Advertisement

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಮಿತ್ರ ಪಕ್ಷಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈ ರೀತಿಯ ಮಾತುಗಳು ಕೇವಲ ಊಹಾಪೋಹ ಮಾತ್ರ. ಸಾಲ ಮನ್ನಾ ಸೇರಿದಂತೆ ಎಲಾ ನಿರ್ಧಾರಗಳನ್ನು ಎರಡೂ ಪಕ್ಷಗಳು ಒಟ್ಟಾಗಿ ಕುಳಿತು ಚರ್ಚಿಸಿಯೇ ತೆಗೆದುಕೊಂಡಿವೆ. ಹೀಗಿರುವಾಗ ಭಿನ್ನಾಭಿಪ್ರಾಯ ಎಲ್ಲಿ ಉದ್ಭವವಾಗುತ್ತದೆ ಎಂದು ಪ್ರಶ್ನಿಸಿದರು.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, ಮಿತ್ರ ಪಕ್ಷಗಳ ಮಧ್ಯೆ ಆಂತರಿಕ ಭಿನ್ನಾಭಿಪ್ರಾಯ, ಒಳಜಗಳವಿದೆ ಎಂಬುದು ಸುಳ್ಳು. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಆಧಾರದ ಮೇಲೆ ಈ ಸರ್ಕಾರ ನಡೆಯುತ್ತಿದೆ. ಹೀಗಾಗಿ ಅಧಿಕಾರದ ಆಸೆ ಹೊಂದಿರುವವರಿಗೆ ನಿರಾಶೆಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next