Advertisement

ಬಿಜೆಪಿ ಅಧಿಕಾರಕ್ಕೆ ಬಂದರೆ ಎಸಿಬಿ ರದ್ದು

01:18 PM Oct 07, 2017 | Team Udayavani |

ಹುಬ್ಬಳ್ಳಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಎಸಿಬಿ ತನಿಖಾ ಸಂಸ್ಥೆಯನ್ನು ರದ್ದುಗೊಳಿಸುವುದಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟರಿಗೆ ದುಸ್ವಪ್ನವಾಗಬೇಕಿದ್ದ ಎಸಿಬಿ, ಭ್ರಷ್ಟರ ರಕ್ಷಣೆಗೆ ನಿಂತಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿ ಮೂಲಕ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಬಳಸಿಕೊಳ್ಳುತ್ತಿರುವುದರಿಂದ ಸಂಸ್ಥೆ ಮೂಲ ಉದ್ದೇಶಕ್ಕೆ ಧಕ್ಕೆಯಾಗಿದೆ. ಆರಂಭದಿಂದ ಇಲ್ಲಿಯವರೆಗೂ ನಾವು ಎಸಿಬಿಯನ್ನು ವಿರೋಧಿಸುತ್ತಿದ್ದೇವೆ. ಮುಂದೆಯೂ ವಿರೋಧಿಸುತ್ತೇವೆ. ಅಧಿಕಾರಕ್ಕೆ ಬಂದರೆ ಎಸಿಬಿಯನ್ನು ರದ್ದುಗೊಳಿಸುವುದಾಗಿ ತಿಳಿಸಿದರು.

ಐಟಿ ಅಧಿಕಾರಿಗಳು ರಾಜ್ಯದ ಸಚಿವರ ಮೇಲೆ ದಾಳಿ ಮಾಡಿದ್ದಾರೆ. ಇನ್ನೂ ಕೆಲವು ಸಚಿವರ ಮೇಲೆ ದಾಳಿ ನಡೆಸಬಹುದೆನ್ನುವ ಕಾರಣಕ್ಕೆ ಎಸಿಬಿ ಮೂಲಕ ಐಟಿ ಅಧಿಕಾರಿಗಳ ಮೇಲೆ ದಾಳಿಗೆ ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ಕೇಂದ್ರ ಸರಕಾರದ ಸ್ವತಂತ್ರ ಸಂಸ್ಥೆಯಾಗಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೇಲೆ ನಿಯಮಾವಳಿ ಪ್ರಕಾರ ದಾಳಿ ಮಾಡಲು, ವಿಚಾರಣೆ ನಡೆಸಲು ಸಾಧ್ಯವಿಲ್ಲ.

ಐಟಿ ಅಧಿಕಾರಿಗಳ ಕಾರ್ಯಕ್ಷಮತೆ ಕುಗ್ಗಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಎಸಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯದ ನಡುವಿನ ಸಂಘರ್ಷಕ್ಕೆ ಕಾರಣವಾಗಲಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿ ದುರ್ಬಳಕೆ ಕೈಬಿಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ನಾಯಕರಾದ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಖಾಸಗಿ ದೂರು ದಾಖಲಾಗುತ್ತಿದ್ದಂತೆ ಎಸಿಬಿ  ವಿಚಾರಣೆಗೆ ಸರ್ಕಾರ ಸೂಚನೆ ನೀಡಿತ್ತು. ಒಂದು ವೇಳೆ ಹೈಕೋರ್ಟ್‌ನಲ್ಲಿ ಜಾಮೀನು ಪಡೆಯದಿದ್ದರೆ ಅವರನ್ನು ಬಂಧಿಸುವ ಎಲ್ಲ ಸಾಧ್ಯತೆಗಳಿದ್ದವು. ಸಿಐಡಿ ಕೂಡ ರಾಜ್ಯ ಸರಕಾರದ ಕೈಗೊಂಬೆಯಾಗಿದೆ.

Advertisement

ಸಚಿವರ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸಿ ಕ್ಲೀನ್‌ಚಿಟ್‌ ಕೊಡುವುದೇ ಸಿಐಡಿಯ ಪ್ರಮುಖ ಕಾರ್ಯವಾಗಿದೆ ವಿನಃ ಪ್ರಾಮಾಣಿಕ ತನಿಖೆಯಾಗುತ್ತಿಲ್ಲ ಎಂದರು. ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿ ಒಂದು ತಿಂಗಳಾದರು ಪ್ರಕರಣಕ್ಕೆ ಸಂಬಂಧಿದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಿಲ್ಲ.

ಸಿಐಡಿ ಅಧಿಕಾರಿಗಳು ತನಿಖೆ ಹಂತದಲ್ಲಿ ಸಾಕಷ್ಟು ಸಾಕ್ಷಿಗಳನ್ನು ನಾಶ ಮಾಡಿದ್ದಾರೆ. ಇದೀಗ ಪ್ರಕರಣವನ್ನು ಸಿಐಡಿಗೆ ಕೊಡುವ ಮುನ್ನ ಇನ್ನೊಂದಿಷ್ಟು ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆಗಳಿವೆ. ಸಚಿವ ಕೆ.ಜೆ. ಜಾರ್ಜ್‌ ಅವರನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಾಕಷ್ಟು ಕಾನೂನು ಬಾಹಿರ ಕೆಲಸಗಳನ್ನು ಮಾಡುತ್ತಿದ್ದಾರೆ. 

ಕೂಡಲೇ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು. ರಾಜ್ಯ ಸರಕಾರ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ವಿಫ‌ಲವಾಗಿದೆ. ಇಲ್ಲಿನ ಮಹಾನಗರ ಪಾಲಿಕೆಗೆ ಬರಬೇಕಾದ 137 ಕೋಟಿ ರೂ. ಪಿಂಚಣಿ ಬಾಕಿ ಹಣ ನೀಡುತ್ತಿಲ್ಲ. ಈ ಹಣವನ್ನು ತರುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಕೂಡ ವಿಫ‌ಲವಾಗಿದ್ದಾರೆ.

ಮಹಾನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸುವಲ್ಲಿ 23 ಕೋಟಿ ರೂ. ವೆಚ್ಚದ ಯೋಜನೆ ಬಗ್ಗೆ ಸರ್ಕಾರದಿಂದ ಈವರೆಗೂ ಯಾವುದೇ ಸ್ಪಂದನೆಯಿಲ್ಲ. ಕೇಂದ್ರದಿಂದ ಮಂಜೂರಾಗಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ ಎಂದರು.   

Advertisement

Udayavani is now on Telegram. Click here to join our channel and stay updated with the latest news.

Next