Advertisement

BJP ರೇಣುಕಾಚಾರ್ಯರಿಗೆ ಲೋಕಸಭೆಗೆ ಟಿಕೆಟ್ ಕೊಟ್ಟರೆ ಗೆಲುವಿಗೆ ಕೆಲಸ: ಸಂಸದ ಸಿದ್ದೇಶ್ವರ

06:29 PM Jul 14, 2023 | Team Udayavani |

ದಾವಣಗೆರೆ: ”ನನಗೂ ಹೊನ್ನಾಳಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ರೇಣುಕಾಚಾರ್ಯ ನನ್ನ ಸ್ಥಾನಕ್ಕೆ ಬಂದರೆ ನಾನು ಅವರ ಸ್ಥಾನಕ್ಕೆ ಹೋಗುತ್ತೇನೆ. ಗೆದ್ದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಂತ್ರಿ ಏನು ಮುಖ್ಯಮಂತ್ರಿಯೇ ಆಗುತ್ತೇನೆ” ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿಕೆ ನೀಡಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೇಣುಕಾಚಾರ್ಯ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ಅವರಿಗೆ ಆಸೆ ಇದ್ದರೆ ಸ್ಪರ್ಧಿಸಲಿ. ಅವರು ಎಂಪಿ ಸ್ಥಾನಕ್ಕೆ ನಿಂತರೆ ಹೊನ್ನಾಳಿಯಲ್ಲಿ ಶಾಸಕ ಸ್ಥಾನ ಖಾಲಿ ಆಗುತ್ತದೆ. ನಾನು ಅಲ್ಲಿಗೆ ಹೋಗುತ್ತೇನೆ. ನಾನು ರೇಣುಕಾಚಾರ್ಯ ಅವರಿಗೆ ಎಂಪಿಗೆ ಶಿಫಾರಸು ಮಾಡುತ್ತೇನೆ. ಅವರು ನನಗೆ ಎಂಎಲ್‌ಎ ಸ್ಥಾನಕ್ಕೆ ಶಿಫಾರಸು ಮಾಡಲಿ” ಎಂದರು.

ಹೊನ್ನಾಳಿಯಿಂದ ಸ್ಪರ್ಧಿಸುವಂತೆ ಸಾಕಷ್ಟು ಒತ್ತಡವೂ ಇದೆ. ಅಲ್ಲಿ ನಮ್ಮವರು ಬೇಕಾದಷ್ಟು ಜನರು ಇದ್ದಾರೆ. ಹೊನ್ನಾಳಿಯಿಂದ ಗೆದ್ದೇ ಗೆಲ್ಲುತ್ತೇನೆ  ಮಂತ್ರಿಯೇನು ಮುಖ್ಯಮಂತ್ರಿಯೂ ಆಗುತ್ತೇನೆ ಎಂದು ತಿಳಿಸಿದರು.

ಎಂ.ಪಿ. ರೇಣುಕಾಚಾರ್ಯ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇನೆ. ಅವರಿಗೆ ಆಸೆ ಇದ್ದರೆ ಸ್ಪರ್ಧಿಸಲಿ. ಅಪೇಕ್ಷೆ ಪಡುವುದು, ಆಕಾಂಕ್ಷಿ ಎಂದು ಹೇಳಿಕೊಳ್ಳುವುದು ತಪ್ಪೇನು ಅಲ್ಲ. ಪಕ್ಷ ರೇಣುಕಾಚಾರ್ಯ ಅವರಿಗೇ ಟಿಕೆಟ್ ಕೊಟ್ಟರೂ ಗೆಲುವಿಗೆ ಕೆಲಸ ಮಾಡುತ್ತೇನೆ. ಯಾರು ಏನೇ ಹೇಳಿದರೂ ಪಕ್ಷದ ತೀರ್ಮಾನವೇ ಮುಖ್ಯ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದರು.

ಅಕ್ಬರ್, ಆಂಟೋನಿ ಫುಲ್ ಖುಷ್. ಅಮರ್ ಮಟಾಷ್…,ಇದು ಸಿದ್ದರಾಮಯ್ಯ ಅವರ ಬಜೆಟ್ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಐದು ಗ್ಯಾರಂಟಿ  ಸರಿಯಾಗಿ ಜಾರಿಗೆ ತಂದಿಲ್ಲ. ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಅವರೇ ಗೊಂದಲದಲ್ಲಿದ್ದಾರೆ ಎಂದು ದೂರಿದರು.

Advertisement

ಹಣಕಾಸು  ಸಚಿವರೂ ಆಗಿರುವ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ವಿಮಾನ ನಿಲ್ದಾಣ, ಕೈಗಾರಿಕಾ ಕಾರಿಡಾರ್, ಸರ್ಕಾರಿ ವೈದ್ಯಕೀಯ ಕಾಲೇಜು ಯಾವುದನ್ನೂ ಕೊಟ್ಟಿಲ್ಲ.  ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಮಾತನಾಡಬೇಕಿತ್ತು ಎಂದರು.

ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ನೇರ ರೈಲು ಮಾರ್ಗ ಮಾಜಿ ಸಂಸದ ಜನಾರ್ದನ ಸ್ವಾಮಿ ಅವರ ಅವಧಿಯಲ್ಲೇ ಆಗಬೇಕಿತ್ತು. 15  ವರ್ಷಗಳಾದರೂ ಆಗಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಂಡು ಅನುದಾನ ಬಿಡುಗಡೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಭೂ ಸ್ವಾಧೀನ ನಡೆಯಬೇಕಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ನಾನು, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ. ಈಗಿರುವ ಪರಿಸ್ಥಿತಿ ಸ್ವಲ್ಪ ತಿಳಿಯಾಗಲಿ. ಆ ನಂತರ ಭೇಟಿ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next