ದಾವಣಗೆರೆ: ನಮ್ಮ ಪೂರ್ವಜರು ಯಾವ ರೀತಿ ಪರಿಸರ ಕಾಳಜಿಯನ್ನಿರಿಸಿಕೊಂಡು ಕೆಲಸ ಮಾಡುತ್ತಿದ್ದರೋ ಅದೇ ಪದ್ಧತಿ ಅನುಸರಿಸುತ್ತ ಮುನ್ನಡೆದರೆ ನಮಗೆ ಹಾಗೂ ಮುಂದಿನ ಪೀಳಿಗೆಗೆ ಒಳಿತಾಗುತ್ತದೆ ಎಂದು ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕೋಲ್ಕುಂಟೆ ಗ್ರಾಮಾಭ್ಯುದಯ ಸಂಘದಿಂದ ತಾಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಸೋಮವಾರ ನಡೆದ ಕುಶಲೋಪರಿ ಸಭಾ ಹಾಗೂ ಗ್ರಾಮ ಶಿಲಾಶಾಸನ ಪ್ರತಿಕೃತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಪ್ರಕೃತಿ ಸಂರಕ್ಷಣೆ ಮಾಡದೇ ಹೋದರೆ ಮುಂದಿನ ಪೀಳಿಗೆಗೆ ಬಹಳ ಕಷ್ಟ ಆಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಮುಂದಿನ ಪೀಳಿಗೆಗೆ ಒಳ್ಳೆಯದಾಗಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ಪರಿಸರ ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.
ಪ್ರಕೃತಿ ಸಂರಕ್ಷಣೆ ಮಾದರಿ ಕಾರ್ಯ ಗ್ರಾಮಗಳಿಂದಲೇ ಆಗಬೇಕು. ನಗರಗಳಲ್ಲಿ ಇದು ಆಗುವುದಿಲ್ಲ. ನಗರಗಳಿಂದ ಆಚೆ ಬರುವವರೆಗೆ ನಮಗೆ ಉಸಿರಾಡಲು ಸಹ ಆಗುವುದಿಲ್ಲ. ಬರೀ ಕಾಂಕ್ರೀಟ್ ಕಾಡುಗಳಿಂದ ನಮಗೆ ಉಸಿರಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಪ್ಲಾಸ್ಟಿಕ್‌ನಂಥ ಹಾನಿಕಾರಕ ಉತ್ಪನ್ನ ಬೇರೆ ಯಾವುದೂ ಇಲ್ಲ. ಅದು ಸಣ್ಣ ಸಣ್ಣ ತುಂಡುಗಳಾಗಿ ವಾತಾವರಣಕ್ಕೆ ಬಹಳ ಹಾನಿಕಾರಕವಾಗಿದೆಯಲ್ಲದೆ ಆಹಾರದ ಮೂಲಕ ಸಂಪೂರ್ಣವಾಗಿ ನಮ್ಮ ಶರೀರದೊಳಗೆ ಬಂದಿದೆ. ಹೀಗಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಕಡಿಮೆ ಮಾಡಬೇಕು. ಇದಕ್ಕೆ ನಮ್ಮ ಗ್ರಾಮಗಳು ಹಾಗೂ ದೇವಾಲಯಗಳು ಮಾದರಿ ಆಗಬೇಕು ಎಂದು ಆಶಿಸಿದರು.
ನಗರೀಕರಣದಿಂದ ಇಂದು ಕೆಲವೇ ಶಾಸನಗಳು ಉಳಿದುಕೊಂಡಿವೆ. ನಮ್ಮ ನಿಮ್ಮೆಲ್ಲರ ಪೂರ್ವಜರ ಆಕಾಂಕ್ಷೆ ಶಿಲಾ ಶಾಸನದಲ್ಲಿದೆ. ಅದಕ್ಕಾಗಿ ಶಿಲಾ ಶಾಸನಗಳನ್ನು ಸಂರಕ್ಷಣೆ ಮಾಡಬೇಕು. ನಮ್ಮ ಗುರುತು ಇರುವುದೇ ಶಿಲಾಶಾಸನಗಳಲ್ಲಿ ಎಂದ ಒಡೆಯರ್, ಬಿ.ಎಲ್. ರೈಸ್ ಅವರು ಸಂಪೂರ್ಣ ಶಿಲಾ ಶಾಸನಗಳನ್ನು ದಾಖಲೆ ಮಾಡಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಕೋಲ್ಕುಂಟೆ ಗ್ರಾಮಾಭ್ಯುದಯ ಸಂಘದ ಸದಸ್ಯರು ಶಿಲಾ ಶಾಸನದ ಬೆಳ್ಳಿಯ ಪ್ರತಿಕೃತಿಯನ್ನು ಮಹಾರಾಜರಿಗೆ ನೀಡಿ ಗೌರವಿಸಿದರು. ಶಿಕ್ಷಕ ಬಿ.ಎಸ್. ವೀರೇಶ್ ಗ್ರಾಮದ ಇತಿಹಾಸ ತಿಳಿಸಿದರು. ಚಿತ್ರನಟ ಹಾಗು ಕೋಲ್ಕುಂಟೆ ಗ್ರಾಮಾಭ್ಯುದಯ ಸಂಘದ ಗೌರವಾಧ್ಯಕ್ಷ ಸುಚೇಂದ್ರಪ್ರಸಾದ್ ನಿರೂಪಿಸಿದರು. ಅಧ್ಯಕ್ಷ ಮಂಜುನಾಥ ಕೆ.ಜಿ., ಪ್ರಧಾನ ಕಾರ್ಯದರ್ಶಿ ಅಶೋಕ ಜಿ.ಎಚ್. ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.