ಕೋಲ್ಕತ್ತಾ : ಮಾಯಾವತಿ ಮತ್ತು ಅಖೀಲೇಶ್ ಯಾದವ್ ಅವರು ಕರೆದರೆ ವಾರಣಾಸಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚಾರ ಮಾಡುತ್ತೇನೆ ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಖೀಲೇಶ್ ಯಾದವ್ ಮತ್ತು ಮಾಯಾವತಿ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅವರು ಕರೆದರೆ ನಾನು ಅಲ್ಲಿಗೆ ತೆರಳುತ್ತೇನೆ ಎಂದಿದ್ದಾರೆ.
ಯಾಕೆ ರಾಜಕೀಯಕ್ಕೆ ಮಾತ್ರ ನೀವು ನನ್ನನ್ನು ಬಿಂಬಿಸುತ್ತೀರಿ.ವಾರಣಾಸಿ ಕಾಶಿ ವಿಶ್ವನಾಥನ ಕ್ಷೇತ್ರ. ಅಲ್ಲಿ ನನಗೆ ಹಲವರು ಪರಿಚಯಸœರು ಇದ್ದಾರೆ ಎಂದರು.
ಪಶ್ಚಿಮ ಬಂಗಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೆ ಎರಡು ಬೃಹತ್ ಸಮಾವೇಶಗಳನ್ನು ನಡೆಸಿ ಮಮತಾ ಬ್ಯಾನರ್ಜಿ ವಿರುದ್ಧ ಸಮರ ಸಾರಿದ್ದಾರೆ. ಮಮತಾ ಕೂಡ ನಿರಂತರವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ದ ಕಿಡಿ ಕಾರುತ್ತಿದ್ದಾರೆ.
2014 ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಪ್ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ವಿರುದ್ಧ 3 ಲಕ್ಷದ 71 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ 75 ಸಾವಿರ ಮತ್ತು ಬಿಎಸ್‌ಪಿ ಅಭ್ಯರ್ಥಿ 60 ಸಾವಿರದಷ್ಟು ಮಾತ್ರ ಮತಗಳನ್ನು ಪಡೆದಿದ್ದರು.