ಬೀದರ: ಭಾರತ ದೇಶ ತಿರುಗಿಬಿದ್ದರೆ ಪಾಕಿಸ್ತಾನಕ್ಕೆ ಉಳಿಗಾಲ ಇಲ್ಲ. ಭಾರತ ಆಕ್ರಮಣ ಮಾಡಿದರೆ ಅದನ್ನು ತಡೆಯುವ ಶಕ್ತಿ ಪಾಕಿಸ್ತಾನಕ್ಕೆ ಇಲ್ಲ ಎಂಬುದು ಆ ದೇಶದ ಮಕ್ಕಳಿಗೂ ಅರ್ಥವಾಗಿದೆ. ಕಾರಣ ಇಂದು ಪಾಕ್ತಿಸ್ತಾನಿಗಳು ನಿದ್ದೆ ಕೆಡಿಸಿಕೊಂಡು ದಿನ ಕಳೆಯುತ್ತಿದ್ದಾರೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದಲ್ಲಿ ಟೀಮ್ ಮೋದಿ ವತಿಯಿಂದ ಏರ್ಪಡಿಸಿದ್ದ ನರೇಂದ್ರ ಮೋದಿ ಅವರ 5 ವರ್ಷ ಅಭಿವೃದ್ಧಿಯ ಪರಿಚಯ ಹಾಗೂ “ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಉಗ್ರರ ದಾಳಿಗೆ ತಕ್ಕ ಉತ್ತರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತಿನಿಂದ ಇಂದು ಪಾಕಿಸ್ತಾನಕ್ಕೆ ನಡುಕು ಹುಟ್ಟಿದೆ. ಪಾಕಿಸ್ತಾನದಲ್ಲಿ ಹೈ ಅರ್ಲ್ಟ್ ಸೂಚಿಸಲಾಗಿದೆ. ಯುದ್ಧದ ಸ್ಥಿತಿ ಇಂದು ಪಾಕಿಸ್ತಾನದಲ್ಲಿ ಎದುರಾಗಿದೆ. ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಸೂಕ್ತ ಸಮಯಕ್ಕೆ ಉತ್ತರ ನೀಡುತ್ತಾರೆ. ಆರ್ಥಿಕ ಸ್ಥಿತಿ ಹಾಳು ಮಾಡುತ್ತಿದ್ದ ಪಾಕ್‌ಗೆ ಉತ್ತರ ನೀಡಿದ್ದಾರೆ. ಇಂದು ವಿಶ್ವದಲ್ಲಿ ಭಾರತದ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಪಾಕ್ ಆರ್ಥಿಕ ಸ್ಥಿತಿ ಅಲ್ಲೇ ಇದೆ. ಇಂತಹ ದೇಶ ಭಾರತ ದೇಶದೊಂದಿಗೆ ಯುದ್ಧ ಮಾಡುವ ಶಕ್ತಿ ಇದೇಯೇ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರಿಗೆ ಯಾಕೆ ಓಟ್ ಮಾಡಬೇಕು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಭಾರತದ ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೆ ಖಾತೆ ಇರಬೇಕು ಎಂದು 33 ಕೋಟಿ ಹೊಸ ಖಾತೆ ತೆರೆದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. 3 ಕೋಟಿಗೂ ಅಧಿಕ ನಕಲಿ ಗ್ಯಾಸ್ ಸಂಪರ್ಕ ಕಡಿತಗೊಂಡಿದೆ. ಮೂರು ಲಕ್ಷ ನಕಲಿ ಕಂಪನಿಗಳು ಬಂದ್, ಆಧಾರ್ ಲಿಂಕ್ ಮಾಡಿದ ಕಾರಣ ನಕಲಿ ಖಾತೆಗಳು ಬಂದ್ ಆದವು ಎಂದು ವಿವರಿಸಿದರು. ಯಾವುದೇ ಯೋಜನೆ ಮಧ್ಯವರ್ತಿಗಳು ಇಲ್ಲದೇ ಎಲ್ಲಾ ಯೋಜನೆಗಳ ಲಾಭ ಪಡೆಯಲು ನೇರ ಖಾತೆಗೆ ಹಾಕುವ ಕಾರ್ಯ ಮಾಡಿದ್ದಾರೆ. ಮಧ್ಯವರ್ತಿಗಳ ಹಾವಳಿಗೆ ತಡೆ ಹಾಕಿ ಸರ್ಕಾರದ ಹಣ ನೇರವಾಗಿ ಫಲಾನುಭವಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ ಎಂದರು.
ಆಯುಷ್ಮಾನ್ ಯೋಜನೆ ಇಂದು ಬಡವರ ಪಾಲಿಗೆ ಶ್ರೀರಕ್ಷೆಯಾಗಿದೆ. ಅನಾರೋಗ್ಯ ಸಮಯದಲ್ಲಿ ಬಡವರು ಹಣಕ್ಕಾಗಿ ಪರದಾಡುವ ಸ್ಥಿತಿ ತಿಳಿದ ಮೋದಿ ಅವರು ಯೋಜನೆ ಅನುಷ್ಠಾನಗೊಳಿಸಿ ಬಡವರ ಆರೋಗ್ಯದ ಕಡೆಗೆ ಕಾಳಜಿ ವಹಿಸಿದ್ದಾರೆ. ಓಟ್ ಹಾಕುವ ಮುನ್ನ ಪ್ರತಿಯೊಬ್ಬರು ಮೂರು ಪ್ರಶ್ನೆಗೆ ಉತ್ತರ ಪಡೆದುಕೊಳ್ಳಬೇಕು. ನಾವು ಪಕ್ಷಕ್ಕೆ ಮತ ಹಾಕಬೇಕೊ ಅಥವಾ ದೇಶಕ್ಕೆ ಮತಹಾಕಬೇಕೊ ಎಂದು ತಿಳಿದುಕೊಳ್ಳಿ. ಪಕ್ಷಕ್ಕೆ ಮತ ಹಾಕಬೇಡಿ, ದೇಶಕ್ಕೆ ಹಾಕಬೇಕು. ಪ್ರಧಾನಿ ಮೋದಿ ದೇಶಕ್ಕಾಗಿ ಇದ್ದಾರೆ. ಅವರಿಗಾಗಿ ಪ್ರತಿಯೊಬ್ಬರು ಮತ ಹಾಕಬೇಕು ಎಂದು ಹೇಳಿದರು.