Advertisement

Mangaluru ಶೌರ್ಯ ಮರೆತರೆ ದೇಶ, ಹಿಂದುತ್ವ ನಾಶ: ಚಕ್ರವರ್ತಿ ಸೂಲಿಬೆಲೆ

01:11 AM Oct 10, 2023 | Team Udayavani |

ಮಂಗಳೂರು: ಶೌರ್ಯ ಮರೆತರೆ ಭಾರತ, ಹಿಂದುತ್ವ ನಾಶವಾಗಲಿದೆ ಎಂದು ಚಿಂತಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

Advertisement

ವಿಶ್ವಹಿಂದೂ ಪರಿಷತ್‌ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ ಬಜರಂಗದಳದ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಶೌರ್ಯ ಜಾಗರಣ ರಥಯಾತ್ರೆ ಸೋಮವಾರ ಮಂಗಳೂರಿಗೆ ಆಗಮಿಸಿದ ಸಂದರ್ಭ ಕದ್ರಿ ಮೈದಾನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಹಿಂದೂ ಮತ್ತು ಶೌರ್ಯ ಒಂದೇ ನಾಣ್ಯದ ಎರಡು ಮುಖಗಳು. ಶೌರ್ಯದ ಉದಾಹರಣೆಗಳಿಗೆ ನಮ್ಮಲ್ಲಿ ಕೊರತೆಯಿಲ್ಲ. ಆದರೆ ಕೆಲವೊಮ್ಮೆ ಸೆಕ್ಯುಲರಿಸಂ, ತುಷ್ಟೀಕರಣಗಳ ಪ್ರಭಾವ ಆವರಿಸಿಕೊಂಡಾಗ ಶೌರ್ಯವನ್ನು ಮರೆತು ಹೊಡೆತ ತಿಂದಿದ್ದೇವೆ. ಅನಂತರ ಮತ್ತೆ ಶೌರ್ಯ ಅನಾವರಣಗೊಂಡಿದೆ. ಹಾಗಾಗಿ ಶೌರ್ಯವನ್ನು ಮರೆಯಬಾರದು ಎಂದು ಸೂಲಿಬೆಲೆ ಹೇಳಿದರು.

ಜಾತಿಯಿಂದ ಒಡೆಯುವ ಪ್ರಯತ್ನ
ಬ್ರಿಟಿಷರು ಹಲವು ರೀತಿಯಲ್ಲಿ ಅಂದು ಭಾರತೀಯರನ್ನು ಒಡೆದು ಆಳಿದರು. ಆದರೆ ಇಂದು ಜಾತಿ ಹೆಸರಿನಲ್ಲಿ ಒಡೆಯುವ ಪ್ರಯತ್ನ ನಡೆಯುತ್ತಿದೆ. ಜಾತಿಗಣತಿ ಹೆಸರಲ್ಲಿ ಮುಂಬರುವ ದಿನಗಳಲ್ಲಿ ಹಿಂದೂ ಗಳನ್ನು ಒಡೆಯುವ ಪ್ರಯತ್ನಗಳು ನಡೆಯಲಿದ್ದು ಇದನ್ನು ಒಟ್ಟಾಗಿ ಎದುರಿಸಬೇಕಾಗಿದೆ ಎಂದರು.

ಲವ್‌ ಜೆಹಾದ್‌, ಡ್ರಗ್ಸ್‌ ಎಚ್ಚರ
ಆಧುನಿಕತೆಗೆ ಮೊರೆ ಹೋಗುತ್ತಾ ಅನೇಕ ಯುವತಿಯರು ಸುಲಭವಾಗಿ ಲವ್‌ ಜೆಹಾದ್‌ಗೆ ಬಲಿಯಾಗುತ್ತಿದ್ದಾರೆ. ವಂಚಿಸಿ ಮತಾಂತರ ಮಾಡಲಾಗುತ್ತಿದೆ. ಇನ್ನೊಂದೆಡೆ ಡ್ರಗ್ಸ್‌ ಮೂಲಕ ಯುವಜನರನ್ನು ಹಾಳು ಮಾಡ ಲಾಗುತ್ತಿದೆ. ಮಾವೋವಾದಿಗಳು ಕೂಡ ಹಿಂದೂಗಳ ಮೇಲೆ ಮುಗಿಬೀಳುತ್ತಿದ್ದಾರೆ. ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು ಹಿಂದೂಗಳ ವಿರುದ್ಧ ಪ್ರತಿಯೊಂದಕ್ಕೂ ಎಫ್ಐಆರ್‌ ದಾಖಲಿಸುತ್ತಿದೆ. ಇದೊಂದು ನಿರ್ಣಾಯಕ ಸಮಯವಾಗಿದ್ದು ಶೌರ್ಯದ ಮೂಲಕ ಎದ್ದು ನಿಲ್ಲಬೇಕಾದ ಅಗತ್ಯವಿದೆ ಎಂದು ಚಕ್ರವರ್ತಿ ಹೇಳಿದರು.

Advertisement

ಪರುಶುರಾಮನ ಆದರ್ಶ ತೋರಿಸಿ
ಶ್ರೀ ಕ್ಷೇತ್ರ ಕರಿಂಜದ ಓಂ ಶ್ರೀ ಶಕ್ತಿಗುರು ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಪರಶುರಾಮನ ಶೌರ್ಯ, ಆದರ್ಶ ತೋರಿಸಿದರೆ ಭಯೋತ್ಪಾದನೆ, ಮತಾಂತರ ತಡೆಯಲು ಸಾಧ್ಯವಿಲ್ಲ. ದೇಶ ಭಯೋತ್ಪಾದನೆಯಿಂದ ಮುಕ್ತವಾಗಲು ಬಜರಂಗದಳದಂತಹ ಸಂಘಟನೆಗಳ ಅಗತ್ಯವಿದೆ. ಎಲ್ಲರೂ ಎಚ್ಚೆತ್ತುಕೊಂಡರೆ ಮಾತ್ರ ಶೌರ್ಯ ಜಾಗೃತವಾಗುತ್ತದೆ ಎಂದರು.

ನರೇಂದ್ರನ ಕಾಲ
ವಿಶ್ವಹಿಂದೂ ಪರಿಷತ್‌ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮಾತನಾಡಿ, ಸರಕಾರ ಶಾಂತಿ ನಿರ್ಮಾಣವಾಗಬೇಕೆಂದು ಹೇಳುತ್ತಿದೆ. ಆದರೆ ಅಶಾಂತಿ ಸೃಷ್ಟಿಸುತ್ತಿರುವವರು ಯಾರು? ಶಿವಮೊಗ್ಗದಲ್ಲಿ ಹಿಂದೂಗಳ ಮನೆ ಮೇಲೆ ದಾಳಿ ನಡೆದಿದೆ. ಅದೇ ಘಟನೆ ಮಂಗಳೂರಿನಲ್ಲಿ ನಡೆದಿದ್ದರೆ ದಂಗೆಕೋರರ ಮನೆಗಳು ಪುಡಿಯಾಗುತ್ತಿದ್ದವು. ಇದು ಔರಂಗಜೇಬನ ಕಾಲವಲ್ಲ, ನರೇಂದ್ರನ ಕಾಲ ಎಂದು ಜೆಹಾದಿಗಳು ತಿಳಿದುಕೊಳ್ಳಬೇಕು. ತ್ಯಾಗ, ಶೌರ್ಯದಿಂದ ದೇಶ, ಸಂಸ್ಕೃತಿ ಉಳಿದಿದೆ. ಅಂತಹ ತ್ಯಾಗಿ, ಪರಾಕ್ರಮಿಗಳನ್ನು ಸ್ಮರಣೆ ಮಾಡಿ ಜಾಗೃತಿ ಮೂಡಿಸಲು ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾರ ಬಲಿದಾನವೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದರು.

ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ| ಎಂ.ಬಿ. ಪುರಾಣಿಕ್‌ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರೀಯ ಸತ್ಸಂಗ ಪ್ರಮುಖ್‌ ಮಹಾಬಲೇಶ್ವರ ಹೆಗಡೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸಂಘಚಾಲಕ ಸುನೀಲ್‌ ಆಚಾರ್‌, ವಿಎಎಚ್‌ಪಿ ಮಂಗಳೂರು ಅಧ್ಯಕ್ಷ ಎಚ್‌.ಕೆ. ಪುರುಷೋತ್ತಮ, ರಥಯಾತ್ರೆ ಸ್ವಾಗತ ಸಮಿತಿಯ ಕಾರ್ಯದರ್ಶಿ ಭುಜಂಗ ಕುಲಾಲ್‌ ಉಪಸ್ಥಿತರಿದ್ದರು.

ರಥಯಾತ್ರೆ ಸ್ವಾಗತ ಸಮಿತಿಯ ಅಧ್ಯಕ್ಷ ಗಿರಿಧರ ಶೆಟ್ಟಿ ಸ್ವಾಗತಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ನವೀನ್‌ ಮೂಡುಶೆಡ್ಡೆ ಪ್ರಸ್ತಾವನೆಗೈದರು. ಆಶಿಕ್‌ ಕದ್ರಿ ನಿರ್ವಹಿಸಿದರು. ಚಿರಾಗ್‌ ಕದ್ರಿ ವಂದಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವಕ್ಕಾಗಿ ಹುತಾತ್ಮರಾದವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next