Advertisement

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

10:44 PM Dec 05, 2020 | mahesh |

ಬಿಜೆಪಿ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರೆ ಇಂದಿಗೂ ನಾನು ಸಿಎಂ ಆಗಿರುತ್ತಿದ್ದೆ, 12ವರ್ಷ ಇಟ್ಟುಕೊಂಡು ಬಂದಿದ್ದ ಗೌರವ, ಒಳ್ಳೆತನವನ್ನು ಸಿದ್ದರಾಮಯ್ಯ ಮತ್ತು ಅವರ ಗುಂಪಿನವರು ಹಾಳುಮಾಡಿದರು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಣ್ಣೀರು ಸುರಿಸೋದು ದೇವೇಗೌಡ ಮನೆಯವರ ಸಂಸ್ಕೃತಿ. ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರು ಕೊನೆಗೂ ಸತ್ಯ ಹೇಳಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶ್ಲೇಷಿಸಿದ್ದಾರೆ.

Advertisement

ಮೈಸೂರು: ನಾನು ರಾಜಕೀಯ ಜೀವನದಲ್ಲಿ ಗಳಿಸಿದ್ದ ಅಪಾರ ಜನಮನ್ನಣೆ ಹಾಗೂ ಹೆಸರನ್ನು ಕಾಂಗ್ರೆಸ್‌ನವರು ಸರ್ವನಾಶ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯ ನನ್ನನ್ನು ಬಿಜೆಪಿ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆಂದು ಆರೋಪಿಸುತ್ತಾರೆ. ಒಂದು ವೇಳೆ ಬಿಜೆಪಿ ಜತೆಗೆ ಉತ್ತಮ ಸಂಬಂಧ ಉಳಿಸಿಕೊಂಡಿದ್ದರೆ ಇಂದಿಗೂ ನಾನು ಸಿಎಂ ಆಗಿರುತ್ತಿದ್ದೆ. ಕಾಂಗ್ರೆಸ್‌ ಸಹವಾಸ ಮಾಡಿದ್ದರಿಂದ 12 ವರ್ಷ ಉಳಿಸಿಕೊಂಡಿದ್ದ ಗೌರವ, ಒಳ್ಳೆತನ ಹಾಗೂ ಜನಮನ್ನಣೆ ಸರ್ವನಾಶವಾಯಿತು. ಎಚ್‌.ಡಿ.ದೇವೇಗೌಡರ ಎಮೋಷನಲ್‌ ಟ್ರ್ಯಾಪ್‌ ಅನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ಬಳಸಿಕೊಂಡು ನಮ್ಮ ಗೌರವ ಹಾಳು ಮಾಡಿದರು ಎಂದು ಸಿದ್ದರಾಮಯ್ಯರ ವಿರುದ್ಧ ವಾಗ್ಧಾಳಿ ನಡೆಸಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆಲ್ಲುವುದಕ್ಕೆ ಸಿದ್ದರಾಮಯ್ಯ® ‌ವರೇ ಕಾರಣ. ಅವರೇ ಬಿಜೆಪಿಗೆ 105ಸ್ಥಾನ ಗಿಫ್ಟ್ ಕೊಟ್ಟರು. ನಾನೇನು ಯಡಿಯೂರಪ್ಪ ಅವರನ್ನು ಕದ್ದುಮುಚ್ಚಿ ಭೇಟಿಮಾಡಿಲ್ಲ. ಎಲ್ಲರೆದುರು ಕೃಷ್ಣಕ್ಕೆ ಹೋಗಿದ್ದೆ. ಆದರೆ, ರಾತ್ರಿ ಹೊತ್ತು ಕದ್ದು ಮುಚ್ಚಿ ಹೋಗೋದು ಯಾರು ಎಂಬುದು ನನಗೆ ತಿಳಿದಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಕೇಂದ್ರ ಬಿಜೆಪಿ ನಾಯಕರ ಸಂಪರ್ಕದ ಬಗ್ಗೆ ಸುಳಿವು ನೀಡಿ, ಸಿಎಂ ಯಡಿಯೂರಪ್ಪ ಬದಲಾಗುತ್ತಾರೆ ಎನ್ನುವ ಸಿದ್ದರಾಮಯ್ಯನವರಿಗೆ ಅವರು ರಾತ್ರಿಹೊತ್ತು ಭೇಟಿ ಮಾಡುವವರೇ ಮಾಹಿತಿ ಕೊಡುತ್ತಿದ್ದಾರೆ ಎಂದರು.

ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ರೂಪಿಸಬೇಕೆಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ರಾವ್‌ ಅವರು ದೂರವಾಣಿ ಮೂಲಕ ಸಮಾಲೋಚಿಸಿದ್ದಾರೆ. ಶೀಘ್ರದಲ್ಲೇ ಸಭೆ ಕರೆಯಲು ಹೇಳಿದ್ದು, ನಾನು ಭಾಗವಹಿಸುತ್ತೇನೆ. ಸದ್ಯಕ್ಕೆ ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳು ನಿಲ್ಲಬಲ್ಲವು ಎಂಬ ವಿಶ್ವಾಸವಿದೆ ಎಂದರು.

ಬಿಜೆಪಿ ಜತೆ ಸಾಫ್ಟ್ ಕಾರ್ನರ್‌ ಇಲ್ಲ: ಬಿಜೆಪಿ ಸರ್ಕಾರದ ವಿರುದ್ಧ ಮೃದುಧೋರಣೆ ಇಲ್ಲ. ರಾಜ್ಯಸರ್ಕಾರ ಮಾಡುವ ಒಳ್ಳೆಯ ಕೆಲಸಕ್ಕೆ ನಮ್ಮ ಸಹಕಾರ ಇರುತ್ತದೆ ಎಂದು ಎಚ್ಡಿಕೆ ಹೇಳಿದರು.

Advertisement

ಕುಮಾರಸ್ವಾಮಿ ಹೇಳಿಕೆ ಮುಗಿದ ಅಧ್ಯಾಯ
ಬೆಳಗಾವಿ: ಎಚ್‌.ಡಿ.ಕುಮಾರಸ್ವಾಮಿ ಅವರ ಕಾಂಗ್ರೆಸ್‌ ಬಗೆಗಿನ ಹೇಳಿಕೆ ಮುಗಿದ ಅಧ್ಯಾಯ. ಜೆಡಿಎಸ್‌-ಬಿಜೆಪಿ ಎಂಬ ಪ್ರಶ್ನೆಯಿಲ್ಲ. ಎಲ್ಲವೂ ಮುಗಿದು ಹೋಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಕಾರಣಗಳಿಂದ ಅದೆಲ್ಲವೂ ಮುಗಿದು ಹೋಗಿದೆ. ಈಗ ಚರ್ಚೆ ಮಾಡಲು ಆಗಲ್ಲ. ಕಾಂಗ್ರೆಸ್‌ನಿಂದ ದ್ರೋಹ ಆಗಿದೆ ಎನ್ನುವುದಕ್ಕೆ ನಮ್ಮಲ್ಲಿ ಸತ್ಯಶೋಧನೆ ಕಮಿಟಿ ನೇಮಿಸಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಅವಿವೇಕಿತನ-ವೈಯಕ್ತಿಕ ಹೇಳಿಕೆಗೆ ಪ್ರತಿಕ್ರಿಯಿಸಲ್ಲ
ಬೆಳಗಾವಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅವಿವೇಕಿತನ ಹಾಗೂ ವೈಯಕ್ತಿಕ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದರು. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ನಾಯಕರ ವಿಚಾರ-ಚಿಂತನೆಗಳ ಬಗ್ಗೆ ನಾನು ಹೇಳಿಕೆ ನೀಡಲ್ಲ. ಪಕ್ಷ ಒಟ್ಟಾಗಿ ಸೇರಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಎಚ್ಡಿಕೆ ಸಿಎಂ ಮಾಡಿದ್ದೇ ತಪ್ಪಾಯ್ತಾ
ಬೆಳಗಾವಿ: ಎಚ್‌.ಡಿ. ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ಸಮಯಕ್ಕೆ ತಕ್ಕಂತೆ ಅವರು ಸುಳ್ಳು ಹೇಳುತ್ತಾರೆ. ಕಣ್ಣೀರು ಸುರಿಸೋದು ದೇವೇಗೌಡ ಮನೆಯವರ ಸಂಸ್ಕೃತಿ. ಓಲೈಕೆಗೋ ಅಥವಾ ಬೇರೆ ಯಾರನ್ನೋ ನಂಬಿಸಲು ಕಣ್ಣೀರು ಹಾಕುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಯಾರನ್ನೂ ಬೆಳೆಸಲ್ಲ. ಅವರ ಕುಟುಂಬಸ್ಥರನ್ನು ಬೆಳೆಸುತ್ತಾರೆ ಎಂದು ಟೀಕಿಸಿದರು. ಪ್ರೀ ಪ್ಲ್ಯಾನ್‌ ಮಾಡಿ ಸಿದ್ದರಾಮಯ್ಯ ನನ್ನ ಹೆಸರು ಹಾಳು ಮಾಡಿದ್ದರು’ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜಕೀಯದಿಂದಲೇ ಕುಮಾರಸ್ವಾಮಿ ಹೊರಟು ಹೋಗಿದ್ದಾರಾ, ಅವರಿಗೆ ಗುಡ್‌ ವಿಲ್‌ ಇದ್ದರೆ ಹಾಳಾಗೋದು ಅಲ್ವಾ, ಗುಡ್‌ ವಿಲ್‌ ಇಲ್ಲ ಎಂದರೆ ಹಾಳಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಶಾಸಕರಿಗೆ 1900 ಕೋಟಿ ರೂ. ಹಣ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ತಮ್ಮ ಮನೆಯಿಂದ ಈ ಹಣ ತಂದು ಕೊಟ್ಟಿದ್ದಾರಾ? ಜನರ ತೆರಿಗೆ ಹಣವನ್ನು ಅನುದಾನ ರೂಪದಲ್ಲಿ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಕೊನೆಗೂ ಸತ್ಯ ಹೇಳಿದ್ದಾರೆ
ಬೆಳಗಾವಿ: ಸರಕಾರದ ಪತನದ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕೊನೆಗೂ ಸತ್ಯ ಹೇಳಿದ್ದಾರೆಂದು ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶ್ಲೇಷಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಬಹಳ ದ್ರೋಹವಾಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಅವರಿಗೆ ಈಗ ಸತ್ಯದ ಅರಿವಾಗಿದೆ. ಹೀಗಾಗಿ ಸತ್ಯ ಸಂಗತಿಗಳನ್ನು ಅವರದೇ ಆದ ಭಾಷೆಯಲ್ಲಿ ಹೇಳಿದ್ದಾರೆ ಎಂದರು.

“ಬಿಜೆಪಿ ಜತೆ ಹೋದರೆ ಸಿದ್ಧಾಂತ ಬದಲಿಸಿದಂತೆ’
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ಕೋಮುವಾದದ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದು, ಅವರು ಬಿಜೆಪಿಗೆ ಹೋದರೆ ತಮ್ಮ ಸಿದ್ಧಾಂತವನ್ನೇ ಬದಲಿಸಿದಂತೆ ಆಗುತ್ತದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್‌ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇತ್ತೀಚೆಗೆ ಬಿಜೆಪಿ ಸರ್ಕಾರ ಪರ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೆಚ್ಚು ಒಲವು ತೋರುತ್ತಿದ್ದು, ಕಾಂಗ್ರೆಸ್‌ ವಿರುದ್ಧವೇ ಹೆಚ್ಚು ಮಾತ ನಾಡುತ್ತಿದ್ದಾರೆ. ಕಾಂಗ್ರೆಸ್‌ ಜೆಡಿಎಸ್‌ಗೆ ಮೋಸ ಮಾಡಲಿಲ್ಲ ಎಂದರು.

ಕುಮಾರಸ್ವಾಮಿಗೆ ಈಗ ಜ್ಞಾನೋದಯವಾಗಿದೆ. ಕುಮಾರಸ್ವಾಮಿ ಅವರು ಇನ್ನು ಮೇಲಾದರೂ ಕಾಂಗ್ರೆಸ್‌ ಜತೆ ಸಹವಾಸ ಮಾಡುವು ದನ್ನು ಬಿಡಬೇಕು. ಚಂಚಲ ಮನಸ್ಸಿನ ನಿಲುವಿಂದ ದೂರ ಸರಿಯಬೇಕು.
ಸಿ.ಟಿ. ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ನಾವು ಅತಿ ಹೆಚ್ಚು ಸ್ಥಾನ ಹೊಂದಿ ಬಹುಸಂಖ್ಯಾತರಾಗಿದ್ದರೂ ಜೆಡಿಎಸ್‌ಗೆ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೆವು. ಅವರ ಅಸಮರ್ಥತನ ವೇ ಸಮ್ಮಿಶ್ರ ಸರ್ಕಾರ ಬೀಳಲು ಕಾರಣ ವಾಯ್ತು. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ. ಎಸ್‌.ಆರ್‌. ಪಾಟೀಲ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರಕಾರ ಬಿಜೆಪಿಯಿಂದ ಪತನವಾಗಿಲ್ಲ. ಬದಲಾಗಿ ಸಿದ್ದರಾಮಯ್ಯ ಅವರಿಂದ ಸರಕಾರ ಬಿದ್ದಿದೆ ಎಂಬ ಸತ್ಯ ಸಂಗತಿ ಈಗ ಹೊರ ಬಿದ್ದಿದೆ. ಕುಮಾರಸ್ವಾಮಿ ಅವರಿಗೆ ಈಗಲಾದರೂ ಸತ್ಯದ ಅರಿವಾಗಿದೆ. ಕಾಂಗ್ರೆಸ್‌ ಸಹವಾಸ ಮಾಡಿದವರಿಗೆ ವನವಾಸ ಕಟ್ಟಿಟ್ಟ ಬುತ್ತಿ.
ಆರ್‌.ಅಶೋಕ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next