Advertisement

ಶಿಸ್ತು ಮೀರಿದರೆ ಮಗ,ಮೊಮ್ಮಗ ಇಬ್ಬರೂ ಒಂದೇ: ದೇವೇಗೌಡ

03:50 AM Jul 08, 2017 | Team Udayavani |

ಬೆಂಗಳೂರು: ಸೂಟ್‌ಕೇಸ್‌ ತಂದವರಿಗೆ ಜೆಡಿಎಸ್‌ನಲ್ಲಿ ಮುಂದಿನ ಸಾಲಿನಲ್ಲಿ ಕುಳ್ಳಿರಿಸುತ್ತಾರೆ ಎಂಬ ಪ್ರಜ್ವಲ್‌ ರೇವಣ್ಣ
ಹೇಳಿಕೆ ಪಕ್ಷದಲ್ಲಿ ಸಂಚಲನ ಮೂಡಿಸಿದ್ದು, “ಡ್ಯಾಮೇಜ್‌’ ಕಂಟ್ರೋಲ್‌ಗೆ ಖುದ್ದು ಮಾಜಿ ಪ್ರಧಾನಿ ದೇವೇಗೌಡರು
ಮುಂದಾಗಿದ್ದಾರೆ.

Advertisement

ಪಕ್ಷದಲ್ಲಿ ಶಿಸ್ತು ಮುಖ್ಯ, ಮಗನಾಗಲಿ, ಮೊಮ್ಮಗನಾಗಲಿ ಎಲ್ಲರಿಗೂ ಒಂದೇ ನಿಯಮ ಅನ್ವಯ. ಎಲ್ಲೆ ಮೀರಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ತಪ್ಪು ಮಾಡಿದಾಗ ಪಕ್ಷದ ವರಿಷ್ಠನಾಗಿ ಕ್ರಮ ಕೈಗೊಳ್ಳದಿದ್ದರೆ ಬೇರೆ ಸಂದೇಶ ಹೋಗುತ್ತದೆ” ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಮಾತುಗಳು ನನಗೆ ನೋವು ತಂದಿದೆ. ನಾನೇ ಸಹಿಸಲು ಸಾಧ್ಯ ವಿಲ್ಲ. ನನ್ನ ಜೀವನದಲ್ಲಿ
ಎಂದೂ ಸೂಟ್‌ಕೇಸ್‌ ರಾಜಕಾರಣ ಮಾಡಿದವನಲ್ಲ. ಬಡ್ಡಿಗೆ ಹಣ ತಂದು ಚುನಾವಣೆ ನಡೆಸಿದ್ದೇನೆ’ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪದ್ಮನಾಭನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,”ಪ್ರಜ್ವಲ್‌ ರೇವಣ್ಣ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅವರ ತಂದೆ ರೇವಣ್ಣ ಅವರೇ ಹೇಳಿದ್ದಾರೆ. ಪ್ರಜ್ವಲ್‌ ಇನ್ನೂ ಹುಡುಗ, ರಾಜಕೀಯದಲ್ಲಿ ಬೆಳೆಯುವ ಆಸೆ ಹೊಂದಿದ್ದಾನೆ. ಆದರೆ, ಇಂತಹ ಹೇಳಿಕೆಗಳು ಆತನ ಏಳಿಗೆಗೆ ಮಾರಕವಾಗುತ್ತವೆ. ಆತನ ಸುತ್ತ ಓಡಾಡಿಕೊಂಡಿರುವವರು ಸರಿ ಯಿಲ್ಲ,ಅವರ ಉದ್ದೇಶವೇ ಬೇರೆ ಇದೆ. ನಾನು ಇಂಥದ್ದೆಲ್ಲಾ ಸಾಕಷ್ಟು ನೋಡಿದ್ದೇನೆ ಎಂದರು.

ಪ್ರಜ್ವಲ್‌ಗೆ ಮೊದಲು ಬೇಲೂರಿನಿಂದ ಸ್ಪರ್ಧೆ ಮಾಡುವ ಆಸೆಯಿತ್ತು. ಆಗಲ್ಲ ಎಂದ ಮೇಲೆ ಹುಣಸೂರಿಗೆ ಹೋಗಿದ್ದಾನೆ ಅಷ್ಟೆ. ಕೆಲವರು ಅವನನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಏನೋ ಕೆಟ್ಟ ಘಳಿಗೆ” ಎಂದು ಹೇಳಿದರು. “”ರಾಜಕೀಯ ಮಕ್ಕಳ ಆಟವಲ್ಲ. ಒಂದು ಕ್ಷೇತ್ರ ಆಯ್ಕೆ ಮಾಡೋದು ಎಷ್ಟು ಕಷ್ಟ ಅಂತ ಗೊತ್ತಿದೆ. ಹೇಳಿದೋರಿಗೆಲ್ಲಾ ಕೇಳಿದ್‌ ಕಡೆ ಟಿಕೆಟ್‌ ಕೊಡೋಕ್ಕೆ ಆಗುತ್ತಾ? ಆವೇಶದ ಮಾತುಗಳಿಂದ ಏನೂ ಆಗಲ್ಲ. ಅಂತಿಮವಾಗಿ ಪಕ್ಷ ಉಳಿಯೋದು ಮತ್ತುಅಧಿಕಾರಕ್ಕೆ ತರೋದು ನನ್ನ ಉದ್ದೇಶ. ಪಕ್ಷದಿಂದ ಕುಟುಂಬ ಒಡೆಯೋಕೆ ಬಿಡಲ್ಲ” ಎಂದು ತಿಳಿಸಿದರು.

Advertisement

ಅನಿತಾಗೆ ಬುದ್ಧಿ ಹೇಳ್ತೀನಿ
ಚುನಾವಣೆಗೆ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ಇಬ್ಬರೂ ಸ್ಪರ್ಧಿಸಬಹುದು. ನಮ್ಮ ಕುಟುಂಬದಿಂದ ಬೇರೆ ಹೆಣ್ಣು ಮಕ್ಕಳು ಯಾರೂ ರಾಜಕೀಯಕ್ಕೆ ಬರುವುದಿಲ್ಲ” ಎಂದು ಹೇಳಿದ ದೇವೇಗೌಡರು ಅದರ ಜತೆಗೆ “”ಅನಿತಾ ಕುಮಾರಸ್ವಾಮಿಗೆ ಸ್ಪರ್ಧೆ ಮಾಡಿ ಅಂತ ಸಹಜವಾಗಿ ಆಗ್ರಹ ಮಾಡ್ತಾರೆ. ಹಾಗೆಂದ ಮಾತ್ರಕ್ಕೆ ಸ್ಪರ್ಧೆ ಮಾಡೋಕೆ ಆಗುತ್ತಾ? ಅನಿತಾ ಅವರು ಚೆನ್ನಪಟ್ಟಣಕ್ಕೆ ಹೋದ್ರೆ ರಾಮನಗರದ ಜವಾಬ್ದಾರಿ ಯಾರು ನೋಡಿಕೊಳ್ತಾರೆ. ಕುಮಾರಸ್ವಾಮಿ ಗೆಲುವಿಗೆ ಮೊದಲು ಸಹಾಯ ಮಾಡಬೇಕು. ಈ ವಿಚಾರವಾಗಿ ಅನಿತಾಗೂ ತಿಳಿವಳಿಕೆ ಹೇಳ್ತೀನಿ” ಎಂದರು. “”ನನಗೆ ಲೋಕಸಭೆಗೆ ನಿಲ್ಲೋಕೆ ಶಕ್ತಿ ಇಲ್ಲ. ಆರೋಗ್ಯವೂ ಇಲ್ಲ, ಅಲ್ಲಿ ಅಭ್ಯರ್ಥಿಗಳು ಬೇರೆ ಯಾರೂ ಇಲ್ಲ ಹೀಗಾಗಿ, ಅಲ್ಲಿ ನಿಲ್ಲೋರು ಯಾರು ಎಂಬ ಪ್ರಶ್ನೆಯೂ ಇದೆ” ಎಂದು ಪರೋಕ್ಷವಾಗಿ ಪ್ರಜ್ವಲ್‌ ಲೋಕಸಭೆಗೆ ಸ್ಪರ್ಧೆ ಮಾಡಲಿ ಎಂಬ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next