Advertisement

ಶುರುವಾದರೆ ದೇಸೀಮಾಲ್‌, ಆಗುತ್ತದೆ ಕಮಾಲ್‌ !

02:22 PM Oct 09, 2017 | |

ಇತ್ತೀಚೆಗೆ ಕೇಳಿಬರುತ್ತಿರುವ ‘ಮಾಲ್‌ಗ‌ಳ ಪ್ರವಾಹಕ್ಕೆ ಸಾಂಪ್ರದಾಯಿಕ ಕಿರಾಣಿ ಅಂಗಡಿಗಳು ಬಲಿಯಾಗುತ್ತಿವೆ’ ಎಂಬ ಆರೋಪದ ಹಿಂದೆ ಒಂದು ಸೋಮಾರಿ ಮನಸ್ಸಿದೆ. ಭಾರತೀಯ ಮನಸ್ಸೇ ಹಾಗೆ, ನಾವು ಹೊಸದನ್ನು ಒಮ್ಮೆಗೇ ಒಪ್ಪಲಾರೆವು. ಸಣ್ಣ ಪುಟ್ಟ ಅಂಗಡಿಗಳು ಸೂಪರ್‌ ಮಾರ್ಕೆಟ್‌, ಮಾಲ್‌, ಫೋರಂಗಳ ಆರ್ಭಟಕ್ಕೆ ಸೋಲುವ ಲಕ್ಷಣಗಳನ್ನು ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ ಎಂಬುದು ಮೇಲ್ನೋಟಕ್ಕೆ ಸತ್ಯವೆನಿಸಿದರೂ, ಇದರ ಅನಿವಾರ್ಯತೆ ಏನೆಂಬುದನ್ನು ಮನಗಾಣಲು ಪ್ರಯತ್ನಿಸಿದ್ದೇವೆಯೇ? 

Advertisement

ಇಂದು ಭಾರತದ ಚಿಲ್ಲರೆ ವ್ಯಾಪಾರ ಉದ್ಯಮದ ವಾರ್ಷಿಕ ವಹಿವಾಟು ಅಂದಾಜು 400 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಳು. ಅಂದರೆ ಸರಿ ಸುಮಾರು 24,15,600 ಕೋಟಿ ರೂಪಾಯಿಗಳು! ನಿಜ, ಈ ರೀಟೈಲ್‌ ಪ್ರಪಂಚದಲ್ಲಿ, ಅದೂ ಭಾರತದಲ್ಲಿ ಅದ್ಭುತ ಅವಕಾಶಗಳಿವೆ ಎಂದು ಬಹುರಾಷ್ಟ್ರೀಯ ಕಂಪನಿಗಳು ಆಸೆಯಿಂದ ನೋಡುವುದು ಸಹಜ. ಪ್ರಗತಿ ಪಥದಲ್ಲಿರುವ 30 ದೇಶಗಳ ಪೈಕಿ, ಬಂಡವಾಳ ಹೂಡಲು ಸೂಕ್ತವಾದ ದೇಶಗಳಲ್ಲಿ ಭಾರತಕ್ಕೆ ಅಗ್ರಸ್ಥಾನ ಎಂಬುದನ್ನು ಕಳೆದ 10 ವರ್ಷಗಳಿಂದ ಪದೇ ಪದೇ ಹೇಳಿಕೊಂಡು ಬರ‌ಲಾಗುತ್ತಿದೆ.  ವರದಿಯೊಂದರ ಪ್ರಕಾರ, ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರದ ವಹಿವಾಟು 2010ರಲ್ಲಿ 353 ಬಿಲಿಯನ್‌ ಡಾಲರ್‌(21,38,827 ಕೋಟಿ ರೂಪಾಯಿಗಳು) ಇದ್ದದ್ದು 2014ರಲ್ಲಿ ಶೇ.11.4 ಬೆಳವಣಿಗೆ ಕಂಡು 543.2 ಬಿಲಿಯನ್‌ ಅಮೆರಿಕನ್‌ ಡಾಲರ್‌(32,91,248 ಕೋಟಿ ರೂಪಾಯಿ)ಗೆ ವೃದ್ಧಿಸಿದೆ.

ಕಳೆದ 10 ವರ್ಷಗಳಲ್ಲಿ ಈ ವಲಯದಲ್ಲಿ 194.69 ಮಿಲಿಯನ್‌ ಡಾಲರ್‌ಗಳ ನೇರ ವಿದೇಶಿ ಬಂಡವಾಳವನ್ನು ಹೂಡಲಾಗಿದೆ. ಇದು ಭಾರತದ ಮಾರುಕಟ್ಟೆ ಲೆಕ್ಕದಲ್ಲಿ ಏನೇನೂ ಅಲ್ಲ. ವಹಿವಾಟಿನ 353 ಬಿಲಿಯನ್‌ನಲ್ಲಿ, 2010ರಲ್ಲಿ ಮಾಲ್‌ಗ‌ಳ ಪಾಲು 15.29 ಬಿಲಿಯನ್‌ ಮಾತ್ರ. ಇದನ್ನು 2014ರ ವೇಳೆಗೆ ಶೇ. 154ರಷ್ಟು ಬೆಳೆಸುವ ಗುರಿಯನ್ನು ಬೃಹತ್‌ ಕಂಪನಿಗಳು ಹೊಂದಿವೆ. ಒಂದಂತೂ ನಿಜ, ಮಾಲ್‌ ಸಂಸ್ಕೃತಿಯನ್ನು ವಿರೋಧಿಸುವ, ನಿಷೇಧಿಸುವ ಕಾಲಘಟ್ಟವನ್ನು ನಾವು ಮೀರಿದ್ದೇವೆ. ಇದು ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರಚೋದಿಸುತ್ತದೆ. ಇದರಿಂದ ನಾನು ದೂರ ಇರುತ್ತೇನೆ ಎಂಬ ಪ್ರತಿಪಾದನೆ ಕೂಡ ಶುದ್ಧ ಚೋದ್ಯದಂತೆ ಕಾಣುತ್ತದೆ.

ಸೂಪರ್‌ ಮಾರ್ಕೆಟ್‌ ಇಂದಿನ ಅನಿವಾರ್ಯ
ವಿವಿಧ ಉತ್ಪನ್ನಗಳನ್ನು ಒಂದೇ ಕಡೆ ಮಾರಾಟಕ್ಕಿಡುವ ಮಾಲ್‌ ಸಂಸ್ಕೃತಿಯಲ್ಲಿ ಗ್ರಾಹಕರನ್ನು ಸುಲಭವಾಗಿ ಆಕರ್ಷಿಸಬಹುದು ಎಂಬುದು ನಾಣ್ಯದ ಒಂದು ಮುಖ ಮಾತ್ರ. ಅತ್ಯುತ್ತಮ ವಾತಾವರಣ, ಗರಿಷ್ಠ ಆಯ್ಕೆಗಳು ಮತ್ತು ಸಂದಭೋìಚಿತ ಕೊಡುಗೆ, ರಿಯಾಯಿತಿಗಳು ಮತ್ತೂಮ್ಮೆ ಗ್ರಾಹಕನನ್ನು ದೊರೆ ಎಂದಂತಾಗುವುದನ್ನು ನಾವೇಕೆ ಮರೆಯುತ್ತೇವೆ? ಗ್ರಾಹಕ ಸೇವೆಯ ಹೆಚ್ಚು ಮಗ್ಗುಲುಗಳನ್ನು ಭಾರತೀಯರಿಗೆ ಪರಿಚಯಿಸುವುದರಲ್ಲಿ ಮಾಲ್‌ ಸಂಸ್ಕೃತಿ ಹಾಗೂ ಆನ್‌ಲೈನ್‌ ವ್ಯಾಪಾರದ್ದು ದೊಡ್ಡ ಪಾತ್ರವಿದೆ. ಆಯ್ಕೆ, ಬೆಲೆ ಮತ್ತು ಖರೀದಿ ನಂತರದ ಗ್ರಾಹಕ ಸೇವೆ ಸುಧಾರಿಸಿದ್ದು ಈ ಮಾದರಿಗಳ ಪ್ರವೇಶದ ನಂತರ. 

ಎರಡು ವಾಸ್ತವಗಳನ್ನು ನಾವು ಗಮನಿಸಲೇಬೇಕು. ಮೈಸೂರು, ಬೆಂಗಳೂರು, ಮಂಗಳೂರು ಥರಹದ ದೊಡ್ಡ ನಗರಗಳಂತೆಯೇ ಸಾಗರ, ಮಡಿಕೇರಿ, ಪುತ್ತೂರು ಥರಹದ ಸಣ್ಣ ನಗರಗಳಲ್ಲಿಯೂ ವಾಹನ ಸಂದಣಿ ತೀವ್ರವಾಗಿ ಬೆಳೆಯುತ್ತಿದೆ. ತಾಲೂಕು ಕೇಂದ್ರ, ಹೋಬಳಿಗಳು ಕೂಡ ವಾಹನಸಂದಣಿ ಕಾಣುತ್ತಿವೆ. ಜನರ ಕೊಳ್ಳುವ ಶಕ್ತಿ ಜಾಸ್ತಿಯಾಗುತ್ತಿರುವುದರ ದ್ಯೋತಕವಾಗಿ ಮನೆಮನೆಗಳಲ್ಲೂ ಕಾರುಗಳು, ಒಂದಕ್ಕಿಂತ ಹೆಚ್ಚು ದ್ವಿಚಕ್ರವಾಹನಗಳು ಕಾಣಿಸಿಕೊಂಡಿವೆ. ಇದರ ನೇರ ಪರಿಣಾಮ ನಮ್ಮಲ್ಲಿನ ರಸ್ತೆ, ತಂಗು ವ್ಯವಸ್ಥೆಗಳ ಮೇಲಾಗಿದೆ. ವಾಹನ ನಿಲ್ಲಿಸಲು ಜಾಗವಿಲ್ಲ!

Advertisement

ಈ ಕಾರಣದಿಂದ ನಾವು ಪಟ್ಟಣದ ಹತ್ತುಹಲವು ಅಂಗಡಿಗಳ ಮುಂದೆ ವಾಹನ ನಿಲ್ಲಿಸಿ ಖರೀದಿ ನಡೆಸುವುದು ಕಷ್ಟ ಹಾಗೂ ಇತರರಿಗೆ ಸಮಸ್ಯೆ ಉಂಟುಮಾಡುವ ಸಂಗತಿ. ಈ ಕಾರಣಕ್ಕಾಗಿಯಾದರೂ ಒಂದೇ ಕಡೆ ಗೃಹೋಪಯೋಗಿ ವಸ್ತುಗಳು ಒಂದೆಡೆ ಸಿಗುವಂತಹ ಮಾಲ್‌ಗ‌ಳು ಬೇಕೇ ಬೇಕು. ದೇಶಿ ಕಂಪನಿಗಳಿಗೆ ಭಾರತೀಯನ ಕೊಳ್ಳುವ ಶಕ್ತಿ ಆಕರ್ಷಣೀಯವಾಗುತ್ತದಾದರೆ, ಅದನ್ನು ಅವರು ನಗದು ಮಾಡಿಕೊಳ್ಳಲು ಬಯಸುತ್ತಾರಾದರೆ, ಅದರ ವಿರುದ್ಧ ಭಾರತೀಯ “ಸಹಕಾರ’ ವ್ಯವಸ್ಥೆ ಪ್ರಭಾವಯುತವಾಗಿ ಪರ್ಯಾಯವನ್ನು ಸೃಷ್ಟಿಸಬಾರದೇಕೆ? ಈ ಪ್ರಶ್ನೆಯನ್ನು ನಾವು ಹಾಕಿಕೊಳ್ಳುವುದರ ಜೊತೆಗೆ ಪ್ರತಿ ನಗರದಲ್ಲಿ, ಕೊನೆಪಕ್ಷ ತಾಲೂಕಿನ ಮುಖ್ಯ ಕೇಂದ್ರಗಳಲ್ಲಿ ಸಹಕಾರ ತತ್ವದಡಿ ನಾವೇ ಮಾಲ್‌ಗ‌ಳನ್ನು ಆರಂಭಿಸಬಹುದು. ದೇಶಿ ಕಂಪನಿಗಳ ಮಾಲ್‌ಗ‌ಳು ಮಾರುಕಟ್ಟೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸುವ ಮುನ್ನವೇ ಇಂತಹ ಪ್ರಯತ್ನಗಳು ಗಟ್ಟಿಯಾಗಬೇಕು.

ಈ ವಿದ್ಯಮಾನ ಸಾಗರ ಸೇರಿದಂತೆ ಈಗಾಗಲೇ ಹಲವೆಡೆ ನಡೆದಿದೆ. ಮುಖ್ಯವಾಗಿ, ಕೃಷಿ ಪತ್ತಿನ ಸಹಕಾರ ಸಂಘಗಳು ಇಂತಹ ಮಾಲ್‌ಗ‌ಳನ್ನು ರಾಜಾದ್ಯಂತ, ದೇಶಾದ್ಯಂತ ಹುಟ್ಟುಹಾಕಬಹುದು. ಒಂದು ಸಹಕಾರಿ ವ್ಯಾಪಾರೀ ಜಾಲವನ್ನು ಹೊಂದಿದರೆ ದೇಶಿ ಮಾಲ್‌ಗ‌ಳಿಗೆ ಪ್ರಭಾವಶಾಲಿ ಉತ್ತರವಾಗಬಹುದು. ಸೌಹಾರ್ದ ಕಾಯ್ದೆಯಡಿ ನೋಂದಣಿಯಾದ ಸಂಸ್ಥೆಗಳಂತೂ ಅತ್ಯಂತ ಸುಲಲಿತವಾಗಿ ಈ ಮಾಲ್‌ಗ‌ಳ ಗೊಂಚಲನ್ನೇ ಸೃಷ್ಟಿಸಬಹುದು.

ಸಹಕಾರಿ ತತ್ವದ ಸೂಪರ್‌ ಮಾರ್ಕೆಟ್‌!
ಇದಕ್ಕೆ ಬಹುರಾಷ್ಟ್ರೀಯ ಕಂಪನಿಗಳೇ ಬೇಕಾಗಿಲ್ಲ. ನಾವೇ ಇದನ್ನು ಹುಟ್ಟುಹಾಕಬಹುದು. ಕಿರಾಣಿ ಅಂಗಡಿಗಳನ್ನು ಇವು ನುಂಗಿಹಾಕುವುದಿಲ್ಲ. ಕಾಲದ ಹಾದಿಯಲ್ಲಿ ಹಿಂದಿನ ಕೆಲವಾದರೂ ಹೆಜ್ಜೆ ಗುರುತುಗಳು ಮಾಯವಾಗುವುದು ಸಹಜ. ಆದರೆ ಸಹಕಾರಿ ತತ್ವದ ಸೂಪರ್‌ ಮಾರ್ಕೆಟ್‌ಗಳು ಪ್ರತಿ ಊರಲ್ಲಿ ಸ್ಥಾಪನೆಗೊಳ್ಳಬೇಕು. ಒಂದೂರಲ್ಲಿ ಒಂದಕ್ಕಿಂತ ಹೆಚ್ಚು ಹುಟ್ಟಿಕೊಂಡರೆ ನೋ ಪ್ರಾಬ್ಲಿಮ್‌!

ಸುಮ್ಮನೆ ಅಂತಜಾìಲದಲ್ಲಿ ಸಹಕಾರಿ ಸೂಪರ್‌ ಮಾರ್ಕೆಟ್‌ಗಳ ಕುರಿತು ಸಫ್ì ಮಾಡಿದರೆ ದೊಡ್ಡಣ್ಣ ಅಮೆರಿಕಾ ಕಾಣಿಸುವುದಿಲ್ಲ. ಆದರೆ ಎಲ್ಲರಿಗಿಂತ ಮೊದಲು ಇಂಗ್ಲೆಂಡ್‌ನ‌ಲ್ಲಿ ಕೋ ಅಪರೇಟಿವ್‌ ಸೂಪರ್‌ ಫ‌ುಡ್‌ ಮಾರ್ಕೆಟ್‌ಗಳು 1950ರ ದಶಕದಲ್ಲಿಯೇ ಚಾಲ್ತಿಯಲ್ಲಿದ್ದುದು ಕಂಡುಬರುತ್ತದೆ. ಆಗ ಈ ವ್ಯವಸ್ಥೆ ಆಹಾರ ಮಾರುಕಟ್ಟೆಯ ಶೇ. 30ರಷ್ಟು ಪಾಲನ್ನು ತಮ್ಮದಾಗಿಸಿಕೊಂಡಿತ್ತು. 

ಬಹುರಾಷ್ಟ್ರೀಯ ಕಂಪನಿಗಳ ಹೊಡೆತ ಇಂಗ್ಲೆಂಡ್‌ನ‌ಲ್ಲೂ ಆಗಿದ್ದನ್ನು ಕಾಣಬಹುದು. ಸಹಕಾರಿಗಳ ಮಾರುಕಟ್ಟೆ ಪಾಲು ಏಕಾಏಕಿ ಈಗ ಶೇ. 6.4ಕ್ಕೆ ಇಳಿದಿದೆ. ಕಾಲಾಯ ತಸೆ„ ನಮಃ! ಇಂದಿಗೂ ಅಲ್ಲಿ ಸಹಕಾರಿ ಆಹಾರ ಬಿಡಿ ವ್ಯವಸ್ಥೆ 5ನೇ ಮುಖ್ಯ ಸ್ಥಾನದಲ್ಲಿದೆ. 3,300 ರೀಟೇಲ್‌ ಅಂಗಡಿಗಳು ದೇಶದುದ್ದಕ್ಕೂ ಹಬ್ಬಿಕೊಂಡಿದೆ. ಮುಖ್ಯವಾಗಿ ಎಂಎನ್‌ಸಿಗಳ ವ್ಯವಹಾರಕ್ಕೆ ಇವು ಮೂಗುದಾರ ಹಾಕಿವೆ. 

ಚಳವಳಿಗಳನ್ನು  ಹೀಗೂ ಮಾಡಬಹುದು!
ಅಧಿಕಾರದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಮಾಡುವುದೇ ಹೋರಾಟ, ಆಂದೋಲನವಾಗಬೇಕಿಲ್ಲ. ಒಂದರ್ಥದಲ್ಲಿ, ಮೌನ ಚಳವಳಿಯ ರೂಪದಲ್ಲಿ ಸಹಕಾರಿ ನೀತಿಯಡಿಯ ಸೂಪರ್‌ ಮಾರ್ಕೆಟ್‌ಗಳ ಸ್ಥಾಪನೆ ಇಡೀ ವ್ಯವಸ್ಥೆಯನ್ನು ಬದಲಿಸಬಹುದಾದ ಪ್ರಭಾವಶಾಲಿ ಚಳವಳಿ. ನಮಗಿದು ಮನನವಾಗಬೇಕಾಗಿದೆ.

ಇಂಗ್ಲೆಂಡಿನ ಹೊರಗೆ ನಮಗೆ ಇಂಥ ಚಳವಳಿ ಕಾಣುವುದು ತುಂಬಾ ವಿರಳ. ಅತಿ ಹೆಚ್ಚು ಜನರನ್ನು ಹೊಂದಿರುವ, ಕೊಳ್ಳುವ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿರುವ ಮತ್ತು ಕೊಳ್ಳುಬಾಕ ಸಂಸ್ಕೃತಿಗೆ ಬೇಗನೆ ಮಾರುಹೋಗುತ್ತಾರೆ ಎಂದು ಭಾವಿಸಲಾಗಿರುವ ಭಾರತೀಯರನ್ನು ಗುರಿಯಾಗಿಸಿಕೊಂಡು ಮಲ್ಟಿ ನ್ಯಾಷನಲ್‌ ಕಂಪನಿಗಳು ಸೂಪರ್‌ ಮಾರ್ಕೆಟ್‌ ಉದ್ಯಮದತ್ತ ದಾಪುಗಾಲಿಡುತ್ತಿವೆ. 

ಈ ಹಂತದಲ್ಲಿ ವಿವಿದೆಡೆ ಸಹಕಾರಿ ತತ್ವದ ಸೂಪರ್‌ ಮಾರ್ಕೆಟ್‌ಗಳು ದಿಟ್ಟ ಉತ್ತರ ಕೊಡುತ್ತಿವೆ. ಆದರೆ ಇದೆಲ್ಲ ಬೆಳವಣಿಗೆ ಸಣ್ಣ ನಗರಗಳಲ್ಲಿ ಆಗುತ್ತಿದೆಯೇ ವಿನಃ ಬೆಂಗಳೂರು, ದೆಹಲಿ ಮೊದಲಾದ ಭಾಗದಲ್ಲಿ ಸಹಕಾರಿ ಸೂತ್ರದ ಮಾಲ್‌ಗ‌ಳು ಬರುತ್ತಲೇ ಇಲ್ಲ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲು ಇದು ಸಕಾಲ!

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next