Advertisement
ನಗರದಲ್ಲಿ ಕೊರೊನಾ ಹಾಗೂ ಕಾಲರಾ ರೋಗದ ಪ್ರಕರಣಗಳು ದಾಖಲಾಗುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕರಗ ಮಹೋತ್ಸವ ಆಚರಣೆ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ಮೇಯರ್ ಎಂ.ಗೌತಮ್‌ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿ ಸದಸ್ಯರ ತುರ್ತು ಸಭೆ ನಡೆಸಲಾಯಿತು.
Related Articles
Advertisement
ದೇವಾಲಯ, ಸುತ್ತಲ ಸ್ವಚ್ಛತೆ ಪರಿಶೀಲನೆ ಇಂದು: ಮೇಯರ್ ಎಂ. ಗೌತಮ್‌ಕುಮಾರ್ ಮಾತನಾಡಿ, ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಹಾಗೂ ಕೊರೊನಾ, ಕಾಲರಾದಂತ ರೋಗಗಳಿಂದ “ಮಹೋತ್ಸವ’ಕ್ಕೆ ಅಡ್ಡಿಯಾಗದ ರೀತಿಯಲ್ಲಿ ಮುಂಜಾಗ್ರತೆ ವಹಿಸಲಾಗುವುದು.
ಕರಗ ಭಾವನಾತ್ಮಕ ವಿಚಾರವಾಗಿದ್ದು, ಸುರಕ್ಷತೆಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ. ಈ ಸಂಬಂಧ ಗುರುವಾರ (ಮಾ.12) ಬೆಳಗ್ಗೆ 7 ಗಂಟೆಗೆ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ ಹಾಗೂ ಕರಗ ಮಹೋತ್ಸವ ಸಾಗುವ ಹಾದಿಯ ಪರಿಶೀಲನೆ ಮಾಡಲಾಗುವುದು ಈ ರಸ್ತೆಗಳಲ್ಲಿ ಕಸ, ರಸ್ತೆಗುಂಡಿ, ಒಳಚರಂಡಿ ನೀರು ಸೋರಿಕೆ ಸೇರಿ ಯಾವುದಾರು ಸಮಸ್ಯೆಗಳಿದ್ದರೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಸಂದರ್ಭ ನೋಡಿಕೊಂಡು ಮಹೋತ್ಸವದ ಮೆರವಣಿಗೆಗೆ ಯೋಜನೆ ರೂಪಿಸಲಾಗುವುದು. ಕೊರೊನಾ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾದರೆ ಅಥವಾ ಪರಿಸ್ಥಿತಿ ಕೈಮೀರಿದರೆ ಮೋಹತ್ಸವವನ್ನು ದೇವಸ್ಥಾನದ ಆವರಣಕ್ಕೆ ಸೀಮಿತಗೊಳಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಕೊರೊನಾಗೆ ಔಷಧ ಇದೆ!: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಭೆ ಸಮಾರಂಭಗಳನ್ನು ಮುಂದೂಡುವಂತೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸೂಚಿಸಿದೆ. ಈ ಮಧ್ಯೆ ಕರಗ ಮಹೋತ್ಸವ ಆಚರಣೆಯ ಸಿದ್ಧತೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್, ಕೊರೊನಾ ವೈರಸ್ ಏನು ವಿಶೇಷವಲ್ಲ.
ಕೇರಳದಲ್ಲಿ ಕೊರೊನಾ ಸೋಂಕಿತ ಮಹಿಳೆ ಈಗಾಗಲೇ ಗುಣಮುಖರಾಗಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಯಾವುದೇ ತೊಂದರೆ ಇಲ್ಲ. ಕೊರೊನಾ ವೈರಸ್‌ಗೆ ಔಷಧ ಇದೆ ಎಂದು ಹೇಳಿ ಅಚ್ಚರಿ ಮೂಡಿಸಿದರು. ಇದಕ್ಕೆ ಪತ್ರಕರ್ತರು ಔಷಧ ಯಾವುದು ಹೇಳಿ ಎಂದು ಪ್ರಶ್ನಿಸಿದಾಗ, ನಾನು ಹೇಳಿದ್ದು ಆ ರೀತಿ ಅಲ್ಲ ಎಂದು ನುಣುಚಿಕೊಂಡರು.