ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಂದು ನಂಬಿಸಿ ಸಾರ್ವಜನಿಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಹಣ ದೋಚುತ್ತಿದ್ದ ವಂಚಕನನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗಾಲ್ಯಾಂಡ್ ಮೂಲದ ಜಾನ್ ಖಜಿಚೆ (24) ಬಂಧಿತ ಆರೋಪಿ.
ನಗರದ ಈಜಿಪುರದಲ್ಲಿ ವಾಸವಿರುವ ಆರೋಪಿ ಜಾನ್, ಅಪರಿಚಿತ ಫೋನ್ ನಂಬರ್‌ಗಳಿಗೆ ಕರೆ ಮಾಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ನಿಮ್ಮ ಈ ವರ್ಷದ ಆದಾಯ ತೆರಿಗೆಯನ್ನು ಅಪ್‌ಡೆಟ್ ಮಾಡಬೇಕಿದೆ. ನಾನು ಕೆಲವು ಲಿಂಕ್‌ಗಳನ್ನು ಮೆಸೇಜ್ ಮಾಡುತ್ತೇನೆ ಅದನ್ನು ಕ್ಲಿಕ್ ಮಾಡಬೇಕು ಎಂದು ನಂಬಿಸುತ್ತಿದ್ದ.
ಗ್ರಾಹಕರು ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಅವರ ಮೊಬೈಲ್‌ಗೆ ಬರುತ್ತಿದ್ದ ಸಂದೇಶ ಇವನಿಗೂ ಲಭ್ಯವಾಗುತ್ತಿತ್ತು. ಆ ಮಾಹಿತಿ ಆಧರಿಸಿ ಒಟಿಪಿ ಪಡೆದು, ಕೆಲವೇ ಕ್ಷಣಗಳಲ್ಲಿ ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ. ಬನ್ನೇರುಘಟ್ಟ ರಸ್ತೆಯ ನೊಬೊ ನಗರದ ನಿವಾಸಿಯೊಬ್ಬರಿಗೆ ಕರೆ ಮಾಡಿ ಆನ್‌ಲೈನ್ ವಂಚನೆ ಮಾಡಿದ ಕುರಿತು ದಾಖಲಾದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಪಿಯುಸಿ ವಿಧ್ಯಾಭ್ಯಾಸ ಮಾಡಿರುವ ಜಾನ್, ಹಿಂದಿ, ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾನೆ. ಆತನ ಸಹಚರರರ ಜತೆ ಸೇರಿ ಆನ್‌ಲೈನ್ ವಂಚನೆಗಿಳಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜತೆಗೆ, ಇದೇ ಪ್ರಕರಣದಲ್ಲಿ ಮತ್ತೂಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಡಿಜಿಪಿ ಖಾತೆಗೆ ಕನ್ನ ಹಾಕಿದ್ದವನ ಬಂಧನ: ಕಳೆದ ಅಕ್ಟೋಬರ್‌ನಲ್ಲಿ ರಾಜ್ಯಗುಪ್ತಚರ ದಳದ ಡಿಜಿಪಿ ಎಂ.ಎಂ.ಪ್ರಸಾದ್ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ ಕೋಲ್ಕತಾ ಮೂಲದ ಕಿಶೋರ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್ ಆಗಿರುವ ಆರೋಪಿ, ಹಲವರನ್ನು ವಂಚಿಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸೈಬರ್ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಅಕ್ಟೋಬರ್ 15ರಂದು ಡಿಜಿಪಿ ಎಂ.ಎಂ.ಪ್ರಸಾದ್ ಅವರಿಗೆ ದೂರವಾಣಿ ಕರೆ ಮಾಡಿದ್ದ ಆರೋಪಿ ಕಿಶೋರ್, “ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದಿಂದ ಮಾತನಾಡುತ್ತಿದ್ದೇನೆ. ನಿಮ್ಮ ಎಸ್‌ಬಿಐ ಖಾತೆಯ ಬ್ಯಾಂಕ್ ಡೆಬಿಟ್ ಕಾರ್ಡ್ ಅವಧಿ ಮುಗಿದಿದ್ದು, ನವೀಕರಣ ಮಾಡಬೇಕಿದೆ’ ಎಂದಿದ್ದ. ಬಳಿಕ ಮತ್ತೂಂದು ಸಂಖ್ಯೆಯಿಂದ ಕರೆ ಮಾಡಿ ಕೆನರಾ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ ಕೂಡ ನವೀಕರಿಸಬೇಕು ಎಂದು ಹೇಳಿ ಎಸ್‌ಎಂಎಸ್ ಕಳುಹಿಸುವುದಾಗಿ ತಿಳಿಸಿದ್ದ.
ಆರೋಪಿ ಡೆಬಿಟ್ ಕಾರ್ಡ್ ಸಂಖ್ಯೆಗಳನ್ನು ಖಚಿತವಾಗಿ ಹೇಳಿದ್ದರಿಂದ ಆತನನ್ನು ನಂಬಿದ ಡಿಜಿಪಿ, ಕಾರ್ಡ್‌ಗಳ ವಿವರವನ್ನು ಪುನಃ ಮೆಸೇಜ್ ಮಾಡಿದ್ದರು. ಈ ಮಾಹಿತಿ ಪಡೆದ ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂ.ಗಳನ್ನು ಆರೋಪಿ ವರ್ಗಾವಣೆ ಮಾಡಿಕೊಂಡಿದ್ದ.